ಕೈ-ದಳ ಮೈತ್ರಿಕೂಟಕ್ಕೆ ನಾಲ್ಕು, ಕಮಲಕ್ಕೊಂದು

ಮಂಡ್ಯದಲ್ಲಿ ಜೆಡಿಎಸ್​ಗೆ ನಿರೀಕ್ಷಿತ ವಿಜಯ

| ಮಾದರಹಳ್ಳಿ ರಾಜು ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ದಾಖಲೆ ಅಂತರದಿಂದ ಜಯ ಸಾಧಿಸಿದ್ದಾರೆ. ಇದರೊಂದಿಗೆ ಅವರ ರಾಜಕೀಯ ವನವಾಸ ಅಂತ್ಯವಾಗಿದೆ. ಮತ್ತೊಂದೆಡೆ, ಭಾರಿ ಅಂತರದ ಸೋಲಿನ ನಡುವೆಯೂ ಬಿಜೆಪಿ ಪಡೆದ ಮತಗಳು ಪಕ್ಷದ ನಾಯಕರು, ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರಲ್ಲಿ ಚೈತನ್ಯ ಮೂಡಿಸಿದೆ.

ಮತ ಎಣಿಕೆ ಪ್ರಕ್ರಿಯೆಯ 21 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡು ಬಂದ ಶಿವರಾಮೇಗೌಡ ಅಂತಿಮವಾಗಿ 5,69,302 ಮತ ಪಡೆದರೆ, ಬಿಜೆಪಿಯ ಡಾ.ಸಿದ್ದರಾಮಯ್ಯ 2,44,377 ಮತ ಪಡೆದು ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಶಿವರಾಮೇಗೌಡ 3,24,925 ಮತಗಳ ಭಾರಿ ಅಂತರದಿಂದ ಜಯ ಸಾಧಿಸುವ ಮೂಲಕ 1998ರಲ್ಲಿ ಇದೇ ಕ್ಷೇತ್ರದಲ್ಲಿ ಜನತಾದಳ ಅಭ್ಯರ್ಥಿಯಾಗಿದ್ದ ಅಂಬರೀಶ್, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡರ ವಿರುದ್ಧ 1,80,523 ಮತಗಳ ಅಂತರದಿಂದ ಗೆದ್ದು ನಿರ್ವಿುಸಿದ್ದ ದಾಖಲೆಯನ್ನು ಮುರಿದಿದ್ದಾರೆ. ವರ್ಣರಂಜಿತ ರಾಜಕಾರಣಿ ಎನಿಸಿರುವ ಎಲ್​ಆರ್​ಎಸ್ ಇದುವರೆಗೆ 9 ಚುನಾವಣೆಗಳನ್ನು ಎದುರಿಸಿದ್ದಾರೆ. 1983ರಲ್ಲಿ ನಾಗಮಂಗಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಅವರು, 1987ರಲ್ಲಿ ಬಿಂಡಿಗನವಿಲೆ ಜಿಪಂ ಕ್ಷೇತ್ರದಿಂದ ಗೆದ್ದಿದ್ದರು. 1989, 1994ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದು ಶಾಸಕರಾಗಿದ್ದರು. 1999, 2004ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತರು. 2008, 2013ರಲ್ಲಿ ಸ್ಪರ್ಧೆಗಿಳಿಯಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಿಂದ ಕಣಕ್ಕಿಳಿದರೆ, 2016ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ, ಗೆಲುವು ಮರೀಚಿಕೆಯಾಗಿತ್ತು.

ದೋಸ್ತಿಗಳಿಗೆ ಎಚ್ಚರಿಕೆ ಗಂಟೆ

ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಭದ್ರ ನೆಲೆ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹೌದು. ಉಪಚುನಾವಣೆ ಫಲಿತಾಂಶದಿಂದಾಗಿ ಜೆಡಿಎಸ್-ಕಾಂಗ್ರೆಸ್ 2019ರ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತನಾಡತೊಡಗಿವೆ. ಆದರೆ, ನಾಯಕರು ಒಂದಾದರೂ ತಾವು ಒಂದಾಗುವುದಿಲ್ಲ ಎಂಬ ಸಂದೇಶವನ್ನು ಕಾರ್ಯಕರ್ತರು ಈ ಉಪಚುನಾವಣೆ ಯಲ್ಲಿ ರವಾನಿಸಿದ್ದಾರೆ. ಅಭ್ಯರ್ಥಿ ಸಿದ್ದರಾಮಯ್ಯ ಜನರಿಗೆ ಪರಿಚಯ ಇಲ್ಲದಿರುವುದು, ಆರಂಭದಲ್ಲಿದ್ದ ಅಪಸ್ವರ, ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕಿದರೂ ಬಿಜೆಪಿ ಮತ ಗಳಿಕೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. 2019ರಲ್ಲಿ ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿ ದಳದ ಅಭ್ಯರ್ಥಿಯೇ ಸ್ಪರ್ಧಿಸಿದರೆ, ಈ ವೇಳೆ ಬಿಜೆಪಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿದರೆ ‘ಕಮಲ’ ಅರಳುವ ಸಾಧ್ಯತೆ ತಳ್ಳಿ ಹಾಕಲಾಗದು. ಮಂಡ್ಯ ಲೋಕಸಭೆಗೆ ನಡೆದಿರುವ 20 ಚುನಾವಣೆಗಳಲ್ಲಿ ಮತದಾರ ಬಿಜೆಪಿಗೆ ಈ ಬಾರಿ 2,44,377 ಮತ ನೀಡಿರುವುದು ದಾಖಲೆ. 1991ರಲ್ಲಿ ವಾಜಪೇಯಿ ಅಲೆಯಲ್ಲಿ ಡಿ.ರಾಮಲಿಂಗಯ್ಯ 1,64,153, 2009ರಲ್ಲಿ ಎಲ್.ಆರ್.ಶಿವರಾಮೇಗೌಡ 1,44,875 ಮತ ಗಳಿಸಿದ್ದರೆ, 2014ರ ಮೋದಿ ಅಲೆಯಲ್ಲಿ ಬಿ.ಶಿವಲಿಂಗಯ್ಯ 86,993 ಮತ ಪಡೆದಿದ್ದರು.


