ಉಪಚುನಾವಣೆ ಫಲಿತಾಂಶ ಪಕ್ಷಕ್ಕೆ ಎಚ್ಚರಿಕೆ ಗಂಟೆ

ಶಿವಮೊಗ್ಗ: ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಎಚ್ಚರಿಕೆಯ ಗಂಟೆಯಾಗಿದ್ದು, ಪಕ್ಷ ಸಂಘಟನೆಗೆ ನಾಳೆಯಿಂದಲೇ ಎಲ್ಲ ಮುಖಂಡರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆ ಸಮೀಪದಲ್ಲಿದ್ದು, ಈ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಜಯಗಳಿಸಿ ನರೇಂದ್ರ ಮೋದಿ ಅವರನ್ನು ಮತ್ತೆ ದೇಶದ ಪ್ರಧಾನಿ ಮಾಡುವುದು ನಮ್ಮ ಮುಂದಿರುವ ಗುರಿ ಎಂದರು.

ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರಗಳ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಆ ಭಾಗದ ಮುಖಂಡರಿಂದ ಸೋಲಿಗೆ ಕಾರಣಗಳನ್ನು ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.

ಎರಡೂ ಪಕ್ಷಗಳು ಒಂದಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಹೋರಾಟ ನಡೆಸಿದರೂ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಿಲ್ಲ. ಮಂಡ್ಯದಲ್ಲಿ ಅಚ್ಚರಿ ಎನ್ನುವಂತೆ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಎರಡು ಲಕ್ಷಕ್ಕೂ ಅಧಿಕ ಮತ ಗಳಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಆ ಭಾಗದ ಜನ ಹೆಚ್ಚಿನ ಮತ ನೀಡುವ ಮೂಲಕ ಇಲ್ಲೂ ಬಿಜೆಪಿಗೆ ನೆಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಮತದಾನ ಕುಸಿತದಿಂದ ಲೀಡ್ ಕಡಿಮೆ: ಶಿವಮೊಗ್ಗ: ಮತದಾನ ಪ್ರಮಾಣ ಕುಸಿತ ಹಾಗೂ ಸಮ್ಮಿಶ್ರ ಸರ್ಕಾರವು ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮುಖ್ಯಮಂತ್ರಿ ಸೇರಿ ಸಮ್ಮಿಶ್ರ ಸರ್ಕಾರದ ಸಚಿವರ ದಂಡೇ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಬಿಜೆಪಿ ಭದ್ರಕೋಟೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಮೈತ್ರಿ ಅಭ್ಯರ್ಥಿ ಪರ ಎಷ್ಟೇ ಪ್ರಚಾರ ನಡೆಸಿದ್ದರೂ ಕ್ಷೇತ್ರದ ಮತದಾರರು ಬಿಜೆಪಿಯನ್ನು ಕೈಬಿಟಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬಹುಶಃ ರಾಘವೇಂದ್ರ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲಿ ಎಂಬುದು ಕ್ಷೇತ್ರದ ಮತದಾರರ ಆಶಯವಾಗಿರಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಶ್ರಮ ಹಾಕಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ನನ್ನ ಗೆಲುವಿನಲ್ಲಿ ಎಲ್ಲ ಮುಖಂಡರು ಕಾರ್ಯಕರ್ತರ ಶ್ರಮ, ಪ್ರಧಾನಿ ನರೇಂದ್ರ ಮೋದಿ ಸಾಧನೆಗಳು, ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ನೀಡಿದ ಯೋಜನೆಗಳ ಫಲವಿದೆ ಎಂದರು.