More

    ಕಲಾಪ ಸವಾಲು, ಉಪಚುನಾವಣೆ ಜವಾಬು

    * ಯಡಿಯೂರಪ್ಪ-ಸಿದ್ದರಾಮಯ್ಯ ಪಂಥಾಹ್ವಾನಕ್ಕೆ ಅಖಾಡ ಸಿದ್ಧ * ಜನತಾನ್ಯಾಯಾಲಯ ಮುಂದೆ ನಾಯಕರ ಕಿತ್ತಾಟ

    ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಹಾಕಿಕೊಂಡಿದ್ದ ಸವಾಲಿಗೆ ಎರಡು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಉತ್ತರ ನೀಡಲಿದೆ. ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಸಂದರ್ಭ ವಾದ-ವಿವಾದ ತಾರಕಕ್ಕೇರಿದಾಗ ಇಬ್ಬರು ಜನತಾ ನ್ಯಾಯಾಲಯದಲ್ಲಿ ಉತ್ತರ ಕಂಡುಕೊಳ್ಳುವ ಮಾತನಾಡಿದ್ದರು. ಅಧಿವೇಶನ ಮುಗಿದ ಬೆನ್ನ ಹಿಂದೆಯೇ ಘೋಷಣೆ ಈಗ ನಿಜವಾದ ಅಖಾಡವಾಗಿದೆ.

    ಇಂದು ಬಿಜೆಪಿ ಕೋರ್ ಕಮಿಟಿ ಸಭೆ

    ಶಿರಾ ಹಾಗೂ ಆರ್​ಆರ್ ನಗರ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಕೋರ್ ಕಮಿಟಿ ಸಭೆ ಗುರುವಾರ ಸಂಜೆ 5 ಗಂಟೆಗೆ ಜಗನ್ನಾಥ ಭವನದಲ್ಲಿ ನಡೆಯಲಿದೆ. ಪಕ್ಷದ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಸಿ.ಟಿ.ರವಿ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಇತರರು ಭಾಗವಹಿಸಲಿದ್ದಾರೆ. ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಿದ್ದಾರೆ. ಅಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುತ್ತದೆ.

    ಸರ್ಕಾರದ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮುಂದಾಗಿ ಇದೇ ವಿಚಾರಗಳನ್ನಿಟ್ಟು ಚುನಾವಣೆ ಎದುರಿಸಿ ಎಂದು ಪಂಥಾಹ್ವಾನ ನೀಡಿದ್ದರು. ಮುಂದಿನ ವಿಧಾನಸಭೆ ಚುನಾವಣೆಯನ್ನು ಇದೇ ವಿಚಾರದಲ್ಲಿಯೇ ನಡೆಸಿ ಎಂದು ಚುಚ್ಚಿದ್ದರು. ತನಿಖೆ ನಡೆಸಿ ಭ್ರಷ್ಟಾಚಾರ ಆರೋಪಗಳು ಸಾಬೀತಾಗದಿದ್ದರೆ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಸಹ ಘೋಷಣೆ ಮಾಡಿದ್ದರು.

    ಇದೀಗ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತಿದ್ದಂತೆ ಪ್ರಚಾರ ಕಣ ರಂಗೇರಲಿದೆ. ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದ ವಿಷಯಗಳೇ ಪ್ರಚಾರದಲ್ಲಿಯೂ ಕೇಳಿಬರಲಿವೆ. ಸದನದಲ್ಲಿ ಕೊನೆಯ ಕ್ಷಣದಲ್ಲಿ ನಡೆದ ಗಲಾಟೆಯೇ ಇದನ್ನು ಸಾಬೀತು ಮಾಡಿದೆ.

    ಕಾಂಗ್ರೆಸ್​ನಿಂದ ಕೇಳಿ ಬರಲಿರುವ ಆರೋಪಗಳು, ಅದಕ್ಕೆ ಬಿಜೆಪಿ ಅದರಲ್ಲೂ ಯಡಿಯೂರಪ್ಪ ಚುನಾವಣಾ ಕಣದಲ್ಲಿ ನೀಡಲಿರುವ ಉತ್ತರ, ಎರಡು ಕ್ಷೇತ್ರದ ಮತದಾರರು ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಏನೇ ಆರೋಪ ಮಾಡಿದರೂ ಗೆಲುವು ನಮ್ಮದೇ ಎಂದು ಯಡಿಯೂರಪ್ಪ ಸವಾಲಿನಿಂದ ಘೋಷಿಸಿದ್ದಾರೆ. ಕಾಂಗ್ರೆಸ್​ನ ಆರೋಪಕ್ಕೆ ಜನಮನ್ನಣೆ ನೀಡಲಾರರು ಎಂಬುದು ಅವರಿಗೆ ಇರುವ ವಿಶ್ವಾಸವಾಗಿದೆ.

    ಎರಡು ಕ್ಷೇತ್ರದಲ್ಲಿ ಬರಲಿರುವ ಫಲಿತಾಂಶವೇ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಜನ ಎಷ್ಟರಮಟ್ಟಿಗೆ ಸ್ವೀಕರಿಸಿದ್ದಾರೆ ಎಂಬುದನ್ನು ತೋರಿಸಲಿದೆ. ಯಾವ ಪಕ್ಷದ ಪರವಾಗಿ ಫಲಿತಾಂಶ ಬರುತ್ತದೆಯೋ, ಇನ್ನೊಂದು ಪಕ್ಷ ತನ್ನ ನಡವಳಿಕೆ, ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂಬುದೇ ಸಂದೇಶವಾಗಿರುತ್ತದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.

    ಈ ಉಪಚುನಾವಣೆಗಳ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯೇನಲ್ಲ, ಆದರೆ ಪಕ್ಷಗಳ ಬಗ್ಗೆ ಅಭಿಪ್ರಾಯ ಮೂಡಿಸುವುದಕ್ಕೆ ಸಹಕಾರಿಯಾಗಿರುತ್ತದೆ. ಆದ್ದರಿಂದಲೇ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಜೀವಂತವಾಗಿಡುವುದು ಕಾಂಗ್ರೆಸ್​ನ ಉದ್ದೇಶವಾಗಿದೆ. ಆದರೆ ಆ ಮಾಹಿತಿಗೆ ಜನಮನ್ನಣೆ ಸಿಗದಂತೆ ನೋಡಿಕೊಳ್ಳುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ. ತಂತ್ರ-ಪ್ರತಿತಂತ್ರದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಉಪಚುನಾವಣೆ ಫಲಿತಾಂಶ ನಿರ್ಧರಿಸಲಿದೆ.

    ಸುಧಾರಿತ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ: ಪ್ರಧಾನಿ ಮೋದಿ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts