ಮಂಗಳೂರು: ಟೀಕೆ, ಪ್ರತಿಭಟನೆ, ಹಿಂಸೆ, ಗೋಲಿಬಾರ್ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ್ದ ಮಂಗಳೂರಿನಲ್ಲಿ ಸೋಮವಾರ ಜನರು ಪೌರತ್ವ ತಿದ್ದುಪಡಿ ಕಾಯ್ದೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು. ಕಾಯ್ದೆ ಬಗ್ಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ನಗರದ ಬಂಗ್ರಕೂಳೂರು ಮೈದಾನದಲ್ಲಿ ದ.ಕ. ಜಿಲ್ಲಾ ಬಿಜೆಪಿ ಆಯೋಜಿಸಿದ ಜನಜಾಗೃತಿ ಬೃಹತ್ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿ, ಕೇಂದ್ರ ಸರ್ಕಾರದ ನಿಲುವಿಗೆ ಜೈಕಾರ ಕೂಗಿದರು. ರಕ್ಷಣಾ ಸಚಿವ ರಾಜನಾಥ ಸಿಂಗ್ ಉಪಸ್ಥಿತಿ ಬಿಜೆಪಿ ಕಾರ್ಯರ್ತರ ಹುಮ್ಮಸನ್ನು ಹೆಚ್ಚಿಸಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂತಾದವರು ವೇದಿಕೆಯಲ್ಲಿದ್ದರು. ಕೇಸರಿ ಶಾಲು, ‘ವಿ ಸಪೋರ್ಟ್ ಸಿಎಎ, ವಿ ಸಪೋರ್ಟ್ ಮೋದಿ’ ಎಂಬ ಬರಹವುಳ್ಳ ಕೇಸರಿ ಬಣ್ಣದ ಟೋಪಿ ಧರಿಸಿ, ಬಿಜೆಪಿ ಧ್ವಜ ಹಿಡಿದು ರಸ್ತೆಯಲ್ಲಿ ಸಾಗಿ ಬಂದವರಲ್ಲಿ ಶೇ.80 ಯುವ ಸಮುದಾಯದವರಿದ್ದರು.
ಮಹಿಳೆಯರು ಕೂಡ ಭಾಗವಹಿಸಿ ಕಾಯ್ದೆಗೆ ಬೆಂಬಲ ಸೂಚಿಸಿದರು. ಸಮಾವೇಶದಲ್ಲಿ ವಿದ್ಯಾರ್ಥಿ ಸಮೂಹವೂ ಭಾಗವಹಿಸಿತ್ತು. ಆರಂಭದಿಂದ ಕೊನೇ ತನಕ ಭಾರತ ಮಾತೆ ಹಾಗೂ ಮೋದಿಗೆ ಜೈಕಾರ ಮುಗಿಲು ಮುಟ್ಟುವಂತಿತ್ತು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ 4-5 ಕಿ.ಮೀ. ಉದ್ದಕ್ಕೂ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸ್ ಇಲಾಖೆ ಸಂಚಾರಕ್ಕೆ ಪರ್ಯಾಯ ರಸ್ತೆ ಸೂಚಿಸಿ ಆದೇಶ ಹೊರಡಿಸಿದ್ದರೂ ಗಮನಿಸದ ಮಂದಿ ಹೆದ್ದಾರಿಯಲ್ಲಿ ಸಂಚರಿಸಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ದಕ್ಷಿಣ ಕನ್ನಡ, ಉಡುಪಿ ಸೇರಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿ ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ರಕ್ಷಣಾ ಸಚಿವರು ಆಗಮಿಸಿದ ಹಿನ್ನೆಲೆ ನಗರದ ಹೊರ ವಲಯದಲ್ಲೂ ಕಟ್ಟೆಚ್ಚರ ವಹಿಸಲಾಗಿತ್ತು.
‘ಅಂಗನವಾಡಿ ಸಜ್ಜಿಗೆಯನ್ನು ಎಷ್ಟು ಬೇಕಾದರೂ ನುಂಗಿ, ಆದರೆ ದೇಶವನ್ನು ನುಂಗಲು ನಾವು ಬಿಡುವುದಿಲ್ಲ’. ‘ಕಮಿಷನರ್ ಅಂದರೆ ಹರ್ಷ ಮಂಗಳೂರಿಗರಿಗೆ ಹರುಷ’, ‘ಸಿಎಎ ಮತ್ತು ಎನ್ಆರ್ಸಿಗೆ ನನ್ನ ಬೆಂಬಲ ಬಿಸಿಲಿಗೆ ಕಪ್ಪಾಗುವ ಬಗ್ಗೆ ಚಿಂತೆ ಯಾಕೆ? ಮಿಣಿ ಮಿಣಿ ಪೌಡರ್ ಬಳಸಿ’ ಮೊದಲಾದ ಘೊಷಣೆಗಳ ನಾಮಫಲಕ ಹಿಡಿದು ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಕಾಂಗ್ರೆಸ್-ಜೆಡಿಎಸ್ ವಿರುದ್ಧದ ಹಲವು ಘೊಷಣೆಗಳು ಸಮಾವೇಶದಲ್ಲಿ ಕೇಳಿ ಬಂದವು.
ಮುಸ್ಲಿಮರಿಗೆ ಭಯ ಬೇಡ
ಪೌರತ್ವ ಕಾಯ್ದೆ ಬಗ್ಗೆ ಭಾರತದ ಮುಸ್ಲಿಮರು ಭಯಪಡುವ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಯಿಂದ ದೇಶದಲ್ಲಿರುವ ಒಬ್ಬನೇ ಒಬ್ಬ ಮುಸ್ಲಿಂ ಹೊರಗೆ ಹೋಗುವಂತಾದರೆ, ಅವರ ಜತೆ ಹೋರಾಟಕ್ಕೆ ಬಿಜೆಪಿ ಕೈಜೋಡಿಸಲಿದೆ. ಪ್ರಧಾನಿ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದರು.
ಆಡಳಿತದಲ್ಲಿ ಹುಳುಕು ಪತ್ತೆಹಚ್ಚಲು ವಿಫಲವಾದ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಮುಸ್ಲಿಮರನ್ನು ಆಡಳಿತ ಪಕ್ಷದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದೆ ಎಂದವರು ಆರೋಪಿಸಿದರು. ಕೇಂದ್ರ ಸರ್ಕಾರ ರಾಷ್ಟ್ರಧರ್ಮವನ್ನು ಪಾಲಿಸುತ್ತಿರುವಾಗ ವಿಪಕ್ಷಗಳು ವಿಪಕ್ಷ ಧರ್ಮ ಪಾಲಿಸಬೇಕು. ದೇಶದ ವಿಚಾರದಲ್ಲಿ ವಿಪಕ್ಷಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.