ಹಾಸನ: ಸಿಎಎ ಬೇಡ ಎಂದು ಜನರು ಬೀದಿಗಿಳಿದಿದ್ದರೂ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದ 35ನೇ ವಾರ್ಡ್ ನಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾತಿ, ಧರ್ಮಗಳಾಗಿ ದೇಶವನ್ನು ವಿಭಾಗ ಮಾಡಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿಶ್ ಶಾ ಹೊರಟು ನಿಂತಿದ್ದಾರೆ ಎಂದು ಕಿಡಿ ಕಾರಿದರು. ಈ ನಡೆ ಸಲ್ಲದು, ದೇಶದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆ ಹೊರತು ದೇಶ ಒಡೆಯೋ ಕೆಲಸ ಮಾಡಬಾರದು. ಎಲ್ಲರನ್ನೂ ಒಟ್ಟಾಗಿಸಿ ದೇಶ ಅಭಿವೃದ್ಧಿ ಮಾಡಲಿ. ಈಗಾಗಲೇ ದೇಶದ ಜಿಡಿಪಿ ಕುಸಿದಿದೆ, ನಿಮ್ಮ ಅಹಂ ನಿರ್ಧಾರ ಮುಂದಿನ ದಿನಗಳಲ್ಲಿ ಪೆಟ್ಟು ನೀಡಲಿದೆ ಎಂದು ಎಚ್ಚರಿಸಿದರು.
ಬಜೆಟ್ ಅಧಿವೇಶನದಲ್ಲಿ ನಾವು ಈ ಬಗ್ಗೆ ಮಾತ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ವಿಪಕ್ಷಗಳೆಲ್ಲ ಒಟ್ಟಾಗಿದ್ದೇವೆ ಎಂದರು. ರಾಜ್ಯದ ಒಬ್ಬರೇ ಒಬ್ಬ ಸಂಸದರನ್ನು 14 ನೇ ಹಣಕಾಸು ಸಮಿತಿಗೆ ಸೇರಿಸಿಕೊಂಡಿಲ್ಲ. ಅನೇಕ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸಿಎಂ ಕೂಡಲೇ ಪ್ರಧಾನಿ ಬಳಿಗೆ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಿ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿಯವರಿಗೆ ಸರ್ಕಾರ ಬೇಕಿತ್ತು, ಕಳೆದ 6 ತಿಂಗಳಿಂದ ಏನು ಕಾರ್ಯಕ್ರಮ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರವನ್ನು ತಾರತಮ್ಯ ಮಾಡಿ ಬೇಕಾಬಿಟ್ಟಿ ಹಂಚುತ್ತಿದ್ದಾರೆ. ಅವರ ಪಕ್ಷದವರಿಗೂ ಹಂಚಿದ್ದಾರೆ ಎಂದು ಕಿಡಿ ಕಾರಿದರು. ಲೋಕಸಭೆ ಚುನಾವಣೆ ವೇಳೆ ಸುಳ್ಳು ಅಫಿಡವಿಟ್ ಆರೋಪದ ವಿಚಾರಣೆ ನಡೆಯುತ್ತಿದೆ. ಅದರಿಂದ ಏನೂ ಆಗೋದಿಲ್ಲ, ಅಂತೆ ಕಂತೆ ಸುಳ್ಳಿನಿಂದ ಕೂಡಿದ ಆರೋಪವದು, ನಾನೀಗ ಹಳೆ ಎಂಪಿ ಆಗಿದ್ದೇನೆ ಎಂದರು. ಮೂರು ತಿಂಗಳಿಗೆ ಓಡಿಸುವೆ ಎಂದವರು ಇಂದು ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಎ.ಮಂಜು ಅವರನ್ನು ಲೇವಡಿ ಮಾಡಿದರು.
ಹಾಸನಕ್ಕೆ ನಾನೇ ಸಿಎಂ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರ ಅವರು, ಶಾಸಕರು ಅವರ ವಯಸ್ಸು ಮೀರಿ ಮಾತನಾಡುತ್ತಿದ್ದಾರೆ, ಇದು ಒಳ್ಳೆಯದಲ್ಲ. ಸಿಎಂ ಹುದ್ದೆ ದೊಡ್ಡ ಹುದ್ದೆ, ಹಿರಿಯರು, ಕಿರಿಯರು ಎಂಬ ಗೌರವ ತಿಳಿದು ಮಾತನಾಡಲಿ ಎಂದರು.