ಉದ್ಯಮಿ ಮನೆಗೆ ಐಟಿ ಅಧಿಕಾರಿಗಳ ದಾಳಿ

ಮಂಗಳೂರು: ನಗರದ ಕಾರ್​ಸ್ಟ್ರೀಟ್​ನಲ್ಲಿ ಶುಕ್ರವಾರ ದಾಖಲೆ ರಹಿತವಾಗಿ 1 ಕೋಟಿ ರೂ. ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಮರುದಿನ ಇದೇ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಉದ್ಯಮಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದ್ಯಮಿ ರಾಜು ಪವಾರ್ ಎಂಬುವರಿಗೆ ಸೇರಿದ ಕಾರ್​ಸ್ಟ್ರೀಟ್​ನ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಹಲವು ಗಂಟೆ ಕಾಲ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದರು. ಶುಕ್ರವಾರ ಬೆಳಗ್ಗೆ 1 ಕೋಟಿ ರೂ. ಕೊಂಡೊಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಮಂಜುನಾಥ್(56) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆತನ ಬಳಿ ಈ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರá- ಈ ಹಣ ನೀಡಿದ್ದು, ಮಂಗಳೂರಿನ ವ್ಯಕ್ತಿಗೆ ತಲುಪಿಸುವಂತೆ ತಿಳಿಸಿದ್ದಾಗಿ ಆತ ಬಾಯ್ಬಿಟ್ಟಿದ್ದ.

ಈ ಮಾಹಿತಿ ಆಧರಿಸಿ ಐಟಿ ಇಲಾಖೆ ಅಧಿಕಾರಿಗಳು ರಾಜು ಪವಾರ್ ಎಂಬುವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ನ್ಯಾಯಾಂಗ ಬಂಧನ: ದಾಖಲೆಯಿಲ್ಲದೆ ಹಣ ಕೊಂಡೊಯ್ದು ಬಂಧಿತನಾದ ಆರೋಪಿ ಮಂಜುನಾಥ್​ನನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿದ್ದು, 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

24 ಲಕ್ಷ ರೂ. ಪತ್ತೆ

ನಗರದ ಕಾರ್​ಸ್ಟ್ರೀಟ್ ಮಹಮ್ಮಾಯಿ ದೇವಸ್ಥಾನದ ಬಳಿ ಶನಿವಾರ ಬೆಳಗ್ಗೆ ಮತ್ತೆ ದಾಖಲೆರಹಿತ 24 ಲಕ್ಷ ರೂ. ನಗದನ್ನು ಬಂದರು ಪೊಲೀಸರು ಪತ್ತೆ ಮಾಡಿ ದಾವಣಗೆರೆಯ ಮಂಜುನಾಥ್(40) ಎಂಬಾತನನ್ನು ಬಂಧಿಸಿ ದ್ದಾರೆ. ದಾವಣಗೆರೆಯಿಂದ ಮಂಗಳೂರಿನ ವ್ಯಕ್ತಿಗೆ ನೀಡಲು ಈ ಹಣ ತಂದಿದ್ದನು ಎನ್ನಲಾಗಿದೆ. ದಾವಣಗೆರೆಯ ವ್ಯಕ್ತಿಯೊಬ್ಬರು ಹಣವನ್ನು ಮಂಗಳೂರಿನ ವ್ಯಕ್ತಿಗೆ ನೀಡಲು ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಆತನಲ್ಲಿ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *