ಅಯ್ಯೋ ರಾಮಚಂದ್ರ ಹೀಗಾಗ್ಬುಡ್ತಾ..

ಬೆಂಗಳೂರು: ಮತದಾನಕ್ಕೆ 48 ತಾಸು ಬಾಕಿ ಇರುವಂತೆಯೇ ಮೈದಾನದಲ್ಲಿ ಎದುರಾಳಿಯೇ ಇಲ್ಲದಂತೆ ಬೀಗುತ್ತಿರುವ ಜೆಡಿಎಸ್​ನ ಆತ್ಮವಿಶ್ವಾಸ ಕೇವಲ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿವಮೊಗ್ಗದಲ್ಲೂ ದುಪ್ಪಟ್ಟಾಗಿದೆ. 5 ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಮೂರೂ ಸ್ಥಾನಗಳನ್ನು ಗೆಲ್ಲುವ ಕನಸು ಈಗ ಜೆಡಿಎಸ್​ಗೆ ಚಿಗುರೊಡೆದಿದೆ.

ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕುಳಿತು ಘೋಷಿಸಿರುವ ನಿರ್ಧಾರದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಗುಮಾನಿಗೆ ಕಾರಣ ವಾಗಿದ್ದರೂ ಸಿಎಂ ಕುಮಾರಸ್ವಾಮಿ ಅವರ ಪ್ರಭಾವ ಇಲ್ಲಿ ಕೆಲಸ ಮಾಡದೇ ಇರಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಹಿಂದೆ ಸ್ವತಃ ಸಿಎಂ ನೇರ ಭಾಗಿಯಾಗಿಲ್ಲ. ಡಿಕೆಶಿ ಅನುಪಸ್ಥಿತಿಯಲ್ಲಿ ಸಂಸದ ಡಿ.ಕೆ.ಸುರೇಶ್ ಈ ಕೆಲಸ ಮಾಡಿದ್ದಾರೆ. ಗುರಿಗೆ ಹೆಗಲು ಕೊಟ್ಟದ್ದು ಸುರೇಶ್ ಆದರೂ ಕಾಡತೂಸು ಮಾತ್ರ ಕುಮಾರಸ್ವಾಮಿ ಅವರದ್ದು ಎನ್ನಲಾಗುತ್ತಿದೆ. ಗುಂಡು ಯಾರೇ ಹಾರಿಸಿದರೂ ಹಣ್ಣು ಜಾರಿ ಬಿದ್ದಿರುವುದು ಜೆಡಿಎಸ್ ಬುಟ್ಟಿಗೆ. ರಾಮನಗರದ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮಂಡ್ಯದಲ್ಲಿ ಜೆಡಿಎಸ್ ಗೆಲುವು ಮತ್ತಷ್ಟು ಸಲೀಸಾಗಿದೆ ಎನ್ನಲಾಗುತ್ತಿದೆ. ಮತದಾನಕ್ಕೆ ಕೆಲವೇ ತಾಸು ಮುಂದೆ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಬಿಜೆಪಿ ಪರ ಅನುಕಂಪವನ್ನೇನೂ ಸೃಷ್ಟಿಸಿಲ್ಲ. ಬದಲಾಗಿ ಪಕ್ಷಕ್ಕೆ ದುಡಿದವರನ್ನು ಬಿಟ್ಟು ಹೊರಗಿನ ಮಾರ್ಜಾಲದ ಬೆನ್ನು ಬೀಳುವ ನಾಯಕರ ವರಸೆಗೆ ರಾಮನಗರದ ಘಟನೆ ಬಹುದೊಡ್ಡ ಪಾಠ ಎಂದು ಬಿಜೆಪಿಗರೇ ಹೇಳುತ್ತಿದ್ದಾರೆ.

ಬೋನಸ್ ಪಾಯಿಂಟ್​ನತ್ತ ಚಿತ್ತ

ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಎರಡು, ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುತ್ತದೆ ಎಂಬ ಲೆಕ್ಕಾಚಾರ ಇತ್ತು. ಆದರೆ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಲಾಯನಗೈದಿರುವುದು ಫಲಿತಾಂಶಕ್ಕೂ ಮೊದಲೇ ನೈತಿಕವಾಗಿ ಗೆದ್ದಂತಾಗಿದೆ. ಸ್ಪರ್ಧಿಸಿರುವ ಮೂರರಲ್ಲಿ ಎರಡನ್ನು ಗೆದ್ದಾಗಿದೆ ಹಾಗೂ ಇನ್ನೊಂದರಲ್ಲಿ ಅದೃಷ್ಟ ನೆಚ್ಚಿಕೊಂಡಿದೆ. ರಾಮನಗರದಲ್ಲೇ ಭಾರಿ ಪ್ರಯಾಸದ ಸ್ಥಿತಿ ಇದೆ ಎಂಬ ಮಾತು ಚುನಾವಣೆ ಘೋಷಣೆ ಆದಾಗ ಕೇಳಿಬಂದಿತ್ತು. ಕ್ರಮೇಣ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯವಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ಆತಂಕವೂ ಇತ್ತು. ಆದರೀಗ ಎದುರಾಳಿಯೇ ಇಲ್ಲದೇ ನಾಮಕೆವಾಸ್ತೆ ಚುನಾವಣೆ ಎಂಬ ಸ್ಥಿತಿ ನಿರ್ವಣವಾಗಿದೆ. ಹೀಗಾಗಿ ಈಗ ಜೆಡಿಎಸ್ ಚಿತ್ತ ಏನಿದ್ದರೂ ‘ಬೋನಸ್ ಪಾಯಿಂಟ್’ ಕಡೆಗೆ ಮಾತ್ರ.

ಯಾವೊಬ್ಬ ಬಿಜೆಪಿ ನಾಯಕರನ್ನೂ ಇಲ್ಲಿಯವರೆಗೆ ನಾವು ಸಂಪರ್ಕ ಮಾಡಿಲ್ಲ. ಬಿಜೆಪಿ ಅವರು ಆಡುವ ಕೀಳುಮಟ್ಟದ ಮಾತುಗಳಿಗೆ ನಾನು ಉತ್ತರಿಸಲ್ಲ.

| ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ?

ಸಾಗರ: ಚಂದ್ರಶೇಖರ್ ಸಜ್ಜನರು ಎಂದು ಭಾವಿಸಿ, ಟಿಕೆಟ್ ಕೊಟ್ಟು ಪ್ರಚಾರ ಮಾಡಲಾಯಿತು. ಒಳಗೆ ಈ ರೀತಿ ಪಿತೂರಿ ನಡೆಯುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಪಕ್ಷದ ಮುಖಂಡರು ಚರ್ಚೆ ಮಾಡುತ್ತಿದ್ದು, ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಬೇಕೆನ್ನುವ ನಿರ್ಣಯ ಕೈಗೊಳ್ಳಬಹುದು ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಜೆಡಿಎಸ್-ಕಾಂಗ್ರೆಸ್ ಮುಖಂಡರು ಉಪಚುನಾವಣೆಯಲ್ಲಿ ಗೆಲುವಿಗಾಗಿ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ. ರಾಮನಗರದ ನಮ್ಮ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದಾರೆ. ಪರಿಸ್ಥಿತಿ ಹೀಗಾಗುತ್ತದೆ ಎನ್ನುವ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ನಮಗೆ ಎಚ್ಚರಿಕೆ ನೀಡಿದ್ದರು. ಅದು ನಿಜವಾಯಿತು ಎಂದರು.

ಡಿಕೆ ಸಹೋದರರಿಂದ ಖರೀದಿ

ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ಡಿಕೆ ಸಹೋದರರು ಖರೀದಿ ಮಾಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಚಂದ್ರಶೇಖರ್ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಚಂದ್ರಶೇಖರ್ ಬಿಜೆಪಿಯಿಂದ ಕಣದಲ್ಲಿದ್ದರೂ ಅವರ ಬಗ್ಗೆ ಸಂಶಯವಿತ್ತು. ಹೀಗಾಗಿ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಅವರು ಶಿಕಾರಿಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಚಂದ್ರಶೇಖರ್ ಬಿಜೆಪಿಗೆ ಮಾತ್ರ ಅಲ್ಲ ರಾಮನಗರ ವಿಧಾನಸಭಾ ಕ್ಷೇತ್ರದ ಜನತೆಗೆ ದ್ರೋಹ ಎಸಗಿದ್ದಾರೆ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.

ರಾಷ್ಟ್ರೀಯ ವರಿಷ್ಠರಿಗೆ ವರದಿ

ರಾಮನಗರದ ವಿದ್ಯಮಾನಗಳ ಬಗ್ಗೆ ಕೇಂದ್ರದ ವರಿಷ್ಠರಿಗೆ ವರದಿ ನೀಡಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ. ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ವರದಿ ಸಿದ್ಧಪಡಿಸಲು ತಿಳಿಸಲಾಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಿಶೀಲಿಸಿ ರಾಷ್ಟ್ರೀಯ ನಾಯಕರಿಗೆ ಕಳಿಸುತ್ತಾರೆ. ನಾಲ್ಕು ರಾಜ್ಯಗಳ ಚುನಾವಣೆ ಮುಕ್ತಾಯವಾಗುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳುವುದು ಅನುಮಾನ. ನಂತರ ಹೇಗಿದ್ದರೂ ಲೋಕಸಭಾ ತಯಾರಿ ಆರಂಭವಾಗುವ ಕಾರಣ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು ಎಂದು ಮೂಲಗಳು ಹೇಳಿವೆ.

ಸಿಪಿವೈ ವಾಪಸ್ ಕಳಿಸಿದ್ದಾರೆ

ಬಳ್ಳಾರಿ: ರಾಮನಗರ ಬಿಜೆಪಿ ಅಭ್ಯರ್ಥಿ ನಿವೃತ್ತಿ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದ ಕಡತವೊಂದಕ್ಕೆ ಸಹಿ ಹಾಕುವ ಹಿನ್ನೆಲೆ ಬೆಂಗಳೂರಿಗೆ ತೆರಳಿ ವಾಪಸ್ ಬಂದಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಚಂದ್ರಶೇಖರ್ ನಮ್ಮ ಹುಡುಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವೇ ಅವರನ್ನು ರಾಜ್ಯ ಪುನರ್ವಸತಿ ಕೇಂದ್ರದ (ಕೆಆರ್​ಸಿ) ಸದಸ್ಯರನ್ನಾಗಿ ಮಾಡಿದ್ದೆವು. ಯೋಗೇಶ್ವರಣ್ಣ ಆತನನ್ನು ಬಿಜೆಪಿಗೆ ಕರೆದುಕೊಂಡು ಹೋಗಿದ್ದರು. ಈಗ ಅವರೇ ವಾಪಸ್ ಕಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿ ಆಗಿರುವುದು ನಮಗೊಂದು ಪಾಠ. ಇನ್ನು ಮುಂದೆ ಯಾರಿಗಾದರೂ ಟಿಕೆಟ್ ನೀಡುವ ಮುನ್ನ ಯೋಚನೆ ಮಾಡುತ್ತೇವೆ. ಈ ಬೆಳವಣಿಗೆ ಉಳಿದ ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ.

| ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ

ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ ಮೇಲೆ ಒತ್ತಡ ತಂದು ಸ್ಪರ್ಧಾ ಕಣದಿಂದ ಹಿಂದೆ ಸರಿಸಿ, ಸಿಎಂ ಕುಮಾರಸ್ವಾಮಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ.

| ಬಿ.ಶ್ರೀರಾಮುಲು, ಮೊಳಕಾಲ್ಮೂರು ಶಾಸಕ

 

ಬಿಜೆಪಿಯವರು ಸರಿಯಾಗಿ ಸಹಕಾರ ನೀಡದೇ ಇದ್ದ್ದುದ್ದರಿಂದ ಚಂದ್ರಶೇಖರ್ ಕಣದಲ್ಲಿದ್ದು ನಾನೇಕೆ ಸಾಯಬೇಕು ಎಂದು ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕೂಡ ಮನವೊಲಿಸಿದ್ದಾರೆ. ಇದು ಬಿಎಸ್​ವೈ ಹಾಗೂ ಬಿಜೆಪಿಗಾದ ಮುಖಭಂಗ. ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಇಲ್ಲಿ ಪಕ್ಷದ ಸೋಲು, ಗೆಲುವಿನ ಹೊಣೆ ನಾನೇ ಹೊರುತ್ತೇನೆ.

| ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ


ವಿಲನ್ ಆದ್ರಾ ಯೋಗೇಶ್ವರ್?

| ಗಂಗಾಧರ್ ಬೈರಾಪಟ್ಟಣ

ರಾಮನಗರ: ಇಲ್ಲಿನ ವಿಧಾನಸಭಾ ಉಪಚುನಾವಣೆ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಸಿದ್ಧತೆ ಮಾಡಲು ಹೊರಟಿದ್ದ ಬಿಜೆಪಿ ಪಾಳಯಕ್ಕೆ ಅಭ್ಯರ್ಥಿ ಎಲ್.ಚಂದ್ರಶೇಖರ್ ದೊಡ್ಡ ಶಾಕ್ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಕೈ ಪಾಳಯದಲ್ಲಿ ಉಂಟಾಗಿದ್ದ ಬೇಸರ ಮತ್ತು ಅನಿತಾ ಕುಮಾರಸ್ವಾಮಿ ಸ್ಪರ್ಧೆಯಿಂದ ಎದ್ದಿದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆದು, ಪಕ್ಷ ಬಲವರ್ಧನೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ, ಅಭ್ಯರ್ಥಿ ಆಯ್ಕೆಯಲ್ಲಿ ಎಡವಿ ಕ್ಷೇತ್ರದಲ್ಲಿ ಬಲ ಕುಸಿಯುವಂತಾಗಿದೆ.

ರುದ್ರೇಶ್ ಸೂಕ್ತವಾಗಿದ್ದರು: ರಾಮನಗರದಲ್ಲಿ ಅಭ್ಯರ್ಥಿ ಯಾರಾಗಬೇಕು ಎನ್ನುವ ಚರ್ಚೆಗಳು ಕುಮಾರಸ್ವಾಮಿ ರಾಜೀನಾಮೆ ನೀಡಿದ ನಂತರವೇ ಆರಂಭಗೊಂಡಿತ್ತು. ರುದ್ರೇಶ್​ರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ, ಅವರನ್ನೇ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಕೈ ಮತ್ತು ಜೆಡಿಎಸ್ ಪಾಳಯದಲ್ಲಿ ಎದ್ದಿದ್ದ ಅಸಮಾಧಾನದ ಅಲೆಯಲ್ಲಿ ಬಿಜೆಪಿ ಬಲಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ಇದಕ್ಕೆ ಪೂರಕವೆಂಬಂತೆ ಬಹುತೇಕ ಕಡೆ ಅನಿತಾ ಪ್ರಚಾರಕ್ಕೆ ಸ್ಥಳೀಯರು ಆಕ್ರೋಶದ ಸ್ವಾಗತವನ್ನೇ ನೀಡಿದ್ದರು. ಈ ಹಿಂದೆ ಸ್ಪರ್ಧಿಸಿದ್ದ ರುದ್ರೇಶ್ ಈ ಬಾರಿ ಕಣಕ್ಕಿಳಿದಿದ್ದರೆ ಖಂಡಿತವಾಗಿ ಗೆಲ್ಲುವ ಸನಿಹಕ್ಕೆ ಬಂದು ನಿಲ್ಲುತ್ತಿದ್ದುದರಲ್ಲಿ ಅನುಮಾನ ಇಲ್ಲ ಎನ್ನುತ್ತವೆ ಕಾಂಗ್ರೆಸ್-ಜೆಡಿಎಸ್ ಮೂಲಗಳು. ಆದರೆ ಟಿಕೆಟ್ ನೀಡುವಲ್ಲಿ ಎಡವಿದ ಪಕ್ಷ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗಿ ಬಂದಿರುವುದು ವಿರ್ಪಯಾಸ.

ಮೊದಲೇ ಗೊತ್ತಿತ್ತಾ?: ಚಂದ್ರಶೇಖರ್ ಪಕ್ಷಕ್ಕೆ ಕೈ ಕೊಡುತ್ತಾರೆ ಎನ್ನುವ ಮಾಹಿತಿ ಬಿಜೆಪಿಗೆ ಮೊದಲೇ ತಿಳಿದಿತ್ತಾ? ‘ಹೌದು’ ಎನ್ನುತ್ತವೆ ಬಿಜೆಪಿ ಮೂಲಗಳು. ಚಂದ್ರಶೇಖರ್ ಸೂಕ್ತ ಅಭ್ಯರ್ಥಿ ಅಲ್ಲ ಎನ್ನುವ ಸಂದೇಹದ ಮೇಲೆಯೇ ಮತ್ತೊಬ್ಬ ವ್ಯಕ್ತಿಯಿಂದ ನಾಮಪತ್ರವನ್ನೂ ಸಲ್ಲಿಸಿ, ಅಂತಿಮ ದಿನದಂದು ವಾಪಸ್ ಪಡೆಯುವಂತೆ ಮಾಡಿರುವುದು ಚಂದ್ರಶೇಖರ್ ಬಗೆಗೆ ಬಿಜೆಪಿ ನಾಯಕರಿಗಿದ್ದ ಅನುಮಾನಕ್ಕೆ ಪುಷ್ಠಿ ನೀಡಿವೆ. ಚಂದ್ರಶೇಖರ್ ನಾಮಪತ್ರ ಸಲ್ಲಿಕೆ ನಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವರದರಾಜು ಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಹಂತದವರೆಗೂ ಚಂದ್ರಶೇಖರ್ ಪಕ್ಷ ನಿಷ್ಠೆ ಪ್ರದರ್ಶಿಸಿದ ನಂತರವಷ್ಟೇ ವರದರಾಜು ನಾಮಪತ್ರ ವಾಪಸ್ ಪಡೆದುಕೊಂಡಿದ್ದರು.

ಹೀರೋ ಆಗಲು ಹೋಗಿ…

ದಕ್ಷಿಣ ಕರ್ನಾಟಕ ಭಾಗದ ಬಿಜೆಪಿಗೆ ನಾಯಕರಾಗಲು ಹೊರಟ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ರಾಮನಗರ ಉಪಚುನಾವಣೆ ಕಣದಿಂದ ಹಿಂದೆ ಸರಿದು ಬಿಜೆಪಿ ಪಾಲಿಗೆ ಖಳನಾಯಕರಾಗಿದ್ದಾರೆ. ಚಂದ್ರಶೇಖರ್ ಬಿಜೆಪಿ ಸೇರ್ಪಡೆ, ಅವರಿಗೆ ಪಕ್ಷದ ಬಿ ಫಾರಂ ನೀಡುವವರೆಗೂ ಯೋಗೇಶ್ವರ್ ಪ್ರಭಾವ ಕೆಲಸ ಮಾಡಿದೆ. ನಂತರ ಕೂಡ ಕೆಲ ಮುಖಂಡರ ವಿರೋಧದ ನಡುವೆಯೂ ಚಂದ್ರಶೇಖರ್ ಬೆನ್ನಿಗೆ ಸಿಪಿವೈ ನಿಂತಿದ್ದರು. ಇದೀಗ ಚಂದ್ರಶೇಖರ್ ಮತ್ತೆ ಕಾಂಗ್ರೆಸ್​ಗೆ ಹಾರಲು ಕರಾಣ ಯೋಗೇಶ್ವರ್ ಎನ್ನುವ ಆರೋಪ ಅವರನ್ನು ಖಳನಾಯಕನನ್ನಾಗಿಸಿದೆ. ಈ ಘಟನೆ ನಂತರ ಯೋಗೇಶ್ವರ್ ಮೊಬೈಲ್​ಗಳು ಸ್ವಿಚ್​ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ.


ಬೀದಿಯಲ್ಲಿ ಬಿಟ್ಟರು

ಬೆಂಗಳೂರು: ‘ಅವರೇ ಕರೆದು ಟಿಕೆಟ್ ಕೊಟ್ಟು, ಚುನಾವಣೆ ಖರ್ಚು-ವೆಚ್ಚ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದರು. ಈಗ ಆ ಪಕ್ಷದ ನಾಯಕರ್ಯಾರೂ ಕೈಗೆ ಸಿಗುತ್ತಿಲ್ಲ. ದೂರವಾಣಿ ಕರೆ ಸಹ ಸ್ವೀಕರಿಸುತ್ತಿಲ್ಲ. ಹೀಗಾಗಿ ಬೇಸತ್ತು ಕಣದಿಂದ ನಿವೃತ್ತನಾಗುತ್ತಿದ್ದೇನೆ’ ಎಂದು ರಾಮನಗರ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಘೋಷಿಸಿದ್ದಾರೆ.

ಗುರುವಾರ ಬೆಳಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡ ಚಂದ್ರಶೇಖರ್, ಸಂಸದ ಡಿ.ಕೆ.ಸುರೇಶ್ ಜತೆಗೆ ಮಾಧ್ಯಮದ ಮುಂದೆ ಬಂದು ನಿರ್ಧಾರ ಪ್ರಕಟಿಸಿದರು. ‘ನಾನು ಬಿಜೆಪಿಗೆ ಸೇರಿದ ದಿನ ಯಡಿಯೂರಪ್ಪ ಪಕ್ಷದ ಧ್ವಜ ಕೊಟ್ಟರು, ನಂತರ ಬೀದಿಗೆ ಬಿಟ್ಟರು. ಮಗನ ಪರ ಪ್ರಚಾರಕ್ಕೆ ಒತ್ತು ನೀಡಿದ ಬಿಎಸ್​ವೈ, ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ಬಿಜೆಪಿಯ ಉಳಿದ ನಾಯಕರೂ ರಾಮನಗರದ ಬಗ್ಗೆ ಅಸಡ್ಡೆ ತೋರಿದ್ದಾರೆ. ನಾಯಕರ ನಡುವೆ ಕಿತ್ತಾಟ ಇದಕ್ಕೆ ಕಾರಣ’ ಎಂದರು. ‘ಹಲವು ಬಾರಿ ಪ್ರಯತ್ನಿಸಿದರೂ ಯಡಿಯೂರಪ್ಪ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ನನ್ನ ಜತೆ ಮಾತನಾಡಲು ಅವರು ಇಷ್ಟ ಪಡಲಿಲ್ಲ. ಇಡೀ ಬೆಳವಣಿಗೆಗೆ ಯೋಗೇಶ್ವರ್ ಕಾರಣ. ಎರಡು ದಿನಗಳಿಂದ ಅವರೂ ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡಿದ್ದಾರೆ. ತುಳಸಿ ಮುನಿರಾಜು ಗೌಡ, ರುದ್ರೇಶ್ ಪ್ರಚಾರ ನಡೆಸಿದ್ದು ಬಿಟ್ಟರೆ, ಬೇರೆಯವರು ಕಾಣಿಸಲಿಲ್ಲ’ ಎಂದು ಅವರು ದೂರಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಚಂದ್ರಶೇಖರ್ ಬಿಜೆಪಿ ನಾಯಕರ ಧೋರಣೆಯಿಂದ ನೊಂದು ಚುನಾವಣೆ ಕಣದಿಂದ ಹಿಂದೆ ಸರಿದಿದ್ದು, ಚುನಾವಣಾಧಿಕಾರಿಯವರಿಗೆ ಈಗಾಗಲೇ ಇ-ಮೇಲ್ ಮಾಡಿದ್ದಾರೆ.

ಉಪಚುನಾವಣೆ ಬಳಿಕ ಮಹತ್ವದ ಬೆಳವಣಿಗೆ ನಡೆಯಲಿದೆ. ಸರ್ಕಾರ ಬೀಳಿಸುವೆ, 10 ಶಾಸಕರನ್ನು ಬುಕ್ ಮಾಡಲಾಗಿದೆ. ಚುನಾ ವಣೆಗೆ ನಿಲ್ಲು ನಾನಿದ್ದೇನೆ. ಬಿಜೆಪಿ ತಂಡ ಕೆಲಸ ಮಾಡುತ್ತದೆ ಎಂದು ಯೋಗೇಶ್ವರ್ ಹೇಳಿದ್ದರು. ಆದರೆ, ಬಿಜೆಪಿ ನಾಯಕರ ನಡುವೆ ಒಮ್ಮತ ಇಲ್ಲ. ಯೋಗೇಶ್ವರ್ ಕಂಡರೆ ಸದಾನಂದ ಗೌಡರಿಗೆ ಆಗಲ್ಲ.

| ಎಲ್.ಚಂದ್ರಶೇಖರ್, ರಾಮನಗರ ಬಿಜೆಪಿ ಅಭ್ಯರ್ಥಿ

 

