ಬ್ಯಾರಿ ಕೋಮುವಾದಿ ಸಮುದಾಯವಲ್ಲ

ಉಳ್ಳಾಲ: ಬ್ಯಾರಿ ಕೋಮುವಾದಿ ಸಮುದಾಯವಲ್ಲ. ಶಾಂತಿ, ಸೌಹಾರ್ದದೊಂದಿಗೆ ಸಮಾಜದ ಎಲ್ಲ ಜನರೊಂದಿಗೆ ಬೆರೆತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಸಮುದಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಬ್ಯಾರಿ ಅಧ್ಯಯನ ಪೀಠದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳು, ಬ್ಯಾರಿ, ಕೊಂಕಣಿ ಭಾಷೆಗಳಿಗೆ ಲಿಪಿ ಇಲ್ಲದಿದ್ದರೂ ಆ ಸಮುದಾಯದ ಜನರ ಸಂಸ್ಕೃತಿ, ಆಚರಣೆ ಆಚಾರ ವಿಚಾರಗಳಿಂದ ಅದು ಶ್ರೀಮಂತವೆನಿಸಿದೆ. ಬ್ಯಾರಿ ಸಂಸ್ಕೃತಿ ವಿಶಿಷ್ಟವಾದುದು. ಈ ಸಮುದಾಯದ ಇತಿಹಾಸ ನೋಡಿದರೆ ಶ್ರಮ ಸಂಸ್ಕೃತಿಯೊಂದಿಗೆ ಬೆಳೆದು ಬಂದಿರುವುದನ್ನು ಗಮನಿಸಬಹುದು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಕರಂಬಾರು ಮಹಮ್ಮದ್, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಸುರೇಂದ್ರ ರಾವ್, ಕರ್ನಾಟಕ ತುಳು/ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ್ ರೈ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್, ಕೊಣಾಜೆ ಗ್ರಾಪಂ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್, ಪೀಠಗಳ ಸಂಯೋಜಕ ಪ್ರಭಾಕರ ನೀರುಮಾರ್ಗ ಮೊದಲಾದವರು ಉಪಸ್ಥಿತರಿದ್ದರು. ಬ್ಯಾರಿ ಅಧ್ಯಯನ ಪೀಠ ಸಂಯೋಜಕ ಪ್ರೊ.ಇಸ್ಮಾಯಿಲ್ ಪ್ರಾಸ್ತಾವಿಕ ಮಾತನಾಡಿದರು. ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ತುಳು ಅಧ್ಯಯನ ಪೀಠ, ಕೊಡವ ಅಧ್ಯಯನ ಪೀಠ, ಕೊಂಕಣಿ ಪೀಠ ಸೇರಿದಂತೆ ಹಲವು ಪೀಠಗಳಿವೆ. ಮುಂದಿನ ದಿನಗಳಲ್ಲಿ ಎಲ್ಲ ಪೀಠಗಳು ಒಂದೇ ಸೂರಿನಡಿ ಬಂದು, ಒಂದೇ ರೀತಿಯ ಅನುದಾನ ಸಿಗುವಂತಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನಿಸೋಣ.
– ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