ಕ್ರಿಕೆಟ್​ ಮ್ಯಾಚ್​ ನೋಡಲು ಹೋಗಿದ್ದ ವಿಜಯ್​ ಮಲ್ಯಗೆ ಮುಜುಗರ: ಅವರನ್ನು ನೋಡಿ ಕಳ್ಳ ಕಳ್ಳ ಎಂದು ಕೂಗಿದ ಜನರು

ಲಂಡನ್​: ಭಾರತದ ಬ್ಯಾಂಕ್​ಗಳಿಗೆ ಸುಮಾರು 900 ಕೋಟಿ ರೂಪಾಯಿ ವಂಚಿಸಿ ಲಂಡನ್​ಗೆ ಹೋಗಿ ಸದ್ಯ ಜಾಮೀನು ಪಡೆದು ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯಾವಳಿ ವೀಕ್ಷಿಸಲು ಕನ್ನಿಂಗ್ಟನ್​ ಓವೆಲ್​ ಕ್ರಿಡಾಂಗಣಕ್ಕೆ ಆಗಮಿಸಿದ್ದರು.

ಆದರೆ, ಆ ಮೈದಾನದಿಂದ ಹೊರಗೆ ಹೋಗುವಾಗ ಅವರಿಗೆ ಮುಜುಗರ ಉಂಟಾಗುವ ಸನ್ನಿವೇಶ ಎದುರಾಯಿತು. ಅವರು ತಮ್ಮ ಸಚಹರರ ಜತೆ ಮೈದಾನದಿಂದ ಹೊರಗೆ ಬರುತ್ತಿದ್ದಂತೆ ಕಳ್ಳ ಕಳ್ಳ (ಚೋರ್​ ಚೋರ್​) ಎಂಬ ಕೂಗು ಕೇಳಿಬರುತ್ತಿತ್ತು.

ಮಲ್ಯ ಹೊರಗೆ ಬರುತ್ತಿದ್ದಂತೆ ಅಲ್ಲಿದ್ದ ಸಣ್ಣ ಗುಂಪು ಅವರನ್ನು ತಳ್ಳಲು ಪ್ರಾರಂಭಿಸಿತು. ಹಾಗೇ ನೀನೊಬ್ಬ ಕಳ್ಳ ಎಂದು ಕೂಗತೊಡಗಿದರು. ಅದರಲ್ಲಿ ಕೆಲವರು, ಮೊದಲು ನಿನ್ನ ದೇಶದ ಕ್ಷಮೆ ಕೇಳು ಎಂದೂ ಕೆಲವರು ಕೂಗತೊಡಗಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ನನ್ನನ್ನು ಕಳ್ಳನೆಂದು ಕೂಗುವುದನ್ನು ನೋಡಿದರೆ ನನ್ನ ತಾಯಿಗೆ ನೋವಾಗುವುದಿಲ್ಲ ಎಂಬುದನ್ನು ಖಚಿತವಾಗಿ ಹೇಳುತ್ತೇನೆ ಎಂದರು.

ನಿನ್ನೆ ಓವೆಲ್​ ಮೈದಾನಕ್ಕೆ ಬಂದಿದ್ದ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ, ನಾನು ಇಲ್ಲಿಗೆ ಬಂದಿದ್ದು ಆಟವನ್ನು ನೋಡಲು. ನನಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ಜುಲೈನಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಅಲ್ಲದೆ, ಮಗನೊಂದಿಗೆ ಇರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ, ಭಾರತ ಗೆದ್ದಿದ್ದು ತುಂಬ ಖುಷಿಕೊಟ್ಟಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.
2017ರ ಜುಲೈನಲ್ಲಿ ಕೂಡ ಮಲ್ಯಗೆ ಇಂಥದ್ದೇ ಅನುಭವ ಆಗಿತ್ತು. ಇದೇ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ, ದಕ್ಷಿಣಾಫ್ರಿಕಾ ನಡುವಿನ ಚಾಂಪಿಯನ್​ ಟ್ರೋಫಿ ಪಂದ್ಯಾವಳಿ ವೀಕ್ಷಿಸಲು ಆಗಮಿಸಿದ್ದ ಅವರನ್ನು ನೋಡಿ ಕಳ್ಳ ಕಳ್ಳ ಎಂದು ಕೂಗಿದ್ದರು.

Leave a Reply

Your email address will not be published. Required fields are marked *