ಪುತ್ರ ಚಂದ್ರಶೇಖರ್ ಹೇಡಿ

ಬಳ್ಳಾರಿ: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನ ಪುತ್ರ ಚಂದ್ರಶೇಖರ್ ಆತ್ಮದ್ರೋಹ ಮಾಡಿಕೊಂಡಿದ್ದು, ಆತನೊಬ್ಬ ಹೇಡಿ ಎಂದು ಚಂದ್ರಶೇಖರ್ ತಂದೆ, ಕಾಂಗ್ರೆಸ್​ನ ಎಂಎಲ್​ಸಿ ಸಿ.ಎಂ.ಲಿಂಗಪ್ಪ ಹೇಳಿದರು. ತಪ್ಪು ನಿರ್ಧಾರದ ಮೂಲಕ ಆತ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೋರಾಟದ ಮನೋಭಾವ ಇದ್ದಿದ್ದರೆ ಚುನಾವಣೆ ಮುಗಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿತ್ತು. ರಾಜಕೀಯವಾಗಿ ಅನೈತಿಕ ನಿರ್ಧಾರ ಮಾಡಿರುವ ಪುತ್ರನನ್ನು ನಾನು ಭೇಟಿಯಾಗುವುದಿಲ್ಲ ಎಂದು ತಿಳಿಸಿದರು.

ಮಂಡ್ಯ ಅಭ್ಯರ್ಥಿಯಿಂದ ಸ್ಪಷ್ಟನೆ

ಮಂಡ್ಯ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರೂ ಉಪಚುನಾವಣೆ ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಊಹಾಪೋಹ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡುವೆಯೇ ಅಭ್ಯರ್ಥಿಗೆ ಕರೆ ಮಾಡಿದ ಆರ್.ಅಶೋಕ್ ಸ್ಪಷ್ಟನೆ ಕೊಡಿಸಿದರು. ಮಳವಳ್ಳಿಯಲ್ಲಿ ಪ್ರಚಾರದಲ್ಲಿದ್ದ ಸಿದ್ದರಾಮಯ್ಯ, ‘ನಾನು ಗೌರವಯುತ ಕುಟುಂಬದಿಂದ ಬಂದಿದ್ದೇನೆ. ಬಿಜೆಪಿ ಸಿದ್ಧಾಂತ ಒಪ್ಪಿದ್ದೇನೆ. ಪಕ್ಷ ಬಿಟ್ಟ ಮೇಲೆ ಮನೆಗೆ ಹೋಗುತ್ತೇನೆ. ದಯವಿಟ್ಟು ಅಪಪ್ರಚಾರ ಮಾಡಬೇಡಿ’ ಎಂದರು. ಮಂಡ್ಯ ಅಭ್ಯರ್ಥಿ ನಿವೃತ್ತಿಯಾಗುತ್ತಾರೆಂದು ಹೇಳಿಕೆ ನೀಡಿರುವ ಬೇಳೂರು ಗೋಪಾಲಕೃಷ್ಣಗೆ ತಲೆಕೆಟ್ಟಿದೆ ಎಂದರು.

ಹಣದ ಆಮಿಷಕ್ಕೆ ಬಲಿ: ನಾನು ಸತ್ತರೂ ಜೆಡಿಎಸ್​ಗೆ ಬೆಂಬಲ ನೀಡಲ್ಲ ಎಂದವರ ಮಗ ಈ ರೀತಿ ದ್ರೋಹ ಮಾಡುತ್ತಾರೆಂಬುದು ಗೊತ್ತಿರಲಿಲ್ಲ. ಅವರು ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ ಎಂದು ಆಶೋಕ್ ಆರೋಪಿಸಿದರು. ರಾಮನಗರಕ್ಕೆಸದಾನಂದಗೌಡ ಅವರಿಗಿಂತಲೂ ಉಸ್ತುವಾರಿ ಬೇಕಿತ್ತಾ? ಅಲ್ಲಿ ಪ್ರತಿಯೊಬ್ಬರೂ ಪ್ರಚಾರ ಮಾಡುತ್ತಿದ್ದರು. ಮುಂದೆ ಏನು ಮಾಡಬೇಕೆಂಬ ಬಗ್ಗೆ ಪಕ್ಷದ ವೇದಿಕೆಯಲ್ಲಿ ರ್ಚಚಿಸುತ್ತೇವೆ ಎಂದರು.