ಉದ್ಯಮಿಗಳಿಂದ ನೆರೆಪೀಡಿತ ಪ್ರದೇಶ ದತ್ತು

ಶ್ರವಣ್ ಕುಮಾರ್ ನಾಳ  ಬೆಳ್ತಂಗಡಿ

ನೆರೆಪೀಡಿತ ಕೊಳಂಬೆ, ಚಾರ್ಮಾಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಬಾರಿ ಸ್ವಾತಂತ್ರ್ಯ ಸಂಭ್ರಮವಿರಲಿಲ್ಲ. ಕೃಷ್ಣಜನ್ಮಾಷ್ಟಮಿ ಸಡಗರವೂ ಇಲ್ಲ. ಇಲ್ಲಿನ ಪ್ರದೇಶಗಳನ್ನು ದತ್ತು ಪಡೆದು, ಒಂದು ವರ್ಷ ಶ್ರಮದಾನ ಮೂಲಕ ಅಭಿವೃದ್ಧಿಪಡಿಸಿ 2020ರ ಆ.15ರಂದು ಭರ್ಜರಿಯಾಗಿ ಸ್ವಾತಂತ್ರ್ಯ ಆಚರಿಸಿ, ನೆರೆಪೀಡಿತ ಪ್ರದೇಶವನ್ನು ಸಂತ್ರಸ್ತರಿಗೆ ಸರ್ಮರ್ಪಿಸುವ ಯೋಜನೆ ರೂಪುಗೊಂಡಿದೆ.

ಕೊಳಂಬೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆಯೂ ದೊರಕಿದೆ. ಶಾಸಕರ ನೇತೃತ್ವದ ಉದ್ಯಮಿಗಳ ತಂಡ ಪ್ರತೀ ವಾರ 450ರಿಂದ 500 ಸ್ವಯಂಸೇವಕರನ್ನು ಸೇರಿಸಿ ನೆರೆಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಅಲ್ಲಿಯವರೆಗೆ ಈ ಪ್ರದೇಶದಲ್ಲಿ ವೈಭವದ ಕಾರ್ಯಕ್ರಮಗಳು ಇಲ್ಲ. 2020ರ ಆ.15ರಂದು ಸಂತ್ರಸ್ತರಿಗೆ ಅಭಿವೃದ್ಧಿ ಪೂರ್ಣ ಬೆಳ್ತಂಗಡಿಯನ್ನು ಸಮರ್ಪಿಸುವ ಕಾರ್ಯ ನಡೆಯಲಿದ್ದು, ರಜಾ ದಿನ ಹಾಗೂ ಪ್ರತಿ ಭಾನುವಾರ ಅಭಿವೃದ್ಧಿಗಾಗಿ ಕೈಜೋಡಿಸಿ ಎಂಬ ಧ್ಯೇಯದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದೆ.

ಫ್ಲಡ್ ರಿಲೀಫ್ ಫಂಡ್ ಸ್ಥಾಪನೆ: ತಾಲೂಕಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ನವನಿರ್ಮಿತ ಬೆಳ್ತಂಗಡಿ ನಿರ್ಮಿಸುವ ಆಶಯದೊಂದಿಗೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಮಾರ್ಗದರ್ಶನದಲ್ಲಿ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ಸ್ಥಾಪಿಸಲಾಗಿದೆ. ಸರ್ಕಾರ ನೀಡುವ ನೆರೆ ಸಂತ್ರಸ್ತರ ಅನುದಾನದಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಕಷ್ಟವಾಗಿರುವ ಕಾರಣ ಫ್ಲಡ್ ರಿಲೀಫ್ ಫಂಡ್ ಸ್ಥಾಪಿಸಲಾಗಿದೆ. ದೆೇಶಾದ್ಯಂತ ಉದ್ಯಮ ಹೊಂದಿರುವ ಧನಂಜಯ ರಾವ್, ಶಶಿಧರ ಶೆಟ್ಟಿ, ಗಣೇಶ ಗೌಡ, ಜಯಕರ ಶೆಟ್ಟಿ, ಜಯಂತ್ ಶೆಟ್ಟಿ, ಡಾ.ಎಂ.ಎಂ.ದಯಾಕರ್, ಡಾ.ಗೋಪಾಲಕೃಷ್ಣ, ಅಬೂಬಕ್ಕರ್, ಪ್ರವೀಣ ಜೈನ್, ಸುರೇಶ್ ಪೂಜಾರಿ, ದಯಾಕರ್ ಕಕ್ಕಿಂಜೆ, ರಾಜೇಶ್ ಪೈ, ಮೋಹನ್ ಕುಮಾರ್, ಲ್ಯಾನ್ಸಿ ಪಿಂಟೊ, ಕರುಣಾಕರ ಭಂಡಾರಿ, ನಂದಕುಮಾರ್, ರಾಜೇಂದ್ರ ಕಾಮತ್, ಶರತ್‌ಕೃಷ್ಣ ಪಡ್ವೆಟ್ನಾಯ, ಜಗದೀಶ್, ನಾರಾಯಣ್ ಸುವರ್ಣ ಮುಂಬೈ, ತ್ರಿವಿಕ್ರಮ ಸಪಲ್ಯ ಬೆಂಗಳೂರು ಇವರ ಸದಸ್ಯತ್ವದಲ್ಲಿ ಫ್ಲಡ್ ರಿಲೀಫ್ ಫಂಡ್ ಸ್ಥಾಪನೆಯಾಗಿದೆ.

ನೆರೆಪೀಡಿತ ಕೊಳಂಬೆಯನ್ನು ಒಂದು ವರ್ಷದವರೆಗೆ ನಮ್ಮ ತಂಡ ಪೂರ್ಣ ಪ್ರಮಾಣದಲ್ಲಿ ದತ್ತು ಪಡೆದು, ಸುಸಜ್ಜಿತ ಪ್ರದೇಶವನ್ನಾಗಿ ರೂಪಿಸಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮುಂದಿನ ವರ್ಷ ಕೊಳಂಬೆಯಲ್ಲಿ ಭರ್ಜರಿ ಸ್ವಾತಂತ್ರ್ಯ ಆಚರಿಸಿ ಸುಸಜ್ಜಿತ ಹಾಗೂ ಅಭಿವೃದ್ಧಿ ಹೊಂದಿದ ಈ ಪ್ರದೇಶಗಳನ್ನು ಸಂತ್ರಸ್ತರಿಗೆ ಸಮರ್ಪಣೆ ಮಾಡುತ್ತೇವೆ.
– ಮೋಹನ್ ಕುಮಾರ್, ಉದ್ಯಮಿ ಲಕ್ಷ್ಮೀ ಗ್ರೂಪ್ಸ್

ಕಷ್ಟದಲ್ಲಿರುವವರಿಗೆ ಉತ್ತಮ ಬದುಕನ್ನು ಕಟ್ಟಿಕೊಡುವಲ್ಲಿ ನೆರವಾಗುವುದು ಉದ್ಯಮಿಗಳ ಕರ್ತವ್ಯ. ಎಲ್ಲ ಉದ್ಯಮಿಗಳು ಜತೆಗೂಡಿ ನೆರೆಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ. ನೆರೆ ಸಂತ್ರಸ್ತರು ದುಃಖಿಸುವ ಅಗತ್ಯ ಇಲ್ಲ, ನಿಮ್ಮ ಜತೆ ನಾವಿದ್ದೇವೆ ಎಂಬುದನ್ನು ನಿರೂಪಿಸುವುದೇ ಈ ಯೋಜನೆ ಉದ್ದೇಶ.
-ರಾಜೇಶ್ ಪೈ, ಉದ್ಯಮಿ, ಸಂಧ್ಯಾ ಟ್ರೇಡರ್ಸ್‌

ಸರ್ಕಾರ ನೀಡುವ ಅನುದಾನದಲ್ಲಿ ಪ್ರಕೃತಿ ವಿಕೋಪ ಪೀಡಿತ ಎಲ್ಲ ಪ್ರದೇಶಗಳನ್ನು ಅಭಿವೃದ್ಧಿ ಸಾಧ್ಯವಾಗದೆ ಇರಬಹುದು. ಆದರೂ ಸರ್ಕಾರದ ಸಹಾಯದೊಂದಿಗೆ ಉದ್ಯಮಿ, ದಾನಿಗಳ ನೆರವನ್ನು ಪಡೆಯಲು ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ಸ್ಥಾಪಿಸಲಾಗಿದೆ. ನೆರೆಪೀಡಿತ ಪ್ರದೇಶಗಳ ಶಾಶ್ವತ ಅಭಿವೃದ್ಧಿ ನಮ್ಮ ಉದ್ದೇಶ.
– ಹರೀಶ್ ಪೂಂಜ, ಶಾಸಕ ಬೆಳ್ತಂಗಡಿ

Leave a Reply

Your email address will not be published. Required fields are marked *