ನಿರುದ್ಯೋಗ ನಿಮೂಲನೆ ಬಿವಿವಿ ಸಂಘದ ಗುರಿ

ಬಾಗಲಕೋಟೆ: ನಿರುದ್ಯೋಗ ನಿಮೂಲನೆ ಗುರಿ ಇಟ್ಟುಕೊಂಡು ಕಳೆದ 20 ವರ್ಷಗಳಿಂದ ಬಿವಿವಿ ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ. ನಮ್ಮ ರುಡ್​ಸೆಟ್ ಸಂಸ್ಥೆ ಮುಖಾಂತರ ಈವರೆಗೆ 35 ಸಾವಿರ ಯುವಕ ಯುವತಿಯರಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಶೇ.74 ರಷ್ಟು ಜನರು ಉದ್ಯೋಗ ಮಾಡುತ್ತಿದ್ದಾರೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಪ್ರತಿ ವರ್ಷ ಸಾವಿರಾರು ಯುವಕ ಯುವತಿ ಯರು ಎಸ್ಸೆಸ್ಸೆಲ್ಸಿ, ಪಿಯುವರೆಗೆ ಕಲಿತು ಮುಂದೆ ಓದು ಮುಂದುವರಿಸದೇ ನೌಕರಿ ಬಯಸುತ್ತಿದ್ದಾರೆ. ಆದರೆ ಇವರಿಗೆ ನೌಕರಿ ಸಿಗುತ್ತಿಲ್ಲ. ವಿಪರ್ಯಾಸ ಸಂಗತಿ ಎಂದರೆ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಿಗಳು ಬೇಕಾಗಿದ್ದಾರೆ. ಅವರಿಗೆ ಕೆಲಸಗಾರರು ಸಿಗುತ್ತಿಲ್ಲ. ಹೀಗಾಗಿ ಕಂಪನಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳ ನಡುವೆ ಸೇತುವೆಯಾಗಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ಮೋದಿ ಅವರು ಕೌಶಲ ಹೆಚ್ಚಿಸಿ ಯುವ ಜನತೆಯನ್ನು ಉದ್ಯೋಗಸ್ಥರನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳಿಂದ ಉಪಯೋಗ ಪಡೆದುಕೊಳ್ಳುವ ಬಗ್ಗೆ ರುಡ್​ಸೆಟ್ ಯುವಕರಿಗೆ ಸಾಕಷ್ಟು ಮಾಹಿತಿ ನೀಡುತ್ತಿದೆ ಎಂದು ಹೇಳಿದರು.

ಈ ಭಾಗದ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ನೆಕ್ಸ್ ಸ್ಟೆಪ್ ಇನಸ್ಟಿಟ್ಯೂಶನ್ ಆಫ್ ಲಾಜಿಸ್ಟಿಕ್ ಸಂಸ್ಥೆಯ ಜತೆ ಬಿವಿವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ನಿರುದ್ಯೋಗ ನಿಮೂಲನೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ತಿಳಿಸಿದರು.

ನೆಕ್ಸ್​ಸ್ಟೆಪ್ ಸಂಸ್ಥೆಯ ಫಣಿರಾಜ ಮೂರ್ತಿ ಮಾತನಾಡಿ, ನಮ್ಮ ಸಂಸ್ಥೆ ಕೇವಲ ಎರಡು ವರ್ಷಗಳ ಹಿಂದೆ ಆರಂಭವಾಗಿ ಯುವ ಜನರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದೆ. ಲಾಜಿಸ್ಟಿಕ್ ಕ್ಷೇತ್ರವು ದೇಶದ ಜಿಡಿಪಿಯ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಇಲ್ಲಿ ಲಕ್ಷ ಲಕ್ಷ ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಯುವಕರಿಗೆ ತರಬೇತಿ ನೀಡಿ ಲಾಜಿಸ್ಟಿಕ್ ಕ್ಷೇತ್ರಕ್ಕೆ ಕಾಲಿಡುವಂತೆ ಮಾಡುತ್ತಿದೆ ಎಂದರು.

ಬಿವಿವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಎಸ್.ವಿ.ಪಂಚಮುಖಿ ಮಾತನಾಡಿ, ನಮ್ಮ ಸಂಸ್ಥೆ, ನೆಕ್ಸ್​ಸ್ಟೆಪ್ ಸಂಸ್ಥೆ ಜಂಟಿಯಾಗಿ ಜನವರಿಯಿಂದ ತರಬೇತಿ ಆಯೋಜನೆ ಮಾಡುತ್ತವೆ. ತರಬೇತಿ ಪಡೆದುಕೊಂಡವರಿಗೆ ನೌಕರಿ ನಿಶ್ಚಿತ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನೆಕ್ಸ್​ಸ್ಟೆಪ್ ಲಾಜಿಸ್ಟಿಕ್ ಸಂಸ್ಥೆಯ ಶೋಭಾ ಕೆ.ವಿ. ಉಪಸ್ಥಿತರಿದ್ದರು.