ಮಳೆಗೆ ಪಾತರಗಿತ್ತಿ ಸೊಬಗು

ಅವಿನ್ ಶೆಟ್ಟಿ ಉಡುಪಿ
 ಮಳೆಗೆ ಮನೆಯಂಗಳದಲ್ಲಿ ಪಾತರಗಿತ್ತಿಗಳ ಸೊಬಗು ಅನಾವರಣಗೊಳ್ಳುತ್ತಿದೆ… ಸದ್ಯ ಮನೆಯಂಗಳ, ಪಾರ್ಕ್, ಗಿಡಗಳಿದ್ದಲ್ಲಿ ಎಲ್ಲೆಲ್ಲೂ ಚಿಟ್ಟೆಗಳದ್ದೇ ಕಾರುಬಾರು.

ಬ್ರಿಟನ್, ಅಮೆರಿಕಾ, ರಷ್ಯಾ, ಚೀನಾದಂಥ ಮುಂದುವರಿದ ದೇಶಗಳಲ್ಲಿ ಚಿಟ್ಟೆ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪಾಠ ಅಳವಡಿಸಿ ಮಕ್ಕಳಿಗೆ ವಿಶೇಷವಾಗಿ ಬೋಧಿಸಲಾಗುತ್ತಿದೆ. ಅಪ್ರತಿಮ ಸೌಂದರ್ಯ ಹೊಂದಿ, ಪರಿಸರ ಪೂರಕ ಜೀವಿಯಾದ ಚಿಟ್ಟೆಗಳನ್ನು ಪಾಶ್ಚಾತ್ಯ ಪರಿಸರ ತಜ್ಞರು ‘ಹಾರಾಡುವ ಆಭರಣಗಳು’ ಎಂದು ಬಣ್ಣಿಸಿದ್ದಾರೆ. ಚಿಟ್ಟೆಗಳು ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಚಿಟ್ಟೆ ಮತ್ತು ಸಸ್ಯಗಳ ನಡುವೆ ಮಹತ್ವದ ವಿಕಾಸಾತ್ಮಕ ಸಂಬಂಧವಿದೆ. ಪ್ರತಿಕೂಲ ಹವಾಮಾನ, ಆಧುನಿಕತೆ ಭರಾಟೆಯಲ್ಲಿ ಚಿಟ್ಟೆಗಳ ವಲಸೆ, ಜೀವನ ಚಕ್ರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇಂಥ ಚಿಟ್ಟೆಗಳ ಬಗ್ಗೆ ಜನಸಾಮಾನ್ಯರು ಒಂದಷ್ಟು ತಿಳಿದುಕೊಂಡು ಅವುಗಳ ಸಂರಕ್ಷಣೆಗೆ ಮುಂದೆ ಬರಬೇಕಿದೆ.

ಆಹಾರ ಸಸ್ಯಗಳ ಅವಲಂಬನೆ: ಬಹುತೇಕ ಮುಂಗಾರು ಸಮಯದಲ್ಲಿ ಹುಟ್ಟಿಕೊಳ್ಳುವ ಸಣ್ಣ ಜಾತಿಯ (ಕಳೆಗಿಡ) ಕಾಟು ಗಿಡಗಳ ಮೇಲೆ ಚಿಟ್ಟೆಗಳು ಮೊಟ್ಟೆ ಇಡುತ್ತವೆ. ಸಣ್ಣ ರಾಗಿ ಕಾಳಿನಂತಿರುವ ಮೊಟ್ಟೆಯಿಂದ 8ರಿಂದ 10 ದಿನದಲ್ಲಿ ಮರಿ ಹೊರಬರುತ್ತದೆ. ಈ ಮರಿಗಳು (ಕ್ಯಾಟರ್ ಪಿಲ್ಲರ್-ಕಂಬಳಿಹುಳ) ಎಲೆಯನ್ನೆ ತಿಂದು ಬೆಳೆಯುತ್ತದೆ. ಬಳಿಕ ಕೋಶ ರಚಿಸಿಕೊಂಡು ಚಿಟ್ಟೆಯಾಗಿ ಹೊರಬರುತ್ತವೆ. ವೈರಿಗಳಿಂದ ರಕ್ಷಿಸಿಕೊಳ್ಳಲು ಪರಿಸರಕ್ಕೆ ಪೂರಕ ಬಣ್ಣಗಳಲ್ಲಿ ಕೋಶಗಳನ್ನು ರಚಿಸುತ್ತವೆ. ಚಿಟ್ಟೆಗಳು ತಮ್ಮ ಆಹಾರ ಸಸ್ಯಗಳ ಮೇಲೆಯೇ ಮೊಟ್ಟೆ ಇಡುತ್ತವೆ. ಎಲ್ಲ ಚಿಟ್ಟೆಗಳು ನಿರ್ದಿಷ್ಟ ಆಹಾರ ಸಸ್ಯಗಳನ್ನು ಹೊಂದಿರುತ್ತವೆ. ಪರಿಸರದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಇದು ತಿಳಿಯುತ್ತದೆ ಎನ್ನುತ್ತಾರೆ ಚಿಟ್ಟೆ ಅಧ್ಯಯನಕಾರರು.

ನಮ್ಮ ಪರಿಸರದ ಚಿಟ್ಟೆಗಳು: ನಮ್ಮ ಪರಿಸರ, ಮನೆಯ ಅಂಗಳದಲ್ಲಿ ಸಾಕಷ್ಟು ಜಾತಿಯ ಚಿಟ್ಟೆಗಳು ಕಂಡು ಬರುತ್ತವೆ. ಹೆಚ್ಚಾಗಿ ಸಾಮಾನ್ಯ ವರ್ಗವಾಗಿ ಕಂಡು ಬರುವುದು ಕಾಮನ್ ಕ್ರೊ, ಬ್ಲೂ ಟೈಗರ್, ಸೈಕ್, ಪ್ಲೈನ್ ಟೈಗರ್, ಕಾಮನ್ ಜೆ, ಗ್ರೇ ಪ್ಯಾನ್ಸಿಮ ಚಾಕ್ಲೆಟ್ ಪ್ಯಾನ್ಸಿ, ‘ಕಾಮನ್ ಗ್ರಾಸ್ ಎಲ್ಲೊ’ ಮೊದಲಾದವುಗಳು ಕಂಡು ಬರುತ್ತವೆ. ಸೂರ್ಯನ ಕಿರಣ ಗೋಚರಿಸಿದ ಹೊತ್ತಲ್ಲಿ, ಬಿಸಿಲಿನ ವೇಳೆ ಚಿಟ್ಟೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಹಾರಾಡುವುದು, ಮಕರಂದ ಹೀರುವುದು, ಗಂಡು ಹೆಣ್ಣು ಆಕರ್ಷಿಸುವುದು ಸೇರಿದಂತೆ ನಾನಾ ರೀತಿಯ ಚಟುವಟಿಕೆಯಿಂದಿರುತ್ತವೆ. ಮೋಡ ಕವಿದ ವಾತವರಣ, ಬಿಸಿಲು ಇಲ್ಲದಾಗ ವಿಶ್ರಾಂತಿಯಲ್ಲಿರುತ್ತವೆ.

ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ಚಿಟ್ಟೆಗಳ ಪಾತ್ರ ದೊಡ್ಡದು. ಪರಿಸರ ಸಮತೋಲನಕ್ಕೆ ಚಿಟ್ಟೆಗಳ ಕಲರವ ಇರಲೇಬೇಕು. ಮನೆಯಂಗಳದಲ್ಲಿ ಕಳೆ ಗಿಡಗಳಿದ್ದಲ್ಲಿ ಚಿಟ್ಟೆಗಳಿರುತ್ತವೆ. ಮಳೆ ಬಂದ ಆರಂಭದಲ್ಲಿ ಕಳೆ ಗಿಡಗಳು ಹುಟ್ಟುತ್ತವೆ. ಚಿಟ್ಟೆಗಳು ಮೊಟ್ಟೆ ಇರುವ ಸಮಯ. ಈ ವೇಳೆ ಕಳೆ ಗಿಡಗಳ ನಾಶ ಮಾಡಿದಲ್ಲಿ ಸಾಕಷ್ಟು ಚಿಟ್ಟೆಗಳ ಸಂತತಿ ನಾಶವಾಗುತ್ತಿವೆ. ಪ್ರತಿಕೂಲ ಹವಾಮಾನ, ಮುಂಗಾರು ವಿಳಂಬದಿಂದ ಈ ಬಾರಿ ಚಿಟ್ಟೆಗಳ ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಾಗಿದೆ.
ಎನ್.ಪೊಲ್ಯ ಚಿಟ್ಟೆ ಅಧ್ಯಯನಕಾರ

Leave a Reply

Your email address will not be published. Required fields are marked *