ಬೈಪಾಸ್ ರಸ್ತೆಗೆ ಬಿಡದ ವಿಘ್ನ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಜಯಪುರ-ಗದಗ-ಬೆಂಗಳೂರು-ಕಾರವಾರ ಮಾರ್ಗಗಳನ್ನು ಜೋಡಿಸುವ ಮತ್ತೊಂದು ಬೈಪಾಸ್ ರಸ್ತೆ ಕಾಮಗಾರಿಗೆ ಸುತ್ತಿಕೊಂಡ ವಿಘ್ನಗಳಿಗೆ ಮುಕ್ತಿ ಕೊಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಇನ್ನೂ ಆಗುತ್ತಿಲ್ಲ.

ಈ ಯೋಜನೆ ಕಾಮಗಾರಿಯ ವೇಗ ಗಮನಿಸಿದರೆ ಹುಬ್ಬಳ್ಳಿ-ಧಾರವಾಡ ಮಧ್ಯೆ ನಿರ್ವಣಗೊಳ್ಳುತ್ತಿರುವ ಬಿಆರ್​ಟಿಎಸ್ ಕಾಮಗಾರಿ ನೆನಪಿಗೆ ಬಾರದೇ ಇರದು.

ಈ ನೂತನ ಬೈಪಾಸ್ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ನಗರ ಪ್ರವೇಶಿಸುವ ಹಲವಾರು ವಾಹನಗಳು ಬೈಪಾಸ್ ಮೂಲಕವೇ ವಿಜಯಪುರ, ಗದಗ, ಬೆಂಗಳೂರು ಹಾಗೂ ಕಾರವಾರ ಮಾರ್ಗಗಳನ್ನು ತಲುಪಲಿವೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಸಾಕಷ್ಟು ಕಡಿಮೆ ಯಾಗಲಿದೆ. ವಾಹನಗಳಿಗೆ ಸಾಕಷ್ಟು ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ.

ಆದರೆ ಈ ಯೋಜನೆ ಪ್ರಾರಂಭಗೊಂಡು ಒಂದು ವರ್ಷ ಗತಿಸಿದರೂ ಇನ್ನೂ ಕೆಲವೆಡೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯಂದಾಗಿ ಗದಗ ರಸ್ತೆ ಬಳಿ ಭೂಸ್ವಾಧೀನ ಕಗ್ಗಂಟಾಗುತ್ತಿದೆ. ಇಲ್ಲಿನ ರೈತರ ಮನವೊಲಿಸಿ, ಅಗತ್ಯ ಪರಿಹಾರ ನೀಡಿ ಭೂಮಿ ವಶಪಡಿಸಿಕೊಳ್ಳಲು ಮೀನಮೇಷ ಎಣಿಸಲಾಗುತ್ತಿದ್ದು, ಇದರಿಂದಾಗಿ ಸಂಪೂರ್ಣ ಯೋಜನೆಗೆ ಹಿನ್ನಡೆಯಾಗುತ್ತಿದೆ. ಒಟ್ಟು 32 ಹೆಕ್ಟೇರ್​ನಷ್ಟು ಭೂಮಿ ಸ್ವಾಧೀನವಾಗಬೇಕಿದೆ ಎಂದು ತಿಳಿದುಬಂದಿದೆ.

ಯೋಜನೆಯ ವಿವರ: ವಿಜಯಪುರ ರಸ್ತೆಯ ಕುಸುಗಲ್ಲ ಬಳಿಯಿಂದ, ಗದಗ ರಸ್ತೆಯ ರೈಲ್ವೆ ಹಳಿ ಬಳಿ, ಬೆಂಗಳೂರು ರಸ್ತೆಯ ಗಬ್ಬೂರು ಬಳಿ ಹಾಗೂ ಕಾರವಾರ ರಸ್ತೆಯ ಅಂಚಟಗೇರಿ ಬಳಿಯ ಮಾರ್ಗವನ್ನು ಈ ಬೈಪಾಸ್ ಜೋಡಿಸಲಿದೆ.

