ಬಿಜೆಪಿ ನಿದ್ದೆಗೆಡಿಸಿದ ಜಮಖಂಡಿ ಫಲಿತಾಂಶ

ಅಶೋಕ ಶೆಟ್ಟರ, ಬಾಗಲಕೋಟೆ: ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಸೋಲು ಸಹ ಗೌರವಯುತವಾಗಿರಬೇಕು. ಆದರೆ, ಜಮಖಂಡಿ ಉಪಸಮರದ ಫಲಿತಾಂಶ ಬಿಜೆಪಿ ನಿದ್ದೆಗೆಡಿಸಿದೆ. ಕನಸು ಮನಸಿನಲ್ಲೂ ಊಹೆ ಮಾಡದ ರೀತಿಯಲ್ಲಿ ಭಾರಿ ಅಂತರದ ಹಿನ್ನಡೆ ಅನುಭವಿಸಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಉಪಚುನಾವಣೆ ಹಿನ್ನೆಲೆ ಕ್ಷೇತ್ರದಲ್ಲಿ ಸಾವು-ಸೋಲಿನ ಅನುಕಂಪದ ಬಗ್ಗೆ ಮಾತುಗಳು ಕೇಳಿ ಬಂದರೂ ಅದು ದೊಡ್ಡಮಟ್ಟದ ಅಲೆಯನ್ನೇನು ಸೃಷ್ಟಿಸಿರಲಿಲ್ಲ. ಅಲೆ ಎಬ್ಬಿಸಲು ಸಾಕಷ್ಟು ಪ್ರಯತ್ನಗಳು ನಡೆದರೂ ಅದು ಅಲ್ಪಮಟ್ಟಿಗೆ ಕಾಣಿಸಿತ್ತು.

ಆದರೆ, ಈಗ ಹೊರಬಿದ್ದಿರುವ ಫಲಿತಾಂಶ ಕಾಂಗ್ರೆಸ್ ಪಕ್ಷವೇ ಹುಬ್ಬೇರಿಸುವಂತೆ ಮಾಡಿದೆ. ಕೈ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡಗೆ ಮತಗಳು ಹರಿದು ಬಂದಿದ್ದು ಯಾವ ಮೋಡಿಯಿಂದ ಎನ್ನುವುದು ಅರಿಯಬೇಕಿದೆ. ಬಿಜೆಪಿ ಎಲ್ಲಿ ಎಡವಿತು ಎನ್ನುವುದು ಗಮನಾರ್ಹವಾಗಿದೆ. ಬಿಜೆಪಿ ಪಾಲಿಗೆ ಆತ್ಮಾವಲೋಕನಕ್ಕೆ ಇದು ಸೂಕ್ತ ಸಮಯವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೇಗೆ ಅಳೆದು ತೂಗಿದರೂ ಇತ್ತೀಚಿನ ವರ್ಷಗಳಲ್ಲಿ ಬಾಗಲಕೋಟೆ ಜಿಲ್ಲೆ ಬಿಜೆಪಿಗೆ ಭದ್ರಕೋಟೆ ಎನ್ನುವುದು ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಬೀತಾಗುತ್ತ ಬಂದಿದೆ. ಇದಕ್ಕೆ ಜಮಖಂಡಿ ಕ್ಷೇತ್ರವೂ ಹೊರತಾಗಿರಲಿಲ್ಲ. ಆದರೆ, ಉಪಚುನಾವಣೆ ಫಲಿತಾಂಶ ನಿಜಕ್ಕೂ ಕಮಲ ಪಾಳೆಯದಲ್ಲಿ ಆಘಾತ ಉಂಟು ಮಾಡಿದೆ.

ಜಮಖಂಡಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಜಮಖಂಡಿ ನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆ. ಆದರೆ, ಗ್ರಾಮೀಣ ಪ್ರದೇಶ ಬಿಜೆಪಿಗೆ ಭದ್ರಕೋಟೆ ಆಗಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು. ಆದರೆ, ಉಪಸಮರದಲ್ಲಿ ಗ್ರಾಮೀಣ ಪ್ರದೇಶದಲ್ಲೇ ಬಿಜೆಪಿ ಹೆಚ್ಚಿನ ಹಿನ್ನಡೆ ಅನುಭವಿಸಿದ್ದು ಭಾರಿ ಅಂತರದ ಸೋಲಿಗೆ ಕಾರಣವಾಗಿದೆ.

48 ಗ್ರಾಮಗಳು ಹಾಗೂ ಒಂದು ನಗರ ಪ್ರದೇಶ ಒಳಗೊಂಡಿರುವ ಜಮಖಂಡಿ ವಿಧಾನಸಭೆ ಕ್ಷೇತ್ರದ ಮೂರ್ನಾಲ್ಕು ಗ್ರಾಮಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗೂ ಕಾಂಗ್ರೆಸ್ ಪಕ್ಷವೇ ಮತಬೇಟೆಯಲ್ಲಿ ಮುಂದಿದೆ. ಕಮಲ ಮುನ್ನಡೆ ಸಾಧಿಸಿರುವ ಗ್ರಾಮಗಳಲ್ಲಿ ಅಂತರ ಒಂದು ಸಾವಿರ ತಲುಪಿಲ್ಲ. ಕಾಂಗ್ರೆಸ್ ಪ್ರತಿ ಗ್ರಾಮದಲ್ಲಿ ನಿರೀಕ್ಷೆ ಮೀರಿ ಮತಗಳನ್ನು ಪಡೆದುಕೊಂಡಿದೆ.

ಗದ್ಯಾಳ, ಜಕನೂರು, ಬುದ್ನಿ ಗ್ರಾಮಗಳನ್ನು ಬಿಟ್ಟರೆ ಉಳಿದೆಲ್ಲ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಅಂತರದ ಮತಗಳು ಮೂರಂಕಿ, ನಾಲ್ಕು ಅಂಕಿಗಳಲ್ಲಿ ಇದೆ. ಜಮಖಂಡಿ ನಗರದಲ್ಲಂತೂ ಅದು ಐದಂಕಿ ತಲುಪಿದೆ. ಪರಿಣಾಮ ಆನಂದ ನ್ಯಾಮಗೌಡ ಅವರು ಭರ್ತಿ 39480 ಮತಗಳ ಅಂತರ ಕಾಯ್ದುಕೊಳ್ಳಲು ಕಾರಣವಾಗಿದೆ.

ಜನಬೆಂಬಲವೋ ಆಮಿಷವೋ?: ಜಮಖಂಡಿ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ.

ಈ ಫಲಿತಾಂಶ ಜನರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಬೆಂಬಲ ಅಲ್ಲವೇ ಅಲ್ಲ. ದುಡ್ಡು ಕೊಟ್ಟು ಮತಗಳನ್ನು ಖರೀದಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ 30 ಕೋಟಿ ರೂ. ಖರ್ಚು ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪ ಸೋಲಿನ ಹತಾಶೆಯ ಪರಮಾವಧಿ ಎಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡುತ್ತಿದ್ದಾರೆ. ಈ ಫಲಿತಾಂಶ ಮತದಾರರು ಸಿದ್ದು ನ್ಯಾಮಗೌಡ ಅವರಿಗೆ ತೋರಿದ ಪ್ರೀತಿ, ಕಾಂಗ್ರೆಸ್ ಪಕ್ಷದ ಬಗ್ಗೆ ಒಲುವು ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳು ರಾಜಕಾರಣ ಎಂದೆನಿಸಿದರೂ ವಾಸ್ತವದಲ್ಲಿ ಜಮಖಂಡಿ ಕ್ಷೇತ್ರದಲ್ಲಿ ಹಿಂದೆಂದು ಕಂಡು ಕೇಳರಿಯದ ಪ್ರಮಾಣದಲ್ಲಿ ಹಣದ ಹರಿವು ಆಗಿದೆ ಎನ್ನುವುದು ಅಲ್ಲಿನ ಬಹುತೇಕ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗೆಂದ ಮಾತ್ರಕ್ಕೆ ಲಕ್ಷ್ಮೀ ಕುಣಿತ ಬರೀ ಒಂದು ಪಕ್ಷದಿಂದ ಮಾತ್ರ ನಡೆದಿದೆ ಎನ್ನಲಾಗದು. ಎರಡು ಕಡೆಗೂ ದುಡ್ಡು ಹರಿದಾಡಿದ್ದು, ಒಂದು ಪಕ್ಷ ಕಡಿಮೆ ಮಾಡಿದ್ದರೆ ಮತ್ತೊಂದು ಪಕ್ಷ ಅತಿ ಎನ್ನುವಷ್ಟು ಖರ್ಚು ಮಾಡಿದೆ. ಆದರೆ, ಹಣದ ಹರಿವಿನ ಪ್ರಮಾಣ ಹಿಂದೆಂದೂ ಯಾವ ಪಕ್ಷ ಮತ್ತು ಯಾವ ಅಭ್ಯರ್ಥಿಯೂ ಮಾಡಿರಲಿಲ್ಲ. ಇದರಲ್ಲೇನು ಅನುಮಾನಗಳೇ ಬೇಡ ಎಂದು ಹೆಸರು ಹೇಳಲಿಚ್ಛಿಸದ ಪ್ರಜ್ಞಾವಂತ ಮತದಾರರೊಬ್ಬರು ಹೇಳುತ್ತಾರೆ.

ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎನ್ನುವ ಕಾರಣಕ್ಕೆ ನಾವು ಆರೋಪ ಮಾಡುತ್ತಿಲ್ಲ. ಕ್ಷೇತ್ರದ ಯಾರನ್ನಾದರೂ ನೀವು ಆಂತರಿಕವಾಗಿ ಮಾತನಾಡಿಸಿ ನೋಡಿ, ಆಗ ನಿಮಗೆ ಗೊತ್ತಾಗುತ್ತದೆ. ಕೇವಲ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಹಣದ ಹೊಳೆಯನ್ನು ಹರಿಸಿದೆ. ಇದರಿಂದ ಮುಂಬರುವ ಚುನಾವಣೆಗಳಲ್ಲಿ ಶ್ರೀಸಾಮಾನ್ಯರು ಸ್ಪರ್ಧೆ ಮಾಡಲು ಹಿಂದೇಟು ಹಾಕುವಂತಾಗಿದೆ. ದುಡ್ಡಿದ್ದವರು ಮಾತ್ರ ಚುನಾವಣೆಗೆ ನಿಲ್ಲಬೇಕು ಎನ್ನುವ ಸಂದೇಶ ರವಾನಿಸಿದಂತಾಗಿದೆ.

ಬಿ.ಎಸ್.ಸಿಂಧೂರ ಬಿಜೆಪಿ ಮುಖಂಡ, ಜಮಖಂಡಿ