ಉಗ್ರಾವತಾರಕ್ಕೆ ಬಿಜೆಪಿ ಶಾಂತ

| ಅಶೋಕ ನೀಮಕರ್ ಬಳ್ಳಾರಿ

ಲೋಕಸಭಾ ಉಪಚುನಾವಣೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರನ್ನು ಮತ್ತಷ್ಟು ಭದ್ರಪಡಿಸಿದ್ದರೆ, ಬಿಜೆಪಿ ಬುಡ ಅಲುಗಾಡಿಸಿದೆ. ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು 14 ವರ್ಷಗಳ ಬಳಿಕ ದಾಖಲೆಯ ಮತಗಳ ಅಂತರದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ವನವಾಸಕ್ಕೆ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ವರ್ಣರಂಜಿತ ತೆರೆ ಎಳೆದಿದ್ದಾರೆ.

ಚುನಾವಣೆಯಲ್ಲಿ ಪ್ರದೇಶ, ಜಾತಿ, ಭಾಷೆ, ಅಭಿವೃದ್ಧಿ ಸೇರಿ ಹಲವಾರು ವಿಚಾರಗಳು ಚರ್ಚೆಗೆ ಬಂದಿದ್ದವು. ಉಗ್ರಪ್ಪ ‘ನಾನ್ ಲೋಕಲ್’ ಎಂಬುದರ ಮೂಲಕ ಆರಂಭವಾದ ಪ್ರಚಾರ, ಮನೆ ಮಗಳು ಶಾಂತಾರನ್ನು ಗೆಲ್ಲಿಸಿ ಎಂದೆನ್ನುವ ಮುಖೇನ ಕೊನೆಗೊಂಡಿತ್ತು.

ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಷ್ಠೆ ಹಿಗ್ಗಿದ್ದರೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ವರ್ಚಸ್ಸು ಕುಗ್ಗುವಂತೆ ಮಾಡಿದೆ. ಸ್ವತಃ ಸಹೋದರಿ ಜೆ.ಶಾಂತಾ ಸ್ಪರ್ಧಿಸಿದ್ದರಿಂದ ಶ್ರೀರಾಮುಲು, ಕಾಂಗ್ರೆಸ್​ನ್ನು ಕೆಡವಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕಾಂಗ್ರೆಸ್ ಬಲ ಪ್ರದರ್ಶನ ಹಾಗೂ ಕಾರ್ಯತಂತ್ರದ ಮುಂದೆ ಬಿಜೆಪಿ ಕೊನೆಯ ದಿನಗಳಲ್ಲಿ ‘ಶಸ್ತ್ರ ತ್ಯಾಗ’ ಮಾಡುವ ಸನ್ನಿವೇಶ ಸೃಷ್ಟಿಸಿತ್ತು. ಶ್ರೀರಾಮುಲು ಭಾವನಾತ್ಮಕ ಮಾತುಗಳು, ಕೈ ನಾಯಕರ ವಿರುದ್ಧ ನಡೆಸಿದ ಟೀಕಾಪ್ರಹಾರ ಯಾವುದನ್ನೂ ಮತದಾರರು ಪರಿಗಣಿಸಿಲ್ಲ. ಮೊಳಕಾಲ್ಮೂರು ಬಳಿ ವಾಸ್ತವ್ಯ ಹೂಡುವ ಮೂಲಕ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಬಿಜೆಪಿಗೆ ಬಲ ತುಂಬಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ರೆಡ್ಡಿ ಮಾಡಿದ ವೈಯಕ್ತಿಕ ಟೀಕೆ ಬಿಜೆಪಿ ಹಿನ್ನಡೆಗೆ ಕಾರಣವಾದವು ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆ ಫಲಿತಾಂಶ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ರಾಜಕೀಯ ಸಾಮ್ರಾಜ್ಯ ಕುಸಿಯುತ್ತಿರುವುದಕ್ಕೆ ಸಾಕ್ಷಿ ಎನ್ನುವಂತಿದೆ. ರೆಡ್ಡಿ- ರಾಮುಲು ಕುಟುಂಬದವರು ಪ್ರತಿನಿಧಿಸುವ ಬಳ್ಳಾರಿ ನಗರ, ಗ್ರಾಮೀಣ, ಕಂಪ್ಲಿ ಕ್ಷೇತ್ರಗಳಲ್ಲೂ ಬಿಜೆಪಿ ನಿರೀಕ್ಷಿತ ಮತ ಪಡೆಯಲು ಸಾಧ್ಯವಾಗಿಲ್ಲ.

ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಸೋಲಿನಿಂದ ಹಿನ್ನಡೆ ಯಾಗಿದ್ದು, ಆತ್ಮಾವಲೋಕನ ಮಾಡುತ್ತೇವೆ. ಈ ಚುನಾವಣೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ.

| ಬಿ.ಶ್ರೀರಾಮುಲು ಬಿಜೆಪಿ ಶಾಸಕ

ಯಾರಿಗೆ ಸಚಿವಗಿರಿ?

ಉಪಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮಾತುಗಳು ಕೇಳಿಬರುತ್ತಿವೆ. ಹೆಚ್ಚು ಮತ ಗಳಿಸಿಕೊಟ್ಟವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಕಾಂಗ್ರೆಸಿನ ಬಿ.ನಾಗೇಂದ್ರ ಪ್ರತಿನಿಧಿಸುವ ಬಳ್ಳಾರಿ ಗ್ರಾಮೀಣದಲ್ಲಿ 33,255 (ಒಟ್ಟು-83,918), ಇ.ತುಕಾರಾಮ್ ಗೆದ್ದಿರುವ ಸಂಡೂರಿನಲ್ಲಿ 38,675 (ಒಟ್ಟು-85,140), ಪಿ.ಟಿ.ಪರಮೇಶ್ವರ ನಾಯ್ಕರ ಹಡಗಲಿಯಲ್ಲಿ 31,419 (ಒಟ್ಟು-70,598), ಭೀಮಾನಾಯ್ಕ ಸ್ಪರ್ಧಿಸಿರುವ ಹಗರಿಬೊಮ್ಮನಹಳ್ಳಿಯಲ್ಲಿ 30,262 (ಒಟ್ಟು-83,364), ಆನಂದ್ ಸಿಂಗ್ ಪ್ರತಿನಿಧಿಸಿರುವ ವಿಜಯನಗರದಲ್ಲಿ 29,460 (ಒಟ್ಟು-82,832) ಹಾಗೂ ಕಂಪ್ಲಿಯಲ್ಲಿ 34,448 (ಒಟ್ಟು-84,466) ಮತಗಳು ಕಾಂಗ್ರೆಸಿಗೆ ಮುನ್ನಡೆ ನೀಡಿವೆ. ಸಂಡೂರು ಹೆಚ್ಚು, ವಿಜಯನಗರ ಕಡಿಮೆ ಮುನ್ನಡೆ ನೀಡಿದೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದರಿಂದ ಪಕ್ಷ ಸಂಪುಟ ವಿಸ್ತರಣೆಯಲ್ಲಿ ಯಾವ ಶಾಸಕರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ.

ಉಗ್ರಪ್ಪ ದಾಖಲೆ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1971ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಕೆ.ಆರ್.ವಿ.ರಾವ್, ಸ್ವತಂತ್ರ ಪಕ್ಷದ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ವಿರುದ್ಧ 1.52 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2.43 ಲಕ್ಷ ಮತಗಳ ಅಂತರದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ದಾಖಲೆಯನ್ನೇ ಮುರಿದಿದ್ದಾರೆ. 1999ರಲ್ಲಿ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ವಿರುದ್ಧ 56,100 ಮತಗಳ ಅಂತರದಿಂದ ಗೆದ್ದಿದ್ದರು ಎಂಬುದು ಗಮನಾರ್ಹ.


ಶಿವಮೊಗ್ಗು ಉಳಿಸಿಕೊಂಡ ಭಾಜಪ

ಶಿವಮೊಗ್ಗ: ಉಪಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದ್ದು, ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ 52,148 ಮತಗಳ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಜಯ ಗಳಿಸಿದ್ದಾರೆ. ಮಾಜಿ ಸಿಎಂ ಜೆ.ಎಚ್. ಪಟೇಲ್ ಪುತ್ರ, ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ನೋಟಾಗಿಂತ ಕಡಿಮೆ ಮತ ಗಳಿಸಿ ಹೀನಾಯ ಸೋಲು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಿವಕುಮಾರಗೌಡ ಠೇವಣಿ ಕಳೆದುಕೊಂಡಿದ್ದರೂ ಮಹಿಮಾಗಿಂತ ಅಧಿಕ ಮತ ಗಳಿಸಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಸೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಪಡೆದರೆ, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪಗೆ ಭದ್ರಾವತಿ ಹಾಗೂ ಸಾಗರದಲ್ಲಿ ತೃಪ್ತಿಕರ ಲೀಡ್, ಸೊರಬದಲ್ಲಿ ಅತ್ಯಲ್ಪ ಮುನ್ನಡೆ ಲಭಿಸಿದೆ. ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆಯಾದ ನಂತರ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ಸಿಗದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಸಿಗುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಮಧುಗೆ ಮುನ್ನಡೆ ಸಿಕ್ಕಿದೆ.

ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಂತರ ಪಕ್ಷದ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು. ಜಮಖಂಡಿ ಮತ್ತು ಬಳ್ಳಾರಿ ಕ್ಷೇತ್ರಗಳ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಮತ್ತೆ ರಾಷ್ಟ್ರ ರಾಜಕಾರಣಕ್ಕೆ

ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಜಯಿಸುವ ಮೂಲಕ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳಿದ್ದಾರೆ. ಲೋಕಸಭಾ ಚುನಾವಣೆ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದ ರಾಘವೇಂದ್ರ ಬದಲಾದ ಪರಿಸ್ಥಿತಿಯಲ್ಲಿ ಬಿಎಸ್​ವೈ ರಾಷ್ಟ್ರ ರಾಜಕಾರಣಕ್ಕೆ ಹೋದಾಗ, ತಂದೆ ತೆರವು ಮಾಡಿದ್ದ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ತಂದೆ ರಾಜ್ಯ ರಾಜಕಾರಣಕ್ಕೆ ಮರಳುತ್ತಿದ್ದಂತೆ ರಾಘವೇಂದ್ರ ಈಗ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮರಳಿದ್ದಾರೆ.

ತಂದೆ-ಮಗ ಇಬ್ಬರ ವಿರುದ್ಧವೂ ಗೆಲುವು

ಬಿ.ವೈ.ರಾಘವೇಂದ್ರ ಈ ಗೆಲುವಿನ ಮೂಲಕ ತಂದೆ ಹಾಗೂ ಮಗ ಇಬ್ಬರ ವಿರುದ್ಧವೂ ಸ್ಪರ್ಧೆ ಮಾಡಿ ಲೋಕಸಭಾ ಪ್ರವೇಶಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. 2009ರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಬಂಗಾರಪ್ಪ ವಿರುದ್ಧ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಬಿ.ವೈ.ರಾಘವೇಂದ್ರ 52,893 ಮತಗಳ ಅಂತರಲ್ಲಿ ಗೆದ್ದಿದ್ದರು. ಇದೀಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.


ಕಮಲಕ್ಕೆ ಎಚ್ಚರಿಕೆ ಕೈ ಅಸ್ತಿತ್ವಕ್ಕೆ ಧಕ್ಕೆ

| ಎನ್. ಡಿ. ಶಾಂತಕುಮಾರ ಶಿವಮೊಗ್ಗ

ಶಿವಮೊಗ್ಗ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮುಂದುವರಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಅಸ್ತಿತ್ವದ ಪ್ರಶ್ನೆ ಎದುರಾಗುವ ಮುನ್ಸೂಚನೆಗಳು ಕಾಣಿಸಿಕೊಂಡಿವೆ. ಯಾವುದೇ ಪಕ್ಷದ ನಾಯಕರು ಫಲಿತಾಂಶದ ಬಗ್ಗೆ ಏನೇ ವಿವರಣೆ ನೀಡಿದರೂ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಮಧು ಬಂಗಾರಪ್ಪ ತೀವ್ರ ಪೈಪೋಟಿ ನೀಡಿದ್ದು, ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲೂ ಶಿವಮೊಗ್ಗ ಜೆಡಿಎಸ್ ಪಾಲಾಗುವುದು ನಿಶ್ಚಿತ. ಹೀಗಾಗಿ, ಮಧು ಮತ್ತು ರಾಘವೇಂದ್ರ ಮತ್ತೆ ಮುಖಾಮುಖಿ ಆಗಬಹುದು. ಉಪಚುನಾವಣೆ ಫಲಿತಾಂಶವನ್ನು ಕಳೆದ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಹೋಲಿಕೆ ಮಾಡಿದಾಗ ಬಿಜೆಪಿ ಗೆಲುವಿನ ಅಂತರ ತುಂಬ ಕಡಿಮೆಯಾಗಿರುವುದು ನಿಜ. ಆದರೆ 2009ರ ಚುನಾವಣೆಗೆ ಹೋಲಿಸಿದರೆ, ಗೆಲುವಿನ ಅಂತರದಲ್ಲಿ ಅಂತಹ ವ್ಯತ್ಯಾಸ ಕಾಣಿಸುತ್ತಿಲ್ಲ. ಕೈ-ದಳ ಮೈತ್ರಿಕೂಟ ಮುಂದುವರಿದರೆ ಕಷ್ಟ ಎನ್ನುವ ಸಂದೇಶ ಈ ಉಪಚುನಾವಣೆ ಮೂಲಕ ಬಿಜೆಪಿಗೆ ರವಾನೆಯಾಗಿದ್ದರೆ, ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.

ಜೆಡಿಎಸ್​ಗೆ ಲಾಭ: ಕಾಂಗ್ರೆಸ್ ಜತೆ ಮಾಡಿಕೊಂಡ ಕ್ಷೇತ್ರ ಹೊಂದಾಣಿಕೆಯಿಂದ ಜೆಡಿಎಸ್​ಗೆ ಶಿವಮೊಗ್ಗದಲ್ಲಿ ನೆಲೆ ಭದ್ರಪಡಿಸಿಕೊಳ್ಳಲು ಸಹಾಯಕವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿರುವುದರಿಂದ ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲೇ ಶಿವಮೊಗ್ಗ ಬಿಟ್ಟುಕೊಡಬೇಕೆಂದು ಜೆಡಿಎಸ್ ಹಕ್ಕು ಮಂಡನೆ ಮಾಡುವುದರಲ್ಲಿ ಸಂದೇಹವಿಲ್ಲ. ಅಲ್ಲದೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಕೂಡ ಮಧು ಅವರೇ ಅಭ್ಯರ್ಥಿ ಎಂದು ಬುಧವಾರ ಘೊಷಿಸಿದ್ದಾರೆ.

ವಿಶೇಷವೆಂದರೆ, ಬರಲಿರುವ ಚುನಾವಣೆಯಲ್ಲೂ ಮಧು ಅವರೇ ಅಭ್ಯರ್ಥಿ ಎಂದು ಕಾಂಗ್ರೆಸ್ ಮುಖಂಡರೇ ಉಪ ಚುನಾವಣೆ ಪ್ರಚಾರದ ವೇಳೆ ಘೊಷಣೆ ಮಾಡಿರುವುದರಿಂದ ಮೈತ್ರಿಕೂಟ ಇರುವವರೆಗೆ ಕ್ಷೇತ್ರ ಕಾಂಗ್ರೆಸ್​ಗೆ ಸಿಗುವುದು ಕಷ್ಟ.

ಒಂದಾದ ಈಡಿಗ ಸಮಾಜ: ಯಡಿಯೂರಪ್ಪ ಪರವಾಗಿ ಲಿಂಗಾಯತ ಸಮಾಜ ಒಂದಾಗುವಂತೆ ಈ ಚುನಾವಣೆಯಲ್ಲಿ ಈಡಿಗ ಸಮಾಜ ಕೂಡ ಒಗ್ಗಟ್ಟಾಗಿರುವಂತೆ ಕಾಣಿಸುತ್ತಿದೆ. ಸಾಗರ ಮತ್ತು ಸೊರಬ ವಿಧಾನಸಭಾ ಕ್ಷೇತ್ರಗಳಲ್ಲಿ ಮಧು ಬಂಗಾರಪ್ಪ ಬಿಜೆಪಿಗಿಂತ ಅಧಿಕ ಮತ ಗಳಿಸಿರುವುದು ಇದಕ್ಕೆ ಸಾಕ್ಷಿ. ವಿಧಾನಸಭೆಯಲ್ಲಿ (ಕುಮಾರ ಬಂಗಾರಪ್ಪ) ಅಣ್ಣ ಇದ್ದಾನೆ. ತಮ್ಮ (ಮಧು ಬಂಗಾರಪ್ಪ) ಲೋಕಸಭೆಯಲ್ಲಿರಲಿ ಎನ್ನುವ ಮನೋಭಾವ ಸಮುದಾಯದಿಂದ ವ್ಯಕ್ತವಾಗಿದ್ದರ ಪರಿಣಾಮ ಈ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್​ಗೆ ಅಧಿಕ ಮತಗಳು ಲಭಿಸಿರಬಹುದು.

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ

ಮತದಾನ ಮುಗಿದ ಮರುದಿನವೇ ಬಿಜೆಪಿಯಲ್ಲಿ ಎಲ್ಲವೂ ಸರಿ ಎಲ್ಲ ಎಂಬುದು ಸ್ಪಷ್ಟವಾಗಿದೆ. ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ‘ಉಪಾಧ್ಯಕ್ಷ ಸ್ಥಾನ ಒಪ್ಪಿಕೊಂಡಿಲ್ಲ. ಹಿಂದೆ ಕಾರಣವಿಲ್ಲದೆ ಹುದ್ದೆಯಿಂದ ಬಿಡುಗಡೆ ಮಾಡಿ, ಚುನಾವಣೆ ಬಂದಾಗ ನೇಮಕ ಮಾಡಲಾಗಿದೆ. ಬಿಎಸ್​ವೈ ಒಡೆದ ಮನಸ್ಸುಗಳನ್ನು ಒಂದು ಮಾಡಬೇಕು’ ಎಂದಿದ್ದಾರೆ. ಬಿಎಸ್​ವೈ ಮೇಲೆ ಕೆಲವರಿಗೆ ಇರುವ ಮುನಿಸಿನಿಂದಾಗಿ ಒಂದು ವರ್ಗದ ಬಿಜೆಪಿಯ ಸಾಂಪ್ರದಾಯಿಕ ಮತಗಳು ಮಧುಗೆ ಬೀಳದಿದ್ದರೂ ಮತದಾನದಿಂದ ದೂರು ಉಳಿದರೆ ಬಿಜೆಪಿಗೆ ಹಿನ್ನಡೆಯಾಗೋದು ಸ್ಪಷ್ಟ. ಈ ಅಸಮಾಧಾನ ಈ ಚುನಾವಣೆಯಲ್ಲೇ ಪರಿಣಾಮ ಬೀರಿರುವುದನ್ನು ತಳ್ಳಿ ಹಾಕುವಂತಿಲ್ಲ.

ಉಪಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಬಹಳಷ್ಟಿದೆ. ಕಾಂಗ್ರೆಸ್-ಜೆಡಿಎಸ್ ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆ ಗೆದ್ದಿವೆ. ಬಳ್ಳಾರಿ ಲೋಕಸಭಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಎಚ್ಚರಿಕೆಯ ಗಂಟೆಯಾಗಿದ್ದು, ಪಕ್ಷ ಸಂಘಟನೆಗೆ ನಾಳೆಯಿಂದಲೇ ಎಲ್ಲ ಮುಖಂಡರು ರಾಜ್ಯ ಪ್ರವಾಸ ಆರಂಭಿಸುತ್ತೇವೆ. ಮಂಡ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಆ ಭಾಗದ ಜನ ಹೆಚ್ಚಿನ ಮತ ನೀಡಿ ನೆಲೆ ಕರುಣಿಸಿದ್ದಾರೆ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ


ಗೆದ್ದರೂ ನಿಲ್ಲದ ರಾಮನ ಲೆಕ್ಕ?

| ಗಂಗಾಧರ್ ಬೈರಾಪಟ್ಟಣ ರಾಮನಗರ

ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ದಾಖಲೆ ಮತಗಳೊಂದಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಭಾರೀ ಅಂತರದ ಗೆಲುವಿನ ನಿರೀಕ್ಷೆ ಇತ್ತಾದರೂ, 1.09 ಲಕ್ಷ ಮತ ಅಂತರ ಸ್ವತಃ ಅನಿತಾ ಅವರನ್ನು ಅಚ್ಚರಿಗೊಳಿಸಿದೆ.

ಮೈತ್ರಿ ಪಕ್ಷಗಳ ಸಂಘಟಿತ ಹೋರಾಟ ಮತ್ತು ಸಂಸದ ಡಿ.ಕೆ.ಸುರೇಶ್ ಯೋಜನಾ ಬದ್ಧ ಚುನಾವಣೆ, ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಪಲಾಯನದಿಂದ ಸಿಕ್ಕ ಜಯ ಇದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 70 ಸಾವಿರ ಮತ ಪಡೆದು ಕುಮಾರಸ್ವಾಮಿಗೆ ಪೈಪೋಟಿ ನೀಡಿದ್ದರು. ಉಪಚುನಾವಣೆ ಘೊಷಣೆ ನಂತರ ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಬಂಡಾಯ ಬಾವುಟ ಹಾರಿಸುವ ಯತ್ನಕ್ಕೆ ಕೈ ನಾಯಕರು ತಡೆ ಹಾಕಿದ್ದು ಜೆಡಿಎಸ್ ಬಲ ಹೆಚ್ಚಿಸಿತು. ಇದು ಅನಿತಾ ಗೆಲುವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ನಿರೀಕ್ಷಿದಷ್ಟು ಮತಗಳಿಲ್ಲ: ಸಂಸದ ಡಿ.ಕೆ.ಸುರೇಶ್ ಸಹಕಾರ ನೀಡಿದ್ದು ನಿಜವಾದರೂ, ಕಾಂಗ್ರೆಸ್ ಸ್ಥಳೀಯ ಮುಖಂಡರು ಸರಿಯಾಗಿ ಕೆಲಸ ಮಾಡಲಿಲ್ಲ. ಮಾಡಿದ್ದರೆ ನಮ್ಮ ಅಭ್ಯರ್ಥಿ 1.60 ಲಕ್ಷ ಮತ ಪಡೆದುಕೊಳ್ಳಬೇಕಿತ್ತು. ಬಿಜೆಪಿ 16 ಸಾವಿರ ಮತ ಪಡೆದುಕೊಂಡಿದ್ದು ಹೇಗೆ? ಎನ್ನುವ ಲೆಕ್ಕಾಚಾರ ಜೆಡಿಎಸ್ ಪಾಳಯದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ 92,626, ಪರಾಜಿತ ಕೈ ಅಭ್ಯರ್ಥಿ ಇಕ್ಬಾಲ್ ಹುಸೇನ್ 69,990 ಮತ ಪಡೆದುಕೊಂಡಿದ್ದರು. ಈ ಎರಡೂ ಮತಗಳನ್ನು ಒಗ್ಗೂಡಿದರೆ 1,62,616 ಮತಗಳಾಗಬೇಕು. ಉಪಚುನಾವಣೆಯಲ್ಲಿ ಅನಿತಾಗೆ ಬಂದ ಮತಗಳು 1.25 ಲಕ್ಷ. ಹಾಗಾದರೆ ಉಳಿದ 35 ಸಾವಿರ ಮತಗಳು ಎಲ್ಲಿಗೆ ಹೋದವು? ಕಳೆದ ಚುನಾವಣೆಯಲ್ಲಿ ಶೇ.83 ಮತದಾನವಾಗಿತ್ತು. ಈ ಬಾರಿ ಶೇ.72ಕ್ಕೆ ಕುಸಿಯಲು ಕಾಂಗ್ರೆಸ್​ನವರು ಸ್ಥಳೀಯವಾಗಿ ಕೈ ಜೋಡಿಸದೇ ಇದ್ದುದೇ ಕಾರಣ. ಜತೆಗೆ ಬಿಜೆಪಿಗೆ ಬೆಂಬಲವಾಗಿ ನಿಂತ ಪರಿಣಾಮ ಅವರು 16 ಸಾವಿರಕ್ಕೂ ಹೆಚ್ಚು ಮತ ಪಡೆದುಕೊಂಡರು ಎನ್ನುವ ಚರ್ಚೆ ಆರಂಭಗೊಂಡಿದೆ.

