ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈ ಜೋಡಿಸಿ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಜಮೀನು ಡಿನೋಟಿಫೈ ಮಾಡಲು ಕರ್ನಾಟಕ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.
ಬುಧವಾರ ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಕನ್ನಡದಲ್ಲೇ ಮಾತನಾಡಿದ ಸಂಸದರು, ಶರಾವತಿ ಸಂತ್ರಸ್ತರ ಭೂಮಿ ಹಕ್ಕು ವಿಷಯ ಕುರಿತು ಸಮಗ್ರವಾಗಿ ಬೆಳಕು ಚೆಲ್ಲಿದ ಅವರು, ಕೇಂದ್ರ ಸರ್ಕಾರದ ಸಲಹೆಯಂತೆ ಕರ್ನಾಟಕ ಸರ್ಕಾರ ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫೈ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು ಎಂದರು.
ವಾದ ಆಲಿಸಿದ ಸುಪ್ರೀಂಕೋರ್ಟ್ ಡಿ.3ರಂದು ತನ್ನ ಅಭಿಪ್ರಾಯ ತಿಳಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ವಿಷಯವನ್ನು ಸೌಹಾರ್ದಯುತವಾಗಿ ಪರಿಹಿರಿಸಿಕೊಳ್ಳಲು ಪ್ರಯತ್ನಪಡಬೇಕೆಂದು ನಿರ್ದೇಶನ ನೀಡಿದೆ. ಹೀಗಾಗಿ ನನ್ನ ಲೋಕಸಭಾ ಕ್ಷೇತ್ರದಲ್ಲಿ ಶರಾವತಿ ಜಲವಿದ್ಯುತ್ ಯೋಜನೆಯಿಂದ ಸಂತ್ರಸ್ತರಾದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಕೇಂದ್ರ ಸರ್ಕಾರದಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
1958 ರಿಂದ 1964ರ ನಡುವೆ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಯಿತು. ಸಾವಿರಾರು ಎಕರೆ ಸರ್ಕಾರಿ ಭೂಮಿ ಮತ್ತು ರೈತರ ಕೃಷಿ ಭೂಮಿ ಮುಳುಗಡೆಯಾಗಿತ್ತು. ಪರಿಹಾರದ ಭಾಗವಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನವೇ ರಾಜ್ಯ ಸರ್ಕಾರ 1958-1969 ರ ಅವಧಿಯಲ್ಲಿ 9,136 ಎಕರೆ ಅರಣ್ಯ ಪ್ರದೇಶದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿತ್ತು. ಆದರೆ ಭೂಮಿಹಕ್ಕು ನೀಡುವ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ನೀಡಲಾಗುವ ಅನೇಕ ಕಲ್ಯಾಣ ಸವಲತ್ತುಗಳನ್ನು ವಡೆಯಲು ಭೂಮಿ ಹಕ್ಕು ಸಿಗದಿರುವುದೇ ತೊಡಕಾಗಿದೆ. ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸಿಗದಂತಾಗಿದೆ. ಜೀವನ ಸಾಗಿಸಲು ಕಷ್ಟಪಡುತ್ತಿರುವ ನನ್ನ ಕ್ಷೇತ್ರದ ಈ ಸಂತ್ರಸ್ತರ ಬಗ್ಗೆ ನನಗೆ ತುಂಬಾ ದುಃಖವಿದೆ ಎಂದರು.
ರೈತರಿಗೆ ಭೂಮಿ ಹಕ್ಕು ನೀಡುವ ನಿಟ್ಟಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಶರಾವತಿ ಸಂತ್ರಸ್ತರ ಭೂಮಿ ಹಕ್ಕು ವಿಚಾರನದಲ್ಲಿ ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲು ಬಯಸತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ನನ್ನ ಮನವಿ ಪರಿಗಣಿಸಿ ಶರಾವತಿ ಸಂತ್ರಸ್ತರ ಸಮಸ್ಯೆಗೂ ಮುಕ್ತಿ ನೀಡಬೇಕೆಂದರು.
ಕೈ ಹಿಡಿದ ಮತ್ಸೃ ಸಂಪದ: ಜಿಲ್ಲೆಯಲ್ಲಿ ಇದುವರೆಗೂ ಹೊಸ ಮೀನು ಕೃಷಿ ಕೊಳ, ಮೀನುಮರಿ ಪಾಲನಾ ಕೇಂದ್ರಗಳ ನಿರ್ಮಾಣ, ಅಲಂಕಾರಿಕ ಮೀನು ಮಾರಾಟ ಮಳಿಗೆ, ಅಲಂಕಾರಿಕ ಮೀನು ಉತ್ಪಾದನಾ ಪಾಲನಾ ಘಟಕ, ಇನ್ಸುಲೇಟೆಡ್ ಮತ್ತು ದ್ವಿಚಕ್ರ ವಾಹನ ಖರೀದಿಗೆ ಒಟ್ಟು 1.79 ಕೋಟಿ ರೂ.ಸಹಾಯಧನ ನೀಡುವ ಮೂಲಕ ಮೀನುಗಾರರ ತಲಾ ಆದಾಯ ದ್ವಿಗುಣಗೊಳಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 142 ಮೀನುಗಾರರಿಗೆ ಅನುಕೂಲವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಇಲ್ಲಿನ ಮೀನುಗಾರಿಕೆ ಕ್ಷೇತ್ರ ಅಭಿವೃದ್ಧಿಪಡಿಸಿ ಸುಸ್ಥಿರ ಮೀನುಗಾರಿಕೆ, ಉತ್ಪಾದಕತೆ ಹಾಗೂ ಮೂಲಸೌಕರ್ಯ ಸುಧಾರಿಸುವಂತೆ ಕೇಂದ್ರ ಮೀನುಗಾರಿಕೆ, ಪಶು ವೈದ್ಯಕೀಯ ಹಾಗೂ ಹೈನುಗಾರಿಕೆ ಸಚಿವರಿಗೆ ಸಂಸತ್ ಅಧಿವೇಶನದ ವೇಳೆ ಮನವಿ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ,