ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಸಿದ್ದಾಪುರ: ಪಟ್ಟಣದಿಂದ 6 ಕಿ.ಮೀ. ದೂರವಿರುವ ತ್ಯಾರ್ಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರಿಗೆ ಇಲಾಖೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಕಾಲೇಜ್​ಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಈ ಕುರಿತು ಸಾರಿಗೆ ಇಲಾಖೆಗೆ ಕಾಲೇಜ್ ಆರಂಭವಾದಾಗಿನಿಂದ ತಿಳಿಸಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕಾಲೇಜ್​ನ ಪ್ರಧಾನ ಕಾರ್ಯದರ್ಶಿ ಪ್ರಮೋದ ಜೆ. ನಾಯ್ಕ ಕೊಂಡ್ಲಿ ಮಾತನಾಡಿ, ಸೆ. 3ರೊಳಗೆ ನಿತ್ಯ ಬೆಳಗ್ಗೆ 9ಗಂಟೆಗೆ ಮೂರು ಬಸ್ ಹಾಗೂ ಮಧ್ಯಾಹ್ನ 2.30ರ ನಂತರ ಮೂರು ಬಸ್​ಗಳನ್ನು ಕಾಲೇಜ್​ಗೆ ಬಿಡಬೇಕು. ಇಲ್ಲದಿದ್ದರೆ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಸಾರಿಗೆ ವ್ಯವಸ್ಥೆ ಸರಿಪಡಿಸುವಂತೆ ಉಪತಹಸೀಲ್ದಾರ್ ಡಿ.ಆರ್. ಬೆಳ್ಳಿಮನೆ ಹಾಗೂ ಸ್ಥಳೀಯ ಸಂಚಾರಿ ನಿಯಂತ್ರಣಾಧಿಕಾರಿ ಎಂ.ಡಿ. ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಪಿಐ ಜಯಂತ ಎಂ. ಹಾಗೂ ಉಪತಹಸೀಲ್ದಾರ ಡಿ.ಆರ್. ಬೆಳ್ಳಿಮನೆ, ವ್ಯವಸ್ಥೆ ಸರಿಪಡಿಸಲು ಒಂದು ವಾರ ಅವಕಾಶ ನೀಡಿ ಎಂದು ಕೋರಿದರು. ಅಧಿಕಾರಿಗಳ ಕೋರಿಕೆ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು ಸ್ಥಳೀಯ ಉರ್ದು ಶಾಲೆಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.  ಪ್ರತಿಭಟನೆಯಲ್ಲಿ ತಾಪಂ ಸದಸ್ಯ ನಾಸೀರ್ ಖಾನ್, ಎಂ.ಐ. ಸಚಿನ್, ಪಲ್ಲವಿ ನಾಯ್ಕ, ಭವ್ಯಶ್ರೀ, ದಿವ್ಯಶ್ರೀ, ಆರ್.ವಸಂತ, ಆದರ್ಶ ಆರ್. ನಾಯ್ಕ, ವಿನಾಯಕ ಎಂ., ವಿಘ್ನೕಶ ಮಡಿವಾಳ ಇತರರಿದ್ದರು.

ಸಾರಿಗೆ ಇಲಾಖೆಯ ಸಹಕಾರಿ ಸಂಘದ ಚುನಾವಣೆ ಇದ್ದಿದ್ದರಿಂದ ಕಳೆದ ಹಲವು ದಿನಗಳಿಂದ ಬಸ್ ವ್ಯವಸ್ಥೆ ಸರಿಯಾಗಿಲ್ಲ. ನಾಳೆಯಿಂದಲೇ ವ್ಯವಸ್ಥೆ ಸರಿಪಡಿಸಲಾಗುವುದು. | ಎಂ.ಡಿ. ನಾಯ್ಕ ಸಂಚಾರಿ ನಿಯಂತ್ರಣಾಧಿಕಾರಿ