More

  ಸಿಎಎ, ಆರ್ಥಿಕ ಅರಾಜಕತೆ ವಿರುದ್ಧ ಜೆಡಿಎಸ್​ಹೋರಾಟ

  ಬೆಂಗಳೂರು: ದೇಶದಲ್ಲಿ ಅಘೋಷಿತ ಆರ್ಥಿಕ ಅರಾಜಕತೆ ತಲೆದೋರಿದ್ದು, ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿ ವಿರುದ್ಧ ಹೋರಾಟ ಸೇರಿ 3 ಪ್ರಮುಖ ನಿರ್ಣಯ ಜೆಡಿಎಸ್ ಸಮಾವೇಶದಲ್ಲಿ ಕೈಗೊಳ್ಳಲಾಯಿತು.

  ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯದಲ್ಲಿ ಉಂಟಾಗಿರುವ ಬೆಳೆ ನಷ್ಟ ಪರಿಹಾರ 5 ಸಾವಿರ ಕೋಟಿ ರೂ.ಗಳನ್ನು 15 ದಿನಗಳ ಒಳಗಾಗಿ ಬಿಡುಗಡೆ ಮಾಡಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂಬ ಠರಾವುಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಅಂಗೀಕರಿಸಲಾಯಿತು.

  ಸಮಾವೇಶ ಉದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡ, ಬಿಜೆಪಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲು ಹೊರಟಿದೆ. ದೇಶದಲ್ಲಿ ಸುಮಾರು 45 ಕೋಟಿ ಮುಸ್ಲಿಮರಿದ್ದಾರೆ. ಅವರನ್ನೆಲ್ಲ ಎಲ್ಲಿಗೆ ಕಳಿಸುತ್ತಾರೆ? ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು. ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಸದಸ್ಯರನ್ನು ಹೊರಗೆ ಕಳುಹಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಪಾಸು ಮಾಡಿಕೊಂಡರು. ಮೋದಿ ಅಧಿಕಾರಕ್ಕೆ ಬಂದಮೇಲೆ ಜನಸಂಘದ ಅಜೆಂಡಾ ಜಾರಿಗೊಳಿಸುತ್ತಿದ್ದಾರೆ. 70 ವರ್ಷಗಳ ಹಿಂದಿನ ಅಜೆಂಡಾ ಈಗ ಈಡೇರಿಸಿದ್ದಾರೆ ಎಂದ ಅವರು, ಈ ದೇಶಕ್ಕೆ ದೊಡ್ಡ ಗಂಡಾಂತರ ಬಂದಿದೆ. ಅದರ ವಿರುಧ್ಧ ಹೋರಾಟ ಮಾಡಬೇಕು. ನಮ್ಮನ್ನು ಜೈಲಿಗೆ ಹಾಕಿದ್ರು ಹೆದರದೆ ಹೋರಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

  ಕನಕಪುರಕ್ಕೂ ಕಲ್ಲಡ್ಕಗೂ ಏನು ಸಂಬಂಧ?

  ಸಮಾಜದಲ್ಲಿ ರಕ್ತ ಹರಿಸಬೇಕು. ಅದರ ಮೇಲೆ ರಾಜಕೀಯ ಮಾಡಬೇಕು. ಅದೇ ಬಿಜೆಪಿಯವರ ಕೆಲಸ. ಮಂಗಳೂರಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತಾರೆ. ಕನಕಪುರಕ್ಕೂ ಕಲ್ಲಡ್ಕ ಪ್ರಭಾಕರ್ ಭಟ್ಟರಿಗೂ ಏನು ಸಂಬಂಧ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಣಕಿದರು. ಅಮಿತ್ ಷಾ ರಾಜ್ಯಕ್ಕೆ ಬಂದಾಗ ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇಂತಹ ವ್ಯಕ್ತಿಗಳನ್ನು, ಪಕ್ಷಗಳನ್ನು ಇನ್ನೆಷ್ಟು ದಿನ ಜಾತಿ ಹೆಸರಲ್ಲಿ ಬೆಂಬಲಿಸುತ್ತೀರಾ? ಲಿಂಗಾಯತ ಸಮಾಜ ನನ್ನನ್ನು ಕೈಬಿಡುತ್ತಾ ಎಂದು ಯಡಿಯೂರಪ್ಪ ಕೇಳುತ್ತಾರೆ. ನಿಮ್ಮ ಯೋಗ್ಯತೆಗೆ ರೈತರ ಸಾಲ ವಸೂಲಿಗೆ ಆದೇಶ ಹೊರಡಿಸಿದ್ದೀರಿ. ಈ ರೀತಿ ಮಾಡಿದರೆ ಬಸವಣ್ಣ ಮೆಚ್ಚುವನೆ ಎಂದರು. ನಾನು ಯಾರ ಮನೆಗೂ ಅಧಿಕಾರಕ್ಕಾಗಿ ಹೋಗಿಲ್ಲ. ಕಾಂಗ್ರೆಸ್​ನವರು ನನ್ನ ಮನೆಗೆ ಬಂದಿದ್ದರು. ಯಡಿಯೂರಪ್ಪ ಜೆಡಿಎಸ್​ಗೆ ಬರಲು ಸಿದ್ಧರಾಗಿದ್ದರು. ಶೋಭಾ ಕರಂದ್ಲಾಜೆ, ರಾಮಚಂದ್ರೇಗೌಡ ಬಂದು ಅರ್ಜಿ ಹಾಕಿದ್ದರು. ಹೇಳಿ ಮಹತಾಯಿ ಶೋಭಾ ಅವರೇ ನೀವು ಬಂದಿದ್ದು ನಿಜವೊ? ಸುಳ್ಳೊ? ಎಂದು ವಾಗ್ದಾಳಿ ನಡೆಸಿದರು.

  ಫೆ.10-11 ರಾಷ್ಟ್ರೀಯ ಕಾರ್ಯಕಾರಿಣಿ

  ಫೆಬ್ರವರಿ 10 ಮತ್ತು 11 ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಫೆಬ್ರವರಿ ಮೊದಲ ವಾರ ಮಹಿಳೆಯರ ಸಮಾವೇಶ ಮಾಡುತ್ತೇವೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.

  ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಉಪಚುನಾವಣೆಯಲ್ಲಿ ಎಲ್ಲೆಡೆ ಸೋಲಾಗಿದೆ. ಜೆಡಿಎಸ್ ಮುಳುಗೇ ಹೋಯಿತು ಎಂದು ಕೆಲವರು ಬಾವಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷ ಉಳಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ. ಬೆಳಗಾವಿಯಿಂದ ಹುಣಸೂರುವರೆಗೂ ಮತ್ತೊಮ್ಮೆ ಪ್ರವಾಸ ಮಾಡಿ ಪಕ್ಷ ಕಟ್ಟುತ್ತೇವೆ.

  | ಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts