ಆಘಾತದಿಂದ ಹೊರ ಬಾರದ ಶಾಲಾ ಮಕ್ಕಳು

ಪಾಂಡವಪುರ: ಓದು, ಆಟೋಟಗಳಲ್ಲಿ ಜತೆಯಲ್ಲಿದ್ದ ಸಹಪಾಠಿಗಳನ್ನು ಬಸ್ ದುರಂತದಲ್ಲಿ ಕಳೆದುಕೊಂಡ ಕನಗನಮರಡಿ ಶಾಲೆಯ ಇತರ ಮಕ್ಕಳು ಆಘಾತದಿಂದ ಇನ್ನೂ ಹೊರಬಂದಿಲ್ಲ. ತಮ್ಮ ಸ್ನೇಹಿತರ ನೆನಪಿನಲ್ಲೆ ಶಾಲೆಗೆ ಹಾಜರಾಗಿದ್ದು, ಆಟ-ಪಾಠಗಳಲ್ಲಿ ನಿರುತ್