ಪ್ರವಾಸಿ ತಾಣವಾಗಿ ಬೈಂದೂರು

ನರಸಿಂಹ ನಾಯಕ್ ಬೈಂದೂರು

ಬೈಂದೂರು ತಾಲೂಕಾಗಿ ಮಾರ್ಪಟ್ಟಿರುವುದು ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಈ ಹಿಂದಿನ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರವಾಸಿ ಸ್ಥಳ ಬೈಂದೂರು ವ್ಯಾಪ್ತಿಯಲ್ಲಿದೆ.

ಇತ್ತೀಚೆಗೆ ಬೈಂದೂರು ಪ್ರವಾಸೋದ್ಯಮ ಸ್ಥಳಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಬೆಸುಗೆ ಫೌಂಡೇಶನ್ ವತಿಯಿಂದ ಬೀಚ್ ಉತ್ಸವ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಹಲವಾರು ವರ್ಷಗಳಿಂದ ನಿಂತು ಹೋಗಿದ್ದ ಕಳುಹಿತ್ಲು ಮರ್ಗಿ ಸರ್ಧೆ ಆಯೋಜನೆ ಮೂಲಕ ಗ್ರಾಮೀಣ ಪರಂಪರೆಗಳಿಗೆ ಪುನರ್ ಚಾಲನೆ ದೊರೆತಿದೆ.

ತಾಲೂಕು ಕೇಂದ್ರ ಬೈಂದೂರು ವಿಶಾಲ ವ್ಯಾಪ್ತಿ ಹೊಂದಿದ್ದು, ಸೀಮಿತ ಗ್ರಾಮಗಳ ಸೇರ್ಪಡೆಯಿಂದಾಗಿ ಬೈಂದೂರನ್ನು ಮಾದರಿ ತಾಲೂಕು ಮಾಡುವ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ದೂರದೃಷ್ಟಿತ್ವದ ಚಿಂತನೆಯ ಯೋಜನೆ ರೂಪಿಸಬೇಕಾಗಿದೆ. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಶಂಕರ ಪೀಠ, ಕೊಡಚಾದ್ರಿ ಗುಡ್ಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾತ್ರಿಕರನ್ನು ಸೆಳೆಯುತ್ತಿದೆ. ಪ್ರತಿದಿನ ಕೇರಳ, ತಮಿಳನಾಡು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಕೊಲ್ಲೂರಿಗೆ ಆಗಮಿಸುತ್ತಾರೆ.

ಕೊಲ್ಲೂರಿಗೆ ತೆರಳಬೇಕಾದರೆ ಕೇರಳ ಹಾಗೂ ತಮಿಳುನಾಡಿನ ಪ್ರಯಾಣಿಕರು ಬೈಂದೂರು ಮೂಕಾಂಬಿಕಾ ರೈಲು ನಿಲ್ದಾಣದ ಮೂಲಕ ಸಾಗಬೇಕು. ಒಂದು ಸಾವಿರಕ್ಕೂ ಅಧಿಕ ಭಕ್ತರು ಬೈಂದೂರು ರೈಲು ಮೂಲಕ ಕೊಲ್ಲೂರಿಗೆ ಆಗಮಿಸುತ್ತಾರೆ. ಕೊಲ್ಲೂರಿನಲ್ಲಿ ಈಗಾಗಲೇ ವಸತಿಗೃಹ, ಮೂಲಸೌಕರ‌್ಯ ಸೇರಿದಂತೆ ಸೀಮಿತ ವ್ಯಾಪ್ತಿ ಹೊಂದಿದೆ. ಅಭಯಾರಣ್ಯ ವ್ಯಾಪ್ತಿ ಇರುವುದರಿಂದ ವಿಸ್ತರಣೆ ಸಾಧ್ಯವಿಲ್ಲ. ಆದರೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಹುತೇಕ ಪ್ರವಾಸಿಗರು ಬೈಂದೂರಿನಲ್ಲಿ ವಿಶ್ರಾಂತಿ ಪಡೆದು ನಂತರ ಕೊಲ್ಲೂರಿಗೆ ಪ್ರಯಾಣಿಸುತ್ತಾರೆ. ಬೈಂದೂರಿನಿಂದ ಸರ್ಕಾರಿ ಬಸ್ಸುಗಳ ಸೇವೆ ಮತ್ತು ವಾಹನ ಸೌಲಭ್ಯಗಳಿವೆ. ಯಾವ ರೀತಿ ತಿರುಪತಿ ದೇವಸ್ಥಾನಕ್ಕೆ ತಿರುಮಲ ಉಪನಗರವಾಗಿ ಮಾರ್ಪಟ್ಟಿದೆಯೋ ಅದೇ ರೀತಿ ಕೊಲ್ಲೂರಿಗೆ ಉಪನಗರವಾಗಿ ಬೈಂದೂರು ಮಾರ್ಪಡಬೇಕಾಗಿದೆ ಎಂಬುದು ಇಲ್ಲಿನ ಸಾರ್ವಜನಿಕ ಅಭಿಪ್ರಾಯವಾಗಿದೆ.

ಬೈಂದೂರಿನ ಪ್ರವಾಸಿ ಸ್ಥಳಗಳು: ಸೋಮೇಶ್ವರ ಕಡಲ ತೀರ, ವತ್ತಿನೆಣೆ ಕ್ಷಿತಿಜ ನೇಸರಧಾಮ, ಕೊಸಳ್ಳಿ ಜಲಪಾತ, ಜೋಗೂರು ಜಂಗ್ಲಿಫೀರ್ ಪಿಕ್‌ನಿಕ್ ಪಾಯಿಂಟ್, ಕಳುಹಿತ್ಲು ಸಮುದ್ರ ಕಿನಾರೆ, ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರ, ಕೊಡಚಾದ್ರಿ, ಆನೆಝರಿ, ಮರವಂತೆ, ಬೈಂದೂರು ಚರ್ಚ್‌ಗುಡ.
ನದಿಸಾಗರ ಸಂಗಮ ಪ್ರದೇಶ ಸೋಮೇಶ್ವರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಕೊಲ್ಲೂರು ಧಾರ್ಮಿಕ ಪ್ರವಾಸೋದ್ಯಮ ಸ್ಥಳವಾದರೆ ಆನೆಝುರಿ ಹಾಗೂ ಕೊಸಳ್ಳಿ, ಮರವಂತೆ ಪ್ರಾಕೃತಿಕ ವಿಶೇಷತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚರ್ಚಗುಡ್ಡ ಹಾಗೂ ಶಿಲ್ಪಕಲೆಗಳಿಂದ ಕೂಡಿದ ಶ್ರೀಸೇನೇಶ್ವರ ದೇವಸ್ಥಾನ ಐತಿಹಾಸಿಕ ಕುರುಹುಗಳನ್ನು ಹೊಂದಿದೆ.

ತಾಲೂಕಿನಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರ್ಕಾರದ ಸ್ವದೇಶ್ ದರ್ಶನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೆಸಾರ್ಟ್, ಹೋಮ್‌ಸ್ಟೇ ನಿರ್ಮಿಸುವವರಿಗೆ ಉತ್ತೇಜನ ನೀಡಲಾಗುವುದು. ಬೈಂದೂರಿನಲ್ಲಿ ಸುಮಾರು 200 ಟ್ಯಾಕ್ಸಿಗಳಿವೆ. ಇವರಿಗೆ ಪ್ರವಾಸೋದ್ಯಮ ತರಬೇತಿ ನೀಡಲಾಗುತ್ತದೆ. ಸೋಮೇಶ್ವರದಲ್ಲಿ ಈಗಾಗಲೇ 1.03 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಬೈಂದೂರು ಸೋಮೇಶ್ವರ ಬೀಚ್‌ನಲ್ಲಿ ಯಾವುದೇ ಅಪಾಯಗಳು ಘಟಿಸಿಲ್ಲ. ಹೀಗಾಗಿ ಇದನ್ನು ಜಿಲ್ಲೆಯ ಸುರಕ್ಷಿತ ಕಡಲ ಕಿನಾರೆ ಎಂದು ಘೋಷಿಸಲಾಗುತ್ತದೆ.
ಅನಿತಾ, ಸಹಾಯಕ ನಿರ್ದೇಶಕರು. ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ.

ಬೈಂದೂರಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವುದು ಇಲ್ಲಿನ ಪ್ರಗತಿಗೆ ಹೊಸ ಚೈತನ್ಯ ನೀಡಿದಂತಾಗಿದೆ. ನಿಸರ್ಗದತ್ತವಾದ ಇಂತಹ ಸೌಂದರ‌್ಯ ಹೊಂದಿದ ಬೈಂದೂರು ತಾಲೂಕಿನ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಪಕ್ಷಾತೀತ ಪ್ರಯತ್ನ ಮುಖ್ಯವಾಗಿದೆ. ಬೆಸುಗೆ ಫೌಂಡೇಶನ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುಂಜಾಲು ವೆಂಕಟೇಶ ಕಿಣಿ, ಅಧ್ಯಕ್ಷರು ಬೆಸುಗೆ ಫೌಂಡೆಶನ್