ಒಟ್ಟು 11.8 ಕಿಮೀ ಉದ್ದದ ಈ ಬೈಪಾಸ್ ಚತುಷ್ಪಥ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಜಂಟಿಯಾಗಿ ನಿರ್ವಿುಸುತ್ತಿವೆ.

ಲೋಕೋಪಯೋಗಿ ಇಲಾಖೆ ವಿಜಯಪುರ ರಸ್ತೆಯ ಕುಸುಗಲ್ ಬಳಿಯಿಂದ ಗದಗ ರಸ್ತೆಯ ರೈಲ್ವೆ ಹಳಿ ಬಳಿವರೆಗಿನ 3.8 ಕಿಮೀ ರಸ್ತೆಯನ್ನು ಸುಮಾರು 66 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿದೆ. ಬೈಪಾಸ್ ರಸ್ತೆ ನಿರ್ವಣದೊಂದಿಗೆ ಜಾನುವಾರುಗಳಿಗಾಗಿ ಕ್ಯಾಟಲ್ ಪಾಸ್, ವೆಹಿಕಲ್ ಬ್ರಿಜ್, ಎರಡ್ಮೂರು ಸಣ್ಣ ಸೇತುವೆಗಳನ್ನು ಲೋಕೋಪಯೋಗಿ ಇಲಾಖೆ ನಿರ್ವಿುಸುತ್ತಿದೆ.

ಇನ್ನುಳಿದ ಗದಗ ಮಾರ್ಗದ ರೈಲ್ವೆ ಹಳಿ ಬಳಿಯಿಂದ ಬೆಂಗಳೂರು ಹೆದ್ದಾರಿಯ ಗಬ್ಬೂರ ಬಳಿ ಮತ್ತು ಕಾರವಾರ ರಸ್ತೆಯ ಅಂಚಟಗೇರಿ ಬಳಿಯ ಒಟ್ಟು 7 ಕಿಮೀ ಉದ್ದದ ರಸ್ತೆಯನ್ನು ಸುಮಾರು 180 ಕೋಟಿ ವೆಚ್ಚದಲ್ಲಿ ಎನ್​ಎಚ್​ಎಐ ನಿರ್ವಿುಸುತ್ತಿದೆ. ಹುಬ್ಬಳ್ಳಿ-ಹಾವೇರಿ ಷಟ್ಪಥ ರಸ್ತೆ ನಿರ್ಮಾಣ ಯೋಜನೆಯಡಿಯೇ ಈ ಬೈಪಾಸ್ ನಿರ್ಮಾಣ ಕಾಮಗಾರಿಯನ್ನು ಎನ್​ಎಚ್​ಎಐ ಕೈಗೊಂಡಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಬೈಪಾಸ್ ನಿರ್ಮಾಣ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೆ ಕಾಮಗಾರಿಯ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಳವಾಗುವುದನ್ನು ತಪ್ಪಿಸಲಾಗದು.

ರಾಜ್ಯ ಸರ್ಕಾರದ ನಿರ್ಲಕ್ಷ್ಯಂದಾಗಿ ಇದುವರೆಗೂ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿಲ್ಲ. ಬಾಕಿ ಉಳಿದಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

| ಪ್ರಲ್ಹಾದ ಜೋಶಿ ಸಂಸದರು

ಕೆಲವೆಡೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯವಾಗಬೇಕಿದೆ. ಈ ಕೆಲಸವಾದಲ್ಲಿ 8-10 ತಿಂಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.

| ಕರ್ನಲ್ ಎ.ಕೆ. ಜಾನಬಾಜ್ ಜನರಲ್ ಮ್ಯಾನೇಜರ್, ಟೆಕ್ನಿಕಲ್ ಆಂಡ್ ಪ್ರಾಜೆಕ್ಟ್, ಎನ್​ಎಚ್​ಎಐ