ಚೇತರಿಕೆ ಕಂಡ ಬಿಜೆಪಿ: ಅಭ್ಯರ್ಥಿ ಪಲಾಯನದಿಂದ ಶಾಕ್​ಗೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷಕ್ಕೆ ಸಂದಾಯವಾದ ಮತಗಳು ಕೊಂಚ ನೆಮ್ಮದಿ ತಂದಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಣದಿಂದ ಎಲ್.ಚಂದ್ರಶೇಖರ್ ಹಿಂದೆ ಸರಿದಾಗ, ಬಿಜೆಪಿಯಲ್ಲಿ ದೊಡ್ಡ ಕಂಪನವೇ ಉಂಟಾಗಿತ್ತು. ಇದರ ಹೊರತಾಗಿಯೂ ಪಕ್ಷದ ಕಾರ್ಯಕರ್ತರು ದೇಶ ಮೊದಲು ಎಂದು ಹೇಳುವ ಮೂಲಕ ಕರಪತ್ರ ಹಂಚಿ ಅಭ್ಯರ್ಥಿ ಇಲ್ಲದಿದ್ದರೂ ಬಿಜೆಪಿಗೆ ಮತ ನೀಡಿ ಎಂದು ಕೋರಿದ್ದರು. ಇದರ ಫಲವಾಗಿ ಬಿಜೆಪಿಗೆ ಒಟ್ಟು 15,906 ಮತಗಳು ಸಲ್ಲಿಕೆಯಾಗಿವೆ.

1994ರಲ್ಲಿ ದೇವೇಗೌಡರ ಎದುರು ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಗಿರಿಗೌಡ 22,664 ಮತ ಹಾಗೂ 2008ರಲ್ಲಿ ಎಚ್.ಡಿ. ಕುಮಾರಸ್ವಾಮಿ ಎದುರು 24,440 ಮತ ಪಡೆದುಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲೀಲಾವತಿ 4,800 ಮತ ಗಳಿಸಿದ್ದರು. ಈ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರ ಮತ್ತು ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬಗ್ಗೆ ಬೇಸರವಿತ್ತು. ಇದರ ಲಾಭ ಪಡೆದುಕೊಂಡು ಬಿಜೆಪಿ ಮತಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಅಭ್ಯರ್ಥಿ ಆಯ್ಕೆಯಲ್ಲಿಯೇ ಕೈಚೆಲ್ಲಿದರೆ, ಬಿಜೆಪಿ ಸೇರಿ ಜಿಲ್ಲೆಯ ಪ್ರಮುಖ ನಾಯಕರಾಗುವ ಅವಕಾಶವನ್ನು ಅಭ್ಯರ್ಥಿ ಚಂದ್ರಶೇಖರ್ ಕಳೆದುಕೊಂಡರು.

ಜನತೆಯ ಋಣ ತೀರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದ್ದು, ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ. ಸಚಿವ ಸ್ಥಾನದ ಬಗ್ಗೆ ನಾನೇನೂ ಮಾತನಾಡಲ್ಲ.

| ಅನಿತಾ ಕುಮಾರಸ್ವಾಮಿ ರಾಮನಗರ ನೂತನ ಶಾಸಕಿ


ಫಲಿಸಿದ ತಂತ್ರ, ಜಮಖಂಡಿ ಆನಂದಮಯ

| ಅಶೋಕ ಶೆಟ್ಟರ ಬಾಗಲಕೋಟೆ

ಸಾವು ಮತ್ತು ಸೋಲಿನ ಅನುಕಂಪದ ಆಧಾರದ ಮೇಲೆ ನಡೆದ ಜಮಖಂಡಿ ಉಪಚುನಾವಣೆ ಅಂತಿಮವಾಗಿ ‘ಆನಂದ’ಮಯವಾಗಿದೆ. ಮತದಾರ ಪ್ರಭುಗಳು ಕೊನೆಗೂ ಸಾವಿನ ಅನುಕಂಪ ಬೆಂಬಲಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ವಿಜಯಶಾಲಿಯಾಗಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಅಭ್ಯರ್ಥಿಯೂ ಪಡೆಯದಷ್ಟು ಒಟ್ಟು 97,017 ಮತಗಳನ್ನು ಪಡೆದು 39,480 ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದಾರೆ.

ಶ್ರೀಕಾಂತ ಕುಲಕರ್ಣಿ ಸತತ ಸೋಲಿನ ಅನುಕಂಪದ ಜತೆಗೆ ‘ಇದು ನನ್ನ ಕೊನೇ ಚುನಾವಣೆ’ ಎಂಬ ಅಭ್ಯರ್ಥಿ ಘೊಷಣೆಯ ಡಬಲ್ ಅನುಕಂಪ ಸಿಗಬಹುದು ಎಂಬ ಬಿಜೆಪಿ ಲೆಕ್ಕಾಚಾರ ಕೈ ಹಿಡಿಯಲಿಲ್ಲ.

ಠಿಕಾಣಿ ವರ್ಕೌಟ್: ಚುನಾವಣೆ ಉಸ್ತುವಾರಿ ಹೊತ್ತಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸಹ ನಾಲ್ಕು ದಿನ ಠಿಕಾಣಿ ಹೂಡಿದ್ದರು. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್​ರನ್ನು ಪ್ರಚಾರಕ್ಕೆ ಕರೆತಂದಿದ್ದು, ಹಾಲಿ-ಮಾಜಿ ಶಾಸಕರು, ಸಚಿವರು ಸೇರಿ ನೂರಕ್ಕೂ ಹೆಚ್ಚು ಮುಖಂಡರು ಮತಬೇಟೆ ನಡೆಸಿದ್ದು ವರ್ಕೌಟ್ ಆಗಿದೆ. ಇದರೊಟ್ಟಿಗೆ ಬಿಜೆಪಿ ಬಲ ಇರುವ ಗ್ರಾಮೀಣ ಪ್ರದೇಶದಲ್ಲಿ ಜಾತಿ ಮತಬೇಟೆ ರಣತಂತ್ರ ಕೈಹಿಡಿದಿದೆ. ಆಡಳಿತ ಪಕ್ಷ ಎನ್ನುವ ಟ್ರಂಪ್ ಕಾರ್ಡ್, ಹಿಂದೆಂದೂ ಕ್ಷೇತ್ರದಲ್ಲಿ ಕಂಡರಿಯದ ರೀತಿ ಲಕ್ಷ್ಮೀ ಕುಣಿತ, ಪಕ್ಷದ ಭಿನ್ನಮತ ಪಕ್ಕಕ್ಕಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ದು, ಜಾತಿ ಸಮೀಕರಣ ಸೇರಿ ಕಾಂಗ್ರೆಸ್ ರೂಪಿಸಿದ್ದ ಎಲ್ಲ ತಂತ್ರಗಾರಿಕೆಗಳು ವರ್ಕೌಟ್ ಆಗಿದ್ದರಿಂದ ಗೆಲುವು ಸಾಧ್ಯವಾಯಿತು.

ಎಚ್ಚೆತ್ತುಕೊಂಡ ಕಾಂಗ್ರೆಸ್: ಒಂದು ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಕುದುರೆ ಎನ್ನುವ ವಾತಾವರಣ ನಿರ್ವಣವಾಗಿತ್ತು. ಗುಪ್ತಚರ ಇಲಾಖೆಯೂ ಸರ್ಕಾರಕ್ಕೆ ಇದೇ ವರದಿ ರವಾನಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಜಮಖಂಡಿಗೆ ಆಗಮಿಸಿ ಸ್ಥಳೀಯ ಮುಖಂಡರ ಜತೆ ರಾತ್ರೋ ರಾತ್ರಿ ಸಭೆ ನಡೆಸಿ ರಣನೀತಿ ರೂಪಿಸಿದ್ದು ಕೈ ಪರ ಫಲಿತಾಂಶ ಬರಲು ಕಾರಣವಾಯಿತು.

ವಿಫಲವಾದ ಕಮಲ ಪಡೆ: ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿದ್ದ ಬಿಜೆಪಿ ಮುಖಂಡರು ಆರಂಭದ ಹವಾ ಉಳಿಸಿಕೊಳ್ಳಲು ವಿಫಲರಾದರು. ಕ್ಷೇತ್ರದಲ್ಲಿ ಈವರೆಗೂ ಕಾಂಗ್ರೆಸ್ ಮತಗಳಿಕೆ ಪ್ರಮಾಣ 50 ಸಾವಿರ ಗಡಿ ದಾಟಿಲ್ಲ. ಬಿಜೆಪಿ ಭಿನ್ನಮತಕ್ಕೆ ಸಿಕ್ಕಾಗ ಅದು ಗೆದ್ದಿದೆ. ಈ ಸಲ ಕಮಲ ಪಕ್ಷದಲ್ಲಿ ಬಂಡಾಯವಿಲ್ಲ. 80ರಿಂದ 90 ಸಾವಿರ ಮತಗಳು ಬಂದೇ ಬರುತ್ತವೆ ಎಂದು ಬೀಗಿದರು. ಆದರೆ, ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವತ್ತ ಗಮನ ನೀಡದೆ ಹೀನಾಯ ಸೋಲನುಭವಿಸಿತು.