ಮೈತ್ರಿ ಬಲೆ, ಕೈನಲ್ಲಿ ಜ್ವಾಲೆ

>

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯದಂತೆ ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿನ ಮೊದಲ ‘ಸೆಮಿಫೈನಲ್ ಕದನ’. ಜತೆಗೆ, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಈ ತ್ರಿಕೋನ ಸಮರ ದೋಸ್ತಿ ಪಕ್ಷಗಳ ಮೈತ್ರಿ ಭವಿಷ್ಯಕ್ಕೂ ಅಗ್ನಿಪರೀಕ್ಷೆ ಎಂಬುದನ್ನು ಸದ್ಯ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕ್ಷೀಕರಿಸಿವೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರ ರೂಪಿಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಈ ಐದು ಕ್ಷೇತ್ರಗಳ ಉಪಚುನಾವಣೆ ಪ್ರತಿಷ್ಠೆಯ ಜತೆಗೆ ಸರ್ಕಾರದ ಭವಿಷ್ಯಕ್ಕೂ ನಿರ್ಣಾಯಕವಾಗಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಇಲಾಖೆಗಳ ನಿಯಂತ್ರಣಕ್ಕಾಗಿ ಜಟಾಪಟಿಯಂತಹ ವಿದ್ಯಮಾನಗಳಿಂದ ಈಗಾಗಲೇ ದೋಸ್ತಿ ಮೈತ್ರಿ ಅಲುಗಾಡಲಾರಂಭಿಸಿದೆ. ಹೀಗಾಗಿ ಉಪಸಮರ ಗೆದ್ದು ಬಿಜೆಪಿಯ ಆತ್ಮವಿಶ್ವಾಸ ಕುಗ್ಗಿಸುವ ಕನಸು ಕಾಣುತ್ತಿರುವ ಎರಡೂ ಪಕ್ಷಗಳಿಗೆ ಉಪಸಮರದಲ್ಲಿನ ಹೊಂದಾಣಿಕೆ ಹೊಸ ಸವಾಲು ತಂದೊಡ್ಡುತ್ತಿದೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟ ನಿರ್ಧಾರದ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರ ಸಿಟ್ಟು ತಣಿದಿಲ್ಲ ಎಂಬುದು ಎರಡೂ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಬಹಿರಂಗವಾಗಿದೆ. ಸೋಮವಾರ ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿಗೆ ಮುನಿರತ್ನ ಹೊರತುಪಡಿಸಿ ಯಾವೊಬ್ಬ ಕೈ ನಾಯಕರೂ ಸಾಥ್ ನೀಡಲಿಲ್ಲ. ಇದೇ ಚಿತ್ರಣ ಮಂಡ್ಯದಲ್ಲಿ ಕಂಡುಬಂತು. ಜೆಡಿಎಸ್​ನ ಶಿವರಾಮೇಗೌಡ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೂ ಜಿಲ್ಲೆಯ ಪ್ರಮುಖ ಕಾಂಗ್ರೆಸ್ಸಿಗರು ಅತ್ತ ಸುಳಿಯಲೇ ಇಲ್ಲ.

ಈ ಉಪ ಚುನಾವಣೆಯ ಫಲಿತಾಂಶ ಏನೇ ಆದರೂ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಮುನಿಸು ಮುಂಬರುವ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಹೆಚ್ಚಿಸಿದೆ.

ಅವಲೋಕನ: 2019ರಲ್ಲಿ ಮೈತ್ರಿ ಮುಂದುವರಿದರೆ ಎದುರಾಗುವ ಸವಾಲುಗಳು, ಕಾರ್ಯಕರ್ತರ ಮನವೊಲಿಕೆ ಜತೆಗೆ ಗೆಲುವಿನ ನಗೆ ಬೀರುವ ಸವಾಲುಗಳನ್ನು ಅವಲೋಕಿಸಿಕೊಳ್ಳಲು ಇದೊಂದು ಪೂರ್ವಭಾವಿ ಪರೀಕ್ಷೆಯಂತೆಯೂ ಭಾಸವಾಗಿದೆ.

ಅಭ್ಯರ್ಥಿ ಆಯ್ಕೆಯ ಹರಸಾಹಸ

ಮೈತ್ರಿ ಪಕ್ಷಗಳು ಕೇವಲ 4 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವಷ್ಟರಲ್ಲಿಯೇ ಹೈರಾಣಾಗಿವೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸೊಸೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಹೆಸರನ್ನು ರಾಮನಗರಕ್ಕೆ ಘೋಷಣೆ ಮಾಡಲು ಜೆಡಿಎಸ್ ನಾಯಕರಿಗೆ ಕಾರ್ಯಕರ್ತರ ಮನವೊಲಿಸಬೇಕಾದ ಸವಾಲು ಎದುರಾಯಿತು. ಇನ್ನು ಮಂಡ್ಯ ಮತ್ತು ಶಿವಮೊಗ್ಗದಲ್ಲಿ ತಮ್ಮ ಅಭ್ಯರ್ಥಿ ಕಣಕ್ಕಿಳಿಯಲಿ ಎಂಬ ಆಸೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇತ್ತಾದರೂ ನಾಯಕರ ಮಾತುಕತೆ ಜೆಡಿಎಸ್ ಕಡೆಗೆ ಹೊರಳಿತು.

ಗೆಲುವಿನ ಮಾನದಂಡ

ಉಪ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಗೆಲುವು ಅಥವಾ ಸೋಲಿನಿಂದ ಗಂಭೀರ ಪರಿಣಾಮವೇನೂ ಆಗುವುದಿಲ್ಲ. ತನ್ನ ಎರಡೂ ಲೋಕಸಭೆ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡರೆ ಕೇಂದ್ರ ಸರ್ಕಾರಕ್ಕಾಗಲಿ, ಬಿಜೆಪಿ ಒಂದು ವಿಧಾನಸಭೆ ಕ್ಷೇತ್ರವನ್ನು ಜಯಿಸಿದರೆ ರಾಜ್ಯ ಸರ್ಕಾರಕ್ಕಾಗಲಿ ಅಪಾಯವಿಲ್ಲ. ಆದರೆ ಮೈತ್ರಿಯ ಜತೆಗೆ ಒಟ್ಟಾರೆ ಚುನಾವಣೆ ನಿರ್ವಹಣೆಯ ದೊಡ್ಡ ಪಾಠವನ್ನಂತೂ ಕಲಿಸುತ್ತದೆ. ಈ ಚುನಾವಣೆಯಲ್ಲಿ ಗೆಲುವು ತೀರಾ ಮುಖ್ಯವಲ್ಲದಿದ್ದರೂ 2019ರ ಚುನಾವಣೆಗೆ ನಿರ್ಣಾಯಕ. ದಕ್ಷಿಣ ಭಾರತದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಿಸುವ ಕರ್ನಾಟಕದಲ್ಲಿ ಆಶ್ಚರ್ಯಕರ ಫಲಿತಾಂಶ ನೀಡಲೇಬೇಕು. ಸದ್ಯದ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಂಡಂತೆ ಶಿವಮೊಗ್ಗ, ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ತನ್ನ ಕಾರ್ಯಕರ್ತರು ಬಂಡಾಯ ಏಳದಂತೆ ತಡೆಯುವುದಷ್ಟೇ ಕಾಂಗ್ರೆಸ್​ಗೆ ಸಾಧ್ಯವಾಗಿದೆ. ಆದರೆ ಅವರು ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳುವ ಸ್ಥಿತಿ ಕಾಣುತ್ತಿಲ್ಲ. ಒಟ್ಟಾರೆ ಚುನಾವಣೆ ನಿರ್ವಹಿಸುವುದಷ್ಟೇ ಅಲ್ಲದೆ ಎರಡೂ ಪಕ್ಷಗಳ ಕಾರ್ಯಕರ್ತರ ಜಗಳಗಳನ್ನು, ಪರಸ್ಪರ ಹೊಂದಾಣಿಕೆಯಾಗಿ ಬದಲಾಯಿಸದಿದ್ದಲ್ಲಿ ಗೆಲುವು ಅಸಾಧ್ಯ.

ಮುಗಿಯದ ಗೊಂದಲ

ಮಿತ್ರಪಕ್ಷಗಳಲ್ಲಿನ ಒಡಂಬಡಿಕೆಯಂತೆ ರಾಮನಗರ ಹಾಗೂ ಮಂಡ್ಯ ಜೆಡಿಎಸ್ ಪಾಲಾಗಿವೆ. ಅಲ್ಲಿ ಜೆಡಿಎಸ್​ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಶಾಸಕ ಮುನಿರತ್ನ ಮಾತ್ರ ಉಪಸ್ಥಿತರಿದ್ದರು. ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಗೈರು ಹಾಜರಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಂಡ್ಯಕ್ಕೆ ಸಚಿವ ಕೆ.ಜೆ. ಜಾರ್ಜ್ ಹೋಗಿದ್ದರೂ ಸಹ ಸ್ಥಳೀಯ ಮುಖಂಡರ ಗೈರು ಹಾಜರಿ ಮಿತ್ರಪಕ್ಷಗಳಲ್ಲಿನ ಒಗ್ಗಟ್ಟಿಗೆ ಸಾಕ್ಷಿಯಾಗಿತ್ತು!

ವಿದೇಶ ಪ್ರವಾಸದಿಂದ ತರಾತುರಿಯಲ್ಲಿ ಬಂದ ಮಧು ಬಂಗಾರಪ್ಪ ಅವರನ್ನು ಶಿವಮೊಗ್ಗ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಆದರೆ ಅವರ ಪರವಾಗಿ ಕಾಂಗ್ರೆಸ್ ಮುಖಂಡರು ಎಷ್ಟರ ಮಟ್ಟಿಗೆ ಕಣದಲ್ಲಿ ಹೋರಾಟ ನಡೆಸಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ.

ಬಗೆಹರಿಯದ ಅಸಮಾಧಾನ

ಜಮಖಂಡಿಯಲ್ಲಿ ಕಾಂಗ್ರೆಸ್ ಆನಂದ ನ್ಯಾಮಗೌಡ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಆ ಮೂಲಕ ಸಿದ್ದು ನ್ಯಾಮಗೌಡ ನಿಧನದ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಆದರೆ ಸ್ಥಳೀಯ ಮುಖಂಡ ಬೆಳಗಲಿ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ.

ಉಸ್ತುವಾರಿಗಳ ನೇಮಕ

ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ ಚುನಾವಣೆ ನಡೆಸುವುದು ಸುಲಭದ ತುತ್ತಲ್ಲ ಎಂದು ಅರಿತಿರುವ ಕಾಂಗ್ರೆಸ್, ಎಲ್ಲ ಕ್ಷೇತ್ರಗಳಿಗೂ ಉಸ್ತುವಾರಿಗಳ ಬೃಹತ್ ತಂಡವನ್ನೆ ರಚಿಸಿದೆ. ಜಮಖಂಡಿ ವಿಧಾನಸಭೆಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಜತೆಗೆ ಜಂಟಿ ಉಸ್ತುವಾರಿ, ಸಮನ್ವಯಕಾರರು, ಉಸ್ತುವಾರಿ ನಾಯಕರ 42 ಜನರ ತಂಡ ರಚಿಸಲಾಗಿದೆ. ಮಂಡ್ಯ ಲೋಕಸಭೆಗೆ ಮಾಜಿ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ17 ಸದಸ್ಯರು, ಬಳ್ಳಾರಿ ಲೋಕಸಭೆಗೆ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 63 ಜನರ ಸಮಿತಿ, ರಾಮನಗರ ವಿಧಾನಸಭೆಗೆ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ 6 ಜನರ ಸಮಿತಿ, ಶಿವಮೊಗ್ಗ ಲೋಕಸಭೆಗೆ ಸಚಿವ ಆರ್. ವಿ. ದೇಶಪಾಂಡೆ ನೇತೃತ್ವದ 15 ಸದಸ್ಯರ ಸಮಿತಿಗಳನ್ನು ರಚಿಸಲಾಗಿದೆ.

ಬಿಜೆಪಿ ರಣಕಹಳೆ

ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲ ಪಕ್ಷಗಳಿಗಿಂತ ಮುಂದಿರುವ ಹಾಗೂ ಯಾವುದೇ ಗೊಂದಲಗಳಿಲ್ಲದ ಬಿಜೆಪಿ ಚುನಾವಣೆಯ ಪ್ರಚಾರದಲ್ಲಿಯೂ ಇತರೆ ಪಕ್ಷಗಳಿಗಿಂತ ಮುಂದಿದೆ. ಶಿವಮೊಗ್ಗದಲ್ಲಿ ಬೃಹತ್ ಬಹಿರಂಗ ಪ್ರಚಾರದ ಮೂಲಕ ಎದುರಾಳಿ ಪಕ್ಷಗಳಿಗೆ ಪಂಥಾಹ್ವಾನ ನೀಡಿದೆ.

ಬಳ್ಳಾರಿ ಬಿಸಿ

ಬಳ್ಳಾರಿ: ಮಂಡ್ಯ, ರಾಮನಗರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠರು ಕೈಗೊಂಡ ನಿರ್ಧಾರ ಅಚ್ಚರಿಯ ಜತೆಗೆ ಜಿಲ್ಲೆಯ ರಾಜಕಾರಣವನ್ನು ಮತ್ತಷ್ಟು ಬಿಸಿಯೇರಿಸಿದೆ. ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ 10 ಜನ ಟಿಕೆಟ್ ಆಕಾಂಕ್ಷಿಗಳನ್ನು ಬದಿಗಿರಿಸಿ ಜಿಲ್ಲೆಗೆ ಸಂಬಂಧವೇ ಇಲ್ಲದ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಡಿ.ಕೆ.ಶಿವಕುಮಾರ್ ಬಳ್ಳಾರಿಯ ಉಸ್ತುವಾರಿಯಾಗಿದ್ದರೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಉಗ್ರಪ್ಪಗೆ ಟಿಕೆಟ್ ದಕ್ಕಿರುವುದು ಸಿದ್ದರಾಮಯ್ಯ ಅವರಿಗಾದ ಮೇಲುಗೈ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬಾರಿ ಪಶ್ಚಿಮ ತಾಲೂಕಿನವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಉಪ ಚುನಾವಣೆ ಘೊಷಣೆಗೆ ಮುನ್ನವೇ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದ್ದರಿಂದಾಗಿ ನಾಗೇಂದ್ರ ಮುಂದಿನ ನಡೆ ಏನೆಂಬ ಕುತೂಹಲ ಮೂಡಿದೆ.