More

    ಬ್ಯಾಟರಿ ಸುಡುತ್ತಿದ್ದ ಅಡ್ಡೆ ಮೇಲೆ ದಾಳಿ, ಅಧಿಕಾರಿಗಳ ತಂಡದಿಂದ ಹಲವು ಪರಿಕರ ವಶ, ತಪ್ಪಿತಸ್ಥರ ವಿರುದ್ಧ ಕ್ರಮ

    ಆನೇಕಲ್: ಬನ್ನೇರುಘಟ್ಟ ಕಾಡಂಚಿನಲ್ಲಿ ಅಕ್ರಮವಾಗಿ ವಿಷಕಾರಿ ಬ್ಯಾಟರಿಯನ್ನು ಸುಟ್ಟು ಲೋಹ ಮಾದರಿಯ ಸೀಸ ತೆಗೆಯುತ್ತಿದ್ದ ಪ್ರದೇಶದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಹಲವು ಪರಿಕರಗಳನ್ನು ವಶಪಡಿಸಿಕೊಂಡರು.

    ದಂಧೆ ಬಗ್ಗೆ ‘ಬನ್ನೇರುಘಟ್ಟ ಕಾಡಂಚಿನಲ್ಲಿ ಅಕ್ರಮ’ ಶೀರ್ಷಿಕೆಯಡಿ ಜ.18ರಂದು ವಿಜಯವಾಣಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಸಿಬ್ಬಂದಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ದಾಳಿ ಮಾಹಿತಿ ಅರಿತ ದಂಧೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಬೆಸ್ಕಾಂನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಕಂಡುಬಂದಿದ್ದು, ಅಕ್ರಮಕ್ಕೆ ಬಳಸುತ್ತಿದ್ದ ವಿದ್ಯುತ್ ಸಾಧನ ಹಾಗೂ ಸ್ಥಳದಲ್ಲಿದ್ದ ಇನ್ನಿತರ ವಸ್ತುಗಳನ್ನು ಮಾಲಿನ್ಯ ಮಂಡಳಿ ವಶಕ್ಕೆ ಪಡೆಯಿತು. ದಂಧೆ ನಡೆಸುತ್ತಿದ್ದ ಮಾಲೀಕ ಹಾಗೂ ಭೂಮಿ ನೀಡಿದವರ ಮೇಲೆ ಕ್ರಮ ಜರುಗಿಸಲು ಮಾಲಿನ್ಯ ಮಂಡಳಿ ಮುಂದಾಗಿದೆ.

    ಮಾಲಿನ್ಯ ಮಂಡಳಿ ಎಇಒ ವೀಣಾ ಮಾತನಾಡಿ, ದಂಧೆಗೆ ಬಳಸುತ್ತಿದ್ದ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ನಾಲ್ಕು ವರ್ಷಗಳಿಂದ ಬನ್ನೇರುಘಟ್ಟ ಕಾಡಂಚಿನ ಪ್ರದೇಶದಲ್ಲಿ ಉತ್ತರಪ್ರದೇಶದ ಮೂಲದವರನ್ನು ಬಳಸಿಕೊಂಡು ಹತ್ತಾರು ಕಡೆ ಅಕ್ರಮವಾಗಿ ಬ್ಯಾಟರಿಗಳನ್ನು ರಾತ್ರಿ ಹೊತ್ತಿನಲ್ಲಿ ಸುಟ್ಟು ಪರಿಸರ ಹಾಳು ಮಾಡುವ ಜತೆಗೆ ಇದನ್ನೇ ದಂಧೆಯಾಗಿಸಿಕೊಂಡಿದ್ದರು.

    ದಂಧೆ ನಡೆಸುತ್ತಿರುವ ಮಾಹಿತಿ ಮೇರೆಗೆ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹಲವು ಸಲಕರಣೆ ತೆರವು ಮಾಡಿಸಿದ್ದು, ಮಾಲಿನ್ಯ ಮಂಡಳಿ ಪತ್ರ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ಮಹದೇವಯ್ಯ, ತಹಸೀಲ್ದಾರ್, ಆನೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts