ಸುಸ್ಥಿರ ಸಮಾಜದಿಂದ ಜೀವನ ಪರಿಪೂರ್ಣ


ವಿಜಯವಾಣಿ ಸುದ್ದಿಜಾಲ ನಂಜನಗೂಡು
ಸಮಾಜದ ಅಸ್ಥಿರತೆಯನ್ನು ದೂರುವ ಬದಲು ಸುಸ್ಥಿರ ಸಮಾಜ ಕಟ್ಟುವ ಕಾಯಕದಲ್ಲಿ ಭಾಗಿಯಾದಾಗ ಮಾತ್ರ ಪರಿಪೂರ್ಣ ಜೀವನವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಉದ್ಯಮಿ ಉಮೇಶ್ ಶರ್ಮ ಅಭಿಪ್ರಾಯಪಟ್ಟರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಚಿತ ಯೋಗ ಮತ್ತು ಅಧ್ಯಾತ್ಮ ತರಗತಿಗಳಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 18 ಯೋಗ ಶಿಕ್ಷಕರಿಗೆ ಗುರು ಪೂರ್ಣಿಮೆ ಅಂಗವಾಗಿ ಮಂಗಳವಾರ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಯೋಗ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹತ್ತು ವರ್ಷಗಳಿಂದ ಉಚಿತ ಯೋಗ, ಅಧ್ಯಾತ್ಮ ತರಗತಿ ಜತೆಗೆ ಸಂಸ್ಕಾರ, ಸೇವೆಯನ್ನು ಬಿತ್ತುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಸಮಿತಿಯ ಕಾರ್ಯದರ್ಶಿ ಗಣೇಶ್‌ಮೂರ್ತಿ ಮಾತನಾಡಿ, ಶಿಲ್ಪಿಯಿಂದ ಕೆತ್ತಲ್ಪಟ್ಟ ವಿಗ್ರಹಕ್ಕೆ ಪೂಜೆ ದೊರಕಿದಾಗ ಶಿಲ್ಪಿಗೆ ಧನ್ಯತಾ ಭಾವ ಮೂಡುತ್ತದೆ. ಅಂತೆಯೆ, ಗುರುವಿನಿಂದ ಸೃಷ್ಟಿಯಾದ ಶಿಷ್ಯಪರಂಪರೆ ಅವರ ನಿರೀಕ್ಷೆಯಂತೆ ಆರೋಗ್ಯಕರ ಸಮಾಜ ಕಟ್ಟುವ ಕಾಯಕದಲ್ಲಿ ಸಾಧನೆ ತೋರಿದಾಗ ಮಾತ್ರ ಗುರುವಿಗೆ ಸಾರ್ಥಕತೆ ಲಭಿಸುತ್ತದೆ ಎಂದು ಹೇಳಿದರು.
ವೇದವ್ಯಾಸರು ದೇಹತ್ಯಾಗ ಮಾಡುವ ಸಂದರ್ಭ ತಾನು ಪ್ರತಿಯೊಬ್ಬ ಜ್ಞಾನಿಯ ಮನದಲ್ಲಿ ನೆಲೆಸುವುದಾಗಿ ಶಿಷ್ಯರಿಗೆ ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಬದುಕಿನ ಪಾಠ ಕಲಿಸಿಕೊಡುವ ಗುರುವನ್ನು ಗೌರವಿಸುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ ಎಂದು ತಿಳಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಇಂಜಿನಿಯರ್ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಬಾಕ್ಸ್…
ಫಲತಾಂಬೂಲ ನೀಡಿ ಗೌರವ ಸಮರ್ಪಣೆ:
ಯೋಗ ಶಿಕ್ಷಕರಾದ ಜಿ.ಕೆ.ಮಂಜುನಾಥ್, ಚಂದ್ರಶೇಖರ್, ರವಿ, ನಾಗರಾಜು, ನಾಗೇಂದ್ರ, ಪ್ರಕಾಶ್, ನಾಗರಾಜು, ವೀರಭದ್ರ, ಮಹದೇವಸ್ವಾಮಿ, ಸುನಂದಾ, ಸೌಭಾಗ್ಯ, ಶುಭ, ಗಾಯತ್ರಿ, ಪೂಜಾ, ಪದ್ಮ, ವತ್ಸಲಾ, ಲತಾ ಹಾಗೂ ಆಶಾ ಅವರಿಗೆ ಫಲತಾಂಬೂಲ ನೀಡಿ ಗೌರವಿಸಲಾಯಿತು. ಯೋಗ ಶಿಕ್ಷಕರ ಮಧ್ಯೆ ಮಹಾಗುರು ಪ್ರಕಾಶ್ ಅವರನ್ನು ಕೂರಿಸಿ ಗುರುವರ್ಯರನ್ನು ನೆನೆಯುವ ಶ್ಲೋಕ ಪಠಿಸುವುದರೊಂದಿಗೆ, ಯೋಗಬಂಧುಗಳು ಗುರುಗಳಿಗೆ ಗೌರವ ವಂದನೆ ಸಮರ್ಪಿಸಿದರು. ಯೋಗಶಿಕ್ಷಕಿ ಗಾಯತ್ರಿ ಅವರು ಗುರುನಾಮ ಪ್ರಸ್ತುತಪಡಿಸಿದರು.

ಚಿತ್ರ:16ಎನ್‌ಜಿಡಿ1
ನಂಜನಗೂಡಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಡೆಸುತ್ತಿರುವ ಉಚಿತ ಯೋಗ ಹಾಗೂ ಅಧ್ಯಾತ್ಮ ತರಗತಿಗಳಲ್ಲಿ ಹಲವು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಶಿಕ್ಷಕರನ್ನು ಗುರು ಪೂರ್ಣಿಮೆ ಅಂಗವಾಗಿ ಗೌರವಿಸಲಾಯಿತು. ಉದ್ಯಮಿ ಉಮೇಶ್ ಶರ್ಮ, ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಗಣೇಶ್‌ಮೂರ್ತಿ, ಇಂಜಿನಿಯರ್ ಪ್ರಸನ್ನಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *