ಬಸ್ ನಿಲ್ದಾಣ ನಿಷ್ಪ್ರಯೋಜಕ!

>

ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಂಟ್ವಾಳ ಪೇಟೆಯಲ್ಲಿ ಬಸ್‌ಗಳ ನಿಲುಗಡೆಯಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತದೆ ಎನ್ನುವ ಕಾರಣಕ್ಕೆ ಕೊಟ್ರಮಣಗಂಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಯಿತು. ನಿರ್ಮಾಣವಾಗಿ 12 ವರ್ಷ ಕಳೆದರೂ ಒಮ್ಮೆಯೂ ಇಲ್ಲಿ ಬಸ್ ನಿಲುಗಡೆಯಾಗಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಬಸ್ ನಿಲ್ದಾಣ ನಿಷ್ಪ್ರಯೋಜಕವಾಗುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಬಂಟ್ವಾಳ ಪುರಸಭೆ ಈ ಬಸ್ ನಿಲ್ದಾಣ ನಿರ್ಮಿಸಿಕೊಟ್ಟಿದೆ. ಬಂಟ್ವಾಳದಿಂದ ಮೂಡುಬಿದಿರೆ, ವಾಮದಪದವು ಮಾರ್ಗವಾಗಿ ಹೋಗುವ ಬಸ್‌ಗಳು ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿ, ಇಳಿಸುವುದರಿಂದ ಕಿರಿದಾಗಿರುವ ಬಂಟ್ವಾಳ ಪೇಟೆಯ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಈ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿಯೂ ಈ ಬಸ್ ನಿಲ್ದಾಣ ನಿರ್ಮಾಣ ಮಹತ್ವ ಪಡೆದುಕೊಂಡಿತ್ತು. ಏಕಕಾಲದಲ್ಲಿ ಆರೇಳು ಬಸ್‌ಗಳು ನಿಲ್ಲುವಷ್ಟು ವಿಶಾಲ ಸ್ಥಳಾವಕಾಶವಿರುವ ಬಸ್ ನಿಲ್ದಾಣವೇನೋ ಆಯಿತು. ಆದರೆ ಬಸ್‌ಗಳು ಈ ಹಿಂದೆ ಎಲ್ಲಿ ನಿಲ್ಲುತ್ತಿತ್ತೋ ಈಗಲೂ ಅಲ್ಲಿಯೇ ನಿಲ್ಲುತ್ತಿವೆ. ಒಮ್ಮೆಯೂ ಬಸ್ ನಿಲ್ದಾಣ ಪ್ರವೇಶಿಸುವ ಪ್ರಯತ್ನ ಮಾಡಿಲ್ಲ.

ಭಿಕ್ಷುಕರ ಅಡ್ಡೆ: ಬಸ್ ನಿಲುಗಡೆಯಿಲ್ಲದೆ ನಿಷ್ಪ್ರಯೋಜಕವಾಗಿರುವ ಕೊಟ್ರಮಣಗಂಡಿ ಬಸ್ ನಿಲ್ದಾಣ ಈಗ ಖಾಸಗಿ ವಾಹನಗಳ ನಿಲ್ದಾಣವಾಗಿದೆ. ಇಂಟರ್‌ಲಾಕ್ ಅಳವಡಿಸಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಭಿಕ್ಷುಕರು ಹಾಗೂ ಅಲೆಮಾರಿಗಳಿಗೆ ಸೂರು ಒದಗಿಸಿಕೊಟ್ಟಂತಾಗಿದೆ. ರಾತ್ರಿ ವೇಳೆ ಅಮಲು ಪಾನೀಯ ಸೇವಿಸುವವರ ಅಡ್ಡೆಯಾಗಿದೆ ಎನ್ನ್ನುವುದಕ್ಕೆ ತಂಗುದಾಣದ ಸುತ್ತ ಚದುರಿ ಬಿದ್ದಿರುವ ಮದ್ಯದ ಬಾಟಲುಗಳೇ ಸಾಕ್ಷಿ. ಜನೋಪಯೋಗವಾಗಬೇಕಿದ್ದ ಬಸ್ ನಿಲ್ದಾಣ ಅಕ್ರಮದ ಅಡ್ಡೆಯಾಗಿ ಪರಿವರ್ತನೆಯಾಗಿದೆ.
ವ್ಯರ್ಥವಾಗುತ್ತಿದೆ ಶೌಚಗೃಹ ಬಸ್ ನಿಲ್ದಾಣದ ಪಕ್ಕ ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ಐದು ಲಕ್ಷ ರೂ. ವೆಚ್ಚದ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದೆ. ಆದರೆ ಬಸ್ ನಿಲ್ದಾಣ ನಿಷ್ಪ್ರಯೋಜಕವಾಗಿರುವ ಕಾರಣ ಶೌಚಗೃಹ ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಇದರ ಉದ್ಘಾಟನೆ ಬಳಿಕ ಹಾಕಲಾಗಿರುವ ಬೀಗ ಇನ್ನೂ ತೆರೆದಿಲ್ಲ.

ಪುರಸಭೆಯಲ್ಲಿ ಚರ್ಚೆ: ಮೂಡುಬಿದಿರೆ, ವಾಮದಪದವು ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ಕೊಟ್ರಮಣಗಂಡಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಬೈಪಾಸ್ ರಸ್ತೆಗೆ ತಿರುವು ಪಡೆಯುವ ಜಾಗದಲ್ಲಿ ಬಸ್ ನಿಲುಗಡೆ ನಿಷೇಧಿಸಬೇಕು ಎಂಬ ಆಗ್ರಹ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಈ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತಾದರೂ ನಿರ್ಣಯ ಕಡತಕ್ಕೆ ಸೀಮಿತವಾಗಿದೆ. ಪುರಸಭೆ ಆಡಳಿತ ಹಾಗೂ ಟ್ರಾಫಿಕ್ ಪೊಲೀಸರು ಜತೆ ಸೇರಿ ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡರೆ ಮಾತ್ರ ಪ್ರಯತ್ನ ಫಲ ನೀಡಬಹುದು. ಇಲ್ಲವಾದರೆ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಬಸ್ ನಿಲ್ದಾಣ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಬಹುದು.

ಕೊಟ್ರಮಣಗಂಡಿಯಲ್ಲಿ ಬಸ್ ನಿಲ್ದಾಣವಿದ್ದರೂ ಬಸ್‌ಗಳು ಬಂಟ್ವಾಳ ಪೇಟೆಯಲ್ಲೇ ಈಗಲೂ ನಿಲ್ಲುತ್ತಿವೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪುರಸಭೆ ನಿರ್ಮಿಸಿದ ಬಸ್ ನಿಲ್ದಾಣ ನಿರಾಶ್ರಿತರ ತಾಣವಾಗಿದೆ. ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಬಸ್ ನಿಲ್ದಾಣದಲ್ಲಿಯೇ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.
ಎನ್.ಪ್ರಕಾಶ್,  ಸ್ಥಳೀಯ ನಿವಾಸಿ, ಬಂಟ್ವಾಳ

Leave a Reply

Your email address will not be published. Required fields are marked *