ಮುಂಬಯಿ: ದೇಶದಲ್ಲಿರುವ ಶೇ. 48ರಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳು ತಮ್ಮ ವ್ಯಾಪಾರವನ್ನು ಬೆಳೆಸಲು ವಹಿವಾಟಿನ ಮಾಧ್ಯಮವಾಗಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಬಳಸುತ್ತಿವೆ ಎಂದು ‘ಪೇನಿಯರ್ಬೈ’ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಆಧಾರ್ ಎನೇಬಲ್ಡ್ ಬ್ಯಾಂಕಿಂಗ್ ಅನ್ನು ಶೇ. 39ರಷ್ಟು ಉದ್ಯಮಗಳು ಬಳಸುತ್ತಿವೆ.
ಮಹಿಳಾ ಉದ್ಯಮಿಗಳ ಪೈಕಿ ಶೇ. 42ರಷ್ಟು ಜನರು ಆಧಾರ್ ಬ್ಯಾಂಕಿಂಗ್ ಬಳಸುತ್ತಿದ್ದಾರೆ. ದೇಶಾದ್ಯಂತ ನಡೆದ ಈ ಸಮೀಕ್ಷೆಯಲ್ಲಿ 10 ಸಾವಿರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರನ್ನು ಮಾತನಾಡಿಸಲಾಯಿತು. ಕಿರಾಣಿ ಅಂಗಡಿ, ಮೊಬೈಲ್ ರೀಚಾರ್ಜ್ ಸೆಂಟರ್, ಮೆಡಿಕಲ್ ಶಾಪ್, ಟ್ರಾವೆಲ್ ಏಜೆನ್ಸಿ ಮುಂತಾದವು ಅದರಲ್ಲಿ ಸೇರಿವೆ. ವಹಿವಾಟಿಗೆ ಮೊಬೈಲ್ ಫೋನ್ ಬಳಸುವ ಉದ್ಯಮಿಗಳ ಸಂಖ್ಯೆ ಶೇ. 71ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ. 84ರಷ್ಟಿದೆ. ಈ ರೀತಿಯ ಡಿಜಿಟಲ್ ಪೇಮೆಂಟ್ ಬಂದ ನಂತರ ತಮ್ಮ ವ್ಯಾಪಾರ ವೃದ್ಧಿಯಾಗಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.