ಸಿ-ವಿಜಿಲ್ ಆ್ಯಪ್‌ಗೆ ಬೇಕಿದೆ ಜನಸ್ಪಂದನೆ

>

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ

ನಾಗರಿಕರನ್ನೇ ನೀತಿ ಸಂಹಿತೆಯ ಕಣ್ಗಾವಲನ್ನಾಗಿಸುವ ಚುನಾವಣಾ ಆಯೋಗದ ಮಹತ್ವಾಕಾಂಕ್ಷೆಯ ಸಿ-ವಿಜಿಲ್ ಆ್ಯಪ್‌ಗೆ ಕಾಪು ಕ್ಷೇತ್ರದಲ್ಲಿ ಈವರೆಗೆ ಎರಡು ದೂರುಗಳು ಮಾತ್ರ ದಾಖಲಾಗಿವೆ.

ಈ ಎರಡೂ ದೂರುಗಳ ವಿರುದ್ಧ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡು ವಿಲೇವಾರಿಗೊಳಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಡದ ದೂರೊಂದು ಸ್ವೀಕೃತವಾಗಿದ್ದು, ಅದನ್ನು ಅಲ್ಲಿಗೆ ರವಾನಿಸಲಾಗಿದೆ. ಜತೆಗೆ ಕಂಟ್ರೋಲ್ ರೂಂಗೂ ಯಾವುದೇ ದೂರುಗಳು ಬಂದಿಲ್ಲ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದೂರನ್ನು ಜಿಪಿಎಸ್ ಆಧಾರಿತ ಸಿ ವಿಜಿಲ್ ಆ್ಯಪ್‌ನಲ್ಲಿ ಸಲ್ಲಿಸಬಹುದು. ಆ ದೂರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಪ್ಲೇಂಟ್ ಮಾನಿಟರಿಂಗ್ ಕೇಂದ್ರಕ್ಕೆ ಹೋಗಿ ಅಲ್ಲಿಂದ ಪ್ರಕರಣ ದಾಖಲಾದ ಸ್ಥಳಕ್ಕೆ ಸಮೀಪವಿರುವ ಫ್ಲೈಯಿಂಗ್ ಸ್ಕ್ವ್ಯಾಡ್ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ 9 ಫ್ಲೈಯಿಂಗ್ ಸ್ಕ್ವ್ಯಾಡ್, 3 ಸಟ್ಯೆಾಟಜಿಕ್ ಸರ್ವೇಲೆನ್ಸ್ ಹಾಗೂ 3 ವೀಡಿಯೋ ಸರ್ವೇಲೆನ್ಸ್ ತಂಡಗಳಿವೆ. ಅನಾಮಧೇಯವಾಗಿಯೂ ದೂರು ನೀಡುವ ಅವಕಾಶ ಇದರಲ್ಲಿದೆ. ಸ್ಟೇಟಸ್ ಟ್ರ್ಯಾಕ್ ಕೂಡ ಮಾಡಬಹುದಾಗಿದೆ. ಅದಾಗ್ಯೂ ನಾಗರಿಕರು ಈ ಬಗ್ಗೆ ಆಸಕ್ತಿ ತೋರಿಲ್ಲ.

ಟೆಕ್ಸ್ಟ್ ಮೆಸೇಜ್‌ಗೆ ಅವಕಾಶ ಬೇಕಿತ್ತು: ಪ್ರಸ್ತುತ ಆ್ಯಪ್‌ನಲ್ಲಿ ಜಿಪಿಎಸ್ ನಿಖರಣೆ ಬಳಿಕ ಫೋಟೊ ಮತ್ತು ವೀಡಿಯೋ ಲೈವ್ ಅಪ್ಲೋಡ್ ಮಾಡಬೇಕಿದೆ. ಕೆಲವೊಂದು ಸಂದರ್ಭ ನೇರವಾಗಿ ಅಕ್ರಮಗಳ ಫೋಟೋ ಕ್ಲಿಕ್ಕಿಸುವುದು ಜನಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ. ಇಂಟರ್‌ನೆಟ್ ನೆಟ್‌ವರ್ಕ್ ಸಮಸ್ಯೆಯೂ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಜಿಪಿಎಸ್ ನಿಖರಣೆಯೊಂದಿಗೆ ಟೆಕ್ಸ್ಟ್ ಮೆಸೇಜ್‌ಗೆ ಅವಕಾಶ ನೀಡಿದ್ದರೆ ಆ್ಯಪ್ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು ಬಳಕೆದಾರರ ಅಭಿಪ್ರಾಯ. ಗ್ರಾಪಂಗಳಲ್ಲಿ ಆ್ಯಪ್ ಬಗ್ಗೆ ಓರ್ವ ಅಧಿಕಾರಿಗೆ ತರಬೇತಿ ನೀಡಿ ಅವರು ಜನರಿಗೆ ಮಾಹಿತಿ ನೀಡುವಂತಾಗಿದ್ದರೆ ಅನುಕೂಲವಾಗುತ್ತಿತ್ತು. ಹಾಗೆಯೇ ಜನರು 1950 ಸಹಾಯವಾಣಿ, ಕಂಟ್ರೋಲ್ ರೂಂಗೆ ಕರೆ ಮಾಡಬಹುದಾಗಿದೆ.

ಸಹಾಯವಾಣಿಯಲ್ಲಿ ಮಾಹಿತಿ ಕೊರತೆ: ಬೈಂದೂರು, ಉಡುಪಿ ಜಿಲ್ಲೆಯಲ್ಲಿದ್ದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೊಳಪಡುತ್ತದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ನೀಡಲು 1950 ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದರೆ ಅಲ್ಲಿನ ಅಧಿಕೃತರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಅಧಿಕೃತ ಮೊಬೈಲ್ ಸಂಖ್ಯೆಯಾಗಲಿ, ದೂರವಾಣಿ ಸಂಖ್ಯೆ ಮಾಹಿತಿಯಾಗಲಿ ಇಲ್ಲ. ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇಡೀ ರಾಜ್ಯದ ಜಿಲ್ಲಾಧಿಕಾರಿಗಳ, ಅಧಿಕಾರಿಗಳ ಫೋನ್ ಸಂಖ್ಯೆಯೊಂದಿಗೆ ಮಾಹಿತಿ ಇದ್ದು, ಇದನ್ನು ಸಹಾಯವಾಣಿ ಅಧಿಕಾರಿಗಳು ಸಿದ್ಧವಾಗಿಟ್ಟುಕೊಳ್ಳುವುದು ಅಗತ್ಯ.

ಸಿ ವಿಜಿಲ್ ಆ್ಯಪ್‌ನಲ್ಲಿ ದೂರು ನೀಡಿದರೆ 100 ನಿಮಿಷದೊಳಗೆ ಕ್ರಮವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಆಸಕ್ತಿ ವಹಿಸಿ ನ್ಯಾಯಸಮ್ಮತ ಚುನಾವಣೆ ನಡೆಯುವಲ್ಲಿ ಸಹಕರಿಸಬೇಕಿದೆ. ಗಂಭೀರ ಪ್ರಕರಣಗಳಲ್ಲಿ ನೇರವಾಗಿ ಫೋಟೋ ತೆಗೆಯಲು ಸಾಧ್ಯವಾಗದಿದ್ದಾಗ ಜಿಪಿಎಸ್ ಲೊಕೇಶನ್‌ಗಾಗಿ ಹತ್ತಿರದ ಸ್ಥಳದಲ್ಲಿ ಫೋಟೋ ತೆಗೆದು ಕಳುಹಿಸಿದರೂ ಕೂಡಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಫೋಟೊ ಸರಿಯಿಲ್ಲ ಎಂಬ ಕಾರಣಕ್ಕೆ ದೂರನ್ನು ತಿರಸ್ಕರಿಸುವುದಿಲ್ಲ.
ನಾಗರಾಜ್, ಸಹಾಯಕ ಚುನಾವಣಾಧಿಕಾರಿ, ಕಾಪು 

Leave a Reply

Your email address will not be published. Required fields are marked *