ಬೆಂಗಳೂರು:
ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರೇ ಆಯ್ಕೆಯಾಗುವುದು ಖಚಿತ. ೆ.12ಕ್ಕೆ ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ 100 ಕ್ಕೂ ಹೆಚ್ಚು ಜನರು ಸಭೆ ಮಾಡಲಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಮ್ಮ ಜೊತೆಗೆ 65 ಜನರ ತಂಡ ಇದೆ. ಚುನಾವಣೆಗೆ ಸ್ಫರ್ಧೆ ಮಾಡಿದವರನ್ನು ಕರೆದು ಮಾತನಾಡುತ್ತೇವೆ ಎಂದರು.
ಪಕ್ಷ ವಿರೋಧಿ ಹೇಳಿಕೆ ನೀಡಿ ನಿರಂತರವಾಗಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರನ್ನು ಉಚ್ಛಾಟನೆ ಮಾಡಬೇಕು. ಅಲ್ಲಿಯ ತನಕ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ನಾಯಕರುಗಳು ಸೇರಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಅವರನ್ನು ಟೀಕೆ ಮಾಡೋದು ಹೈಕಮಾಂಡ್ ಟೀಕೆ ಮಾಡಿದಂತೆ ಎಂದ ಅವರು, ನಾವು ದೆಹಲಿಗೆ ಹೋಗಬೇಕು ಅಂತ ತೀರ್ಮಾನ ಮಾಡಿದ್ದೀವಿ. ಹೈಕಮಾಂಡ್ ಸಮಯ ಕೇಳ್ತಿದ್ದೀವಿ ಎಂದರು.
ಟೀಕೆ ಮಾಡುವವರು, ಇನ್ನೂ ಅಭ್ಯರ್ಥಿಯ ಹುಡುಕಾಟ ಮಾಡ್ತಿದ್ದಾರೆ. ಇವರು ದಂಡಪಿಂಡಗಳು, ಮಾನಸಿಕ ಅಸ್ವಸ್ಥರಾಗಿದ್ದಾರೆ. ಇವರು ದೆಹಲಿಯಲ್ಲಿ ಯಾರನ್ನು ಭೇಟಿಯಾಗಲ್ಲ, ಎಲ್ಲವೂ ಸುಳ್ಳು ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ್ ವಿರುದ್ದ ವಾಗ್ದಾಳಿ:
ಬಿಜೆಪಿಯಲ್ಲಿ ಭಿನ್ನಮತ ಮಾಡಿ ಸಸ್ಪೆಂಡ್ ಆಗಿ ಆಚೆಗೆ ಹೋದವರು, ಯಡಿಯೂರಪ್ಪ ಅವರ ಕೈಕಾಲು ಹಿಡಿದು ಪಕ್ಷಕ್ಕೆ ಬಂದಿದ್ದಾರೆ. ಯತ್ನಾಳ್ ಅವರೇ ನೀವು ನಿಮ್ಮ ಮೂಲ ಕ್ಷೇತ್ರ ಬಬಲೇಶ್ವರದಲ್ಲಿ ಸ್ಫರ್ಧೆ ಮಾಡೋಕೆ ಹಿಂದೇಟು ಹಾಕಿರುವುದು ಯಾಕೆ? ನೀವು ಕಾಂಗ್ರೆಸ್ ಲೀಡರ್ ಜೊತೆ ಅಡ್ಜೆಸ್ಟ್ಮೆಂಟ್ ಮಾಡ್ಕೊಂಡು ಶಾಸಕರಾಗಿರೋದಲ್ವಾ? ನಿನ್ನ ಸಂಪೂರ್ಣ ಇತಿಹಾಸ ನನ್ನ ಹತ್ರ ಇದೆ. ನಿನ್ನ ರಾಜಕೀಯವಾಗಿ ಬೆಳೆಸಿದವರು ಯಡಿಯೂರಪ್ಪ. ನೀನು ಬಸ್, ಟಿಪ್ಪರ್‌ನಲ್ಲಿ ಕೆಲಸ ಮಾಡಿದ್ದು ನನಗೆ ಗೊತ್ತಿಲ್ವಾ? ಬಸ್‌ನಲ್ಲಿ ಟಿಕೆಟ್ ಹರಿತಿದ್ದೆ. ಟಿಪ್ಪರ್ ಡ್ರೈವರ್ ಆಗಿರಲಿಲ್ಲವಾ? ನಿನಗೆ ಸಾವಿರಾರು ಕೋಟಿ, ಸಕ್ಕರೆ ಕಾರ್ಖಾನೆ ಹೇಗೆ ಬಂತು? ನಿನ್ನ ಭ್ರಷ್ಟಾಚಾರ ಹೇಗೆ ಬಂತು ಹೇಳಬೇಕಾ? ಸಿದ್ದೇಶ್ವರ ಸಂಸ್ಥೆಗೆ ಬಂದು, ಅದನ್ನು ಕಬ್ಜ ಮಾಡಿ ನಿನ್ನ ಮಗನನ್ನು ಡೊನೇಟರ್ ಎಂದು ಏಕೆ ಮಾಡಿದೆ? ನಿನ್ನ ಹೆಂಡ್ತಿ ರಾಜಕೀಯ ಮಾಡ್ತಿದ್ದಾರೆ. ನಿನ್ನ ಮಗ ರಾಜಕೀಯ ಸಭೆ ಸಮಾರಂಭಗಳಲ್ಲಿ ಏಕೆ ಬರುತ್ತಿದ್ದಾನೆ ಎಂದು ಹರಿಹಾಯ್ದರು.
ಕುಮಾರ್ ಬಂಗಾರಪ್ಪ ವಿರುದ್ದ ವಾಗ್ದಾಳಿ:
ಮಾಜಿ ಸಚಿವ ಕುಮಾರ್ ಬಂಗಾರಪ್ಪ ನೀನು ಯಾವಾಗ ಬಿಜೆಪಿಗೆ ಬಂದಿದ್ದು ಯಾವಾಗ? ಸೊರಬದಲ್ಲಿ ಸಂಘ ಪರಿವಾರ ಪಕ್ಷ ಕಟ್ಟಿದ್ದು. ಮಂಡಳ ಅಧ್ಯಕ್ಷರಿಗೆ ಪರ್ಯಾಯವಾಗಿ ಅಧ್ಯಕ್ಷರಾಗಿ ಮಾಡಿದೆ. ನಿಮ್ಮ ತಂದೆಯವರು ಬಂದಾಗ ನೀನು ಬಿಜೆಪಿಗೆ ಬಂದಾ? ನೀನು ಕಾಂಗ್ರೆಸ್‌ಗೆ ಹೊರಟಿದ್ದೆ, ನಿನ್ನ ತಮ್ಮ ಸೇರಿಸಿಕೊಳ್ಳಲಿಲ್ಲ ಎಂದು ಕೇಳಿದರು.
ಇಷ್ಟು ಮಾತನಾಡುವ ನೀನು ವಿಜಯೇಂದ್ರ ಅಧ್ಯಕ್ಷರಾದಾಗ ಪಾದಯಾತ್ರೆಯಲ್ಲಿ ಏಕೆ ಬರಲಿಲ್ಲ?
ಕಾಂಗ್ರೆಸ್ ನ ಭ್ರಷ್ಟಾಚಾರದ ವಿರುದ್ಧ ಏಕೆ ಹೋರಾಟ ಮಾಡಲಿಲ್ಲ? ನಿಮ್ಮ ನಾಟಕ ಬಂದು ಮಾಡಿ. ದೆಲ್ಲಿಗೆ ಹೋಗಿ ಬರೋದು. ಅವರನ್ನು ಭೇಟಿ ಮಾಡಿದ್ದೀವಿ, ಇವರನ್ನ ಭೇಟಿ ಮಾಡಿದ್ದೀವಿ ಅಂತ ಸುಳ್ಳು ಹೇಳೋದು. ಯಾರನ್ನಾದ್ರು ಭೇಟಿ ಮಾಡಿದ್ದೀರಾ? ಅದರ ಪೋಟೊ ಹಾಕಿ ನೋಡೋಣ ಎಂದು ಸವಾಲು ಹಾಕಿದರು.
ಹರೀಶ್ ಕರ್ಮಕಾಂಡ:
ಬಿ.ಪಿ.ಹರೀಶ್, ನೀನು ಯಡಿಯೂರಪ್ಪ ಅವರಿಂದ ಶಾಸಕರಾಗಿದ್ದ್ದು ನೆನಪಿರಲಿ. ನಿನ್ನ ಕರ್ಮಕಾಂಡ ನನಗೆ ಗೊತ್ತಿದೆ. ನಮ್ಮ ಜಗಳದಿಂದ ನಾವೇ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದು. ವಿಜಯೇಂದ್ರ ಅವರನ್ನು ಇಳಿಸಿದರೆ ಬಿಜೆಪಿಗೆ 10 ಸ್ಥಾನವೂ ಬರಲ್ಲ. ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಬೊಮ್ಮಾಯಿ, ಅಶೋಕ್ ಅವರ ಪರವಿಲ್ಲ:
ನಾವು ಹೋದರೂ ಬೊಮ್ಮಾಯಿ, ಆರ್.ಅಶೋಕ್ ಭೇಟಿಯಾಗುತ್ತಾರೆ. ಇವರೇ ಬಲವಂತವಾಗಿ ಅವರನ್ನ ಭೇಟಿಯಾಗುತ್ತಾರೆ. ಆದರೆ, ಅವರು ಭಿನ್ನರ ಪರವಾಗಿ ಇಲ್ಲ. ಕಾಂಗ್ರೆಸ್‌ನವರು ಯತ್ನಾಳ್ ಟೀಂ ಗೆ ಸುಪಾರಿ ಕೊಟ್ಟಿದೆ. ಅದಕ್ಕಾಗಿ ಪಕ್ಷದೊಳಗೆ ಭಿನ್ನಮತ ಮಾಡುತ್ತಿದ್ದಾರೆ ಅಷ್ಟೆ ಎಂದರು.
ಇವರದು ಕುಟುಂಬ ರಾಜಕಾರಣವಲ್ಲವಾ?
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಕುಟುಂಬ ರಾಜಕಾರಣ ಮಾಡುವವರು ಮತ್ತು ಎಲ್ಲಾ ಪಕ್ಷಗಳ ಜೊತೆ ಹೊಂದಾಣಿಕೆ ಮಾಡೋರು ಅಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿಯೇ 4-5 ಜನ ಇರೋರು ಬೇರೆ ಪಾರ್ಟಿಯಲ್ಲಿ ರಾಜಕಾರಣ ಮಾಡುತ್ತಿಲ್ಲವೇ? ಪಕ್ಷ ಸಂಘಟನೆಗೆ ಅವರ ಕೊಡುಗೆ ಏನು ಇಲ್ಲ. ಒಂದೇ ಕುಟುಂಬ ಅಣ್ಣ ತಮ್ಮಂದಿರು, ಮಕ್ಕಳು ಇದ್ರೆ ಕುಟುಂಬ ರಾಜಕಾರಣ ಆಗಲ್ವಾ? ಸಂಘಟನಾತ್ಮಕವಾಗಿ ಅತ್ಯಂತ ಬಲಾಡ್ಯರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ರೆ ಮಾತಾಡ್ತಾರೆ. ಬಲವಂತವಾಗಿ ಯಾರದ್ದೋ ಕೈಕಾಲು ಹಿಡಿದು ಹೈಕಮಾಂಡ್ ಭೇಟಿಗೆ ಹೊರಟಿದ್ದಾರೆ. ಇವರಿಂದ ಪಕ್ಷಕ್ಕೆ ಒಳ್ಳೆಯದು ಆಗಲ್ಲ, ಡ್ಯಾಮೇಜ್ ಜಾಸ್ತಿ. ಇವರೆಲ್ಲರೂ ಸೇರಿ ಪಕ್ಷವನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಲವರು ಮಾತ್ರ ಪಕ್ಷದ ವಿರುದ್ಧ ಕೆಲಸ ಮಾಡ್ತಿದ್ದಾರೆ. ಶೇ.98ರಷ್ಟು ಜನ ಅಧ್ಯಕ್ಷರ ಪರ ಇದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಅಧ್ಯಕ್ಷರ ವಿರುದ್ಧ ಇರೋದು. ಇದನ್ನು ಲೆಕ್ಕಕ್ಕೆ ಇಡಬೇಕಿಲ್ಲ ಎಂದರು.