ಕಾಡುತ್ತಿದೆ ನೀರಿನ ಸಮಸ್ಯೆ

ಬಿ. ನರಸಿಂಹ ನಾಯಕ್ ಬೈಂದೂರು

ಬೈಂದೂರು ವ್ಯಾಪ್ತಿಯ ಗ್ರಾಮೀಣ ಭಾಗಗಳನ್ನು ಹೊರತುಪಡಿಸಿದರೆ ಬಹುತೇಕ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.

ಯಡ್ತರೆ ಗ್ರಾಮದ ಗರ್ಜಿನ ಹಿತ್ಲು, ಸಾಹೇಬರ ಹಿತ್ಲು, ಗುರ್ಗಿಬೆಟ್ಟು, ಹೊಳ್ಲರಹಿತ್ಲು, ಅಂಗಡಿಹಿತ್ಲು, ಕುದ್ರಿಹಿತ್ಲು, ಕುಳ್ಳಿಹಿತ್ಲು, ಬಂಕೇಶ್ವರ ವಠಾರ, ಬೀರನಕೇರಿ ವಠಾರ, ಮಾರ್ಕೇಟ್ ಹಾಗೂ ಪೇಟೆ ವಠಾರ, ಶಿರೂರು ಗ್ರಾಮದ ಹಡವಿನಕೋಣೆ, ಕಳುಹಿತ್ಲು, ಕೆಸರಕೋಡಿ, ಕರಾವಳಿ, ದೊಂಬೆ, ಪಡುವರಿ ಗ್ರಾಮದ ಚರ್ಚ್ ರಸ್ತೆ ಮುಂತಾದ ಭಾಗಗಳಲ್ಲಿ ನೀರಿನ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ.

ಸಾಕಾರಗೊಳ್ಳದ ಬಹುಗ್ರಾಮ ಯೋಜನೆ: ಬೈಂದೂರು ಭಾಗದಲ್ಲಿ ಕುಡಿಯುವ ನೀರಿನ ಗೋಳು ನಿರಂತರ ಮುಂದುವರಿಯಲು ಶಾಶ್ವತ ಯೋಜನೆ ರೂಪಿಸದಿರುವುದು ಕಾರಣ. ಬಿಜೂರು, ಯಡ್ತರೆ, ಬೈಂದೂರು, ಪಡುವರಿ, ಶಿರೂರು ಗ್ರಾಮಗಳನ್ನು ಸೇರಿಸಿ 24 ಕೋಟಿ ರೂ. ಅನುದಾನದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರಗೆ ಅಂತಿಮ ಆದೇಶ ಬಂದಿಲ್ಲ.

ಟ್ಯಾಂಕರ್ ಮೂಲಕ ನೀರು ಪೂರೈಕೆ: ಬೈಂದೂರು, ಯಡ್ತರೆ, ಶಿರೂರುಗಳಲ್ಲಿ ಪ್ರತಿವರ್ಷವೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಯಡ್ತರೆ ಗ್ರಾಮದಲ್ಲಿ ಒಟ್ಟು 9627 ಜನಸಂಖ್ಯೆ ಇದ್ದು, ಒಂಬತ್ತು ವಾರ್ಡ್‌ಗಳಿವೆ. 2016ರಲ್ಲಿ ಕುಡಿಯುವ ನೀರಿಗಾಗಿ 49,500 ರೂ. ಹಾಗೂ 2017ರಲ್ಲಿ 56,000 ರೂ. ಜಿಲ್ಲಾಡಳಿತ ನೀಡಿದೆ. ಒಟ್ಟು ನಾಲ್ಕು ತೆರೆದ ಬಾವಿಗಳಿವೆ. ಪ್ರತಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ನಾಲ್ಕು ಕೊಳವೆ ಬಾವಿಗಳಲ್ಲಿ ಎರಡು ಮಾತ್ರ ಸುಸ್ಥಿತಿಯಲ್ಲಿದೆ. 14ನೇ ಹಣಕಾಸು ಯೋಜನೆಯಲ್ಲಿ ಕಲ್ಲಣ್ಕಿ ಬಳಿ ತೆರೆದ ಬಾವಿ ರಚಿಸಿ ಪೈಪ್‌ಲೈನ್‌ಗಾಗಿ ಅನುದಾನ ಮೀಸಲಿಡಲಾಗಿದೆ. ಆದರೆ ಸ್ಥಳೀಯರು ವಿರೋಧವ್ಯಕ್ತಪಡಿಸಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾಡಳಿತ ಮುತುವರ್ಜಿ ವಹಿಸಿದರೆ ಬೈಂದೂರಿಗೆ ಬಹುತೇಕ ನೀರು ಕಲ್ಲಣ್ಕಿ ಹೊಳೆಯಿಂದ ದೊರೆಯುತ್ತದೆ.

ಬಾವಿ ನಿರ್ವಹಣೆ ಕೊರತೆ: ಶಿರೂರು ಗ್ರಾಮ ಒಟ್ಟು 17501 ಜನಸಂಖ್ಯೆ ಹೊಂದಿದೆ. ಕಳೆದ ವರ್ಷ ಆರು ಲಕ್ಷ ರೂ. ಕುಡಿಯುವ ನೀರಿಗಾಗಿ ವ್ಯಯಿಸಿದೆ. ಕೋಣಮಕ್ಕಿಯಲ್ಲಿ ಎರಡು ತೆರೆದ ಬಾವಿಗಳಿವೆೆ. ಆದರೆ ನಿರ್ವಹಣೆ ಕೊರತೆಯಿದೆ. 3 ಕೊಳವೆ ಬಾವಿ, 3 ಓವರ್ ಟ್ಯಾಂಕ್, 28 ಸಣ್ಣ ಬೋರವೆಲ್‌ಗಳಿದ್ದರೂ ಸಹ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಿಲ್ಲ. ಒಟ್ಟು 800 ನಳ್ಳಿ ಸಂಪರ್ಕ ನೀಡಿ ಕನಿಷ್ಠ ಐವತ್ತು ರೂಪಾಯಿ ಪಂಚಾಯಿತಿ ಶುಲ್ಕ ಪಡೆಯುವ ಕ್ರಮವಿದೆ. ಬಹುತೇಕ ಕಡೆಗಳಲ್ಲಿ ಉಪ್ಪು ನೀರು ಆವೃತ್ತವಾಗಿರುವುದು ಸಮಸ್ಯೆಗೆ ಕಾರಣ. ಕೇವಲ ಪಂಚಾಯಿತಿ ಮಾತ್ರವಲ್ಲದೆ ಕೆಲವು ದಾನಿಗಳ ನೆರವಿನಿಂದಲೂ ಗ್ರಾಮದ ಕೆಲವು ವಾರ್ಡ್‌ಗಳಿಗೆ ನೀರು ನೀಡಲಾಗುತ್ತಿದೆ.

ಬೈಂದೂರು ವ್ಯಾಪ್ತಿಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಇಲ್ಲದಿರುವುದೇ ಪ್ರತಿವರ್ಷ ಕುಡಿಯುವ ನೀರಿನ ಗೋಳಿಗೆ ಕಾರಣ. ವಿಪುಲ ಅವಕಾಶಗಳಿದ್ದರೂ ಸಮರ್ಪಕವಾದ ಯೋಜನೆ ರೂಪಿಸುತ್ತಿಲ್ಲ. ಬಹುಗ್ರಾಮದಂತಹ ಯೋಜನೆ ಸಾಕಾರಗೊಂಡರೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಬಾಧಿಸುವುದಿಲ್ಲ. ತಾಲೂಕು ಕೇಂದ್ರವಾದ ಕಾರಣ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರವಾಗಿ ಶಾಶ್ವತ ಪರಿಹಾರ ಕಾಣಬೇಕಾಗಿದೆ.
| ನಿತಿನ್ ಬಿ. ಶೆಟ್ಟಿ, ಉದ್ಯಮಿ