ನಾವೇನು ತಪಸ್ಸಿಗೆ ಕುಳಿತಿಲ್ಲ, ನಾವು ಕೂಡಾ ರಾಜೀನಾಮೆ ನೀಡಿರುವ ಶಾಸಕರ ಸಂದರ್ಭದ ಲಾಭ ಪಡೆಯುತ್ತಿದ್ದೇವೆ: ಸಿ.ಟಿ.ರವಿ

ಬೆಂಗಳೂರು: ನಾವೇನು ತಪಸ್ಸಿಗೆ ಕುಳಿತಿಲ್ಲ. ನಾವು ಕೂಡಾ ರಾಜೀನಾಮೆ ನೀಡಿರುವ ಶಾಸಕರ ಸಂದರ್ಭದ ಲಾಭ ಪಡೆಯುತ್ತಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಪರೋಕ್ಷವಾಗಿ ಆಪರೇಷನ್ ಕಮಲವನ್ನು ಒಪ್ಪಿಕೊಂಡಿದ್ದಾರೆ.

ದೋಸ್ತಿ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಅವರ ಇತಿಮಿತಿಯಲ್ಲಿ ಮಧ್ಯ ಪ್ರವೇಶಿಸಬಹುದಾಗಿದೆ. ಹಾಗೆಯೇ ಸ್ಪೀಕರ್​ ಅವರು ಕೂಡ ಸಂವಿಧಾನದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ನಮ್ಮ ಬಗ್ಗೆ ಸಿದ್ದರಾಮಯ್ಯನವರ ಆರೋಪ ಇವತ್ತಿಂದಲ್ಲ. ಕೆಲವರಿಗೆ ಕಾಯಿಲೆ ಇರುತ್ತೆ. ಕನಸಲ್ಲೂ ತಡಬಡಾಯಿಸುತ್ತಿರುತ್ತಾರೆ. ಅದು ಅವರಿಗೆ ಅಂಟಿಕೊಂಡಿದೆ. ನಾವು ಸಾಂವಿಧಾನಿಕ ಮಾರ್ಗದಲ್ಲಿ ಮುಂದುವರಿಯುತ್ತೇವೆ. ನಮ್ಮ ಪಾರ್ಟಿಯ ನಾಯಕರು ಯಾವ ಪಕ್ಷದವರನ್ನು ಭೇಟಿ ಮಾಡುವ ಅವಕಾಶವಿದೆ. ನಾವೇನು ತಪಸ್ಸಿಗೆ ಕುಳಿತಿಲ್ಲ. ಸಂದರ್ಭದ ಲಾಭ ಪಡದೇ ಪಡೆಯುತ್ತೇವೆ. ನಾವು ಕೂಡಾ ರಾಜೀನಾಮೆ ನೀಡಿರುವ ಶಾಸಕರ ಸಂದರ್ಭದ ಲಾಭ ಪಡೆಯುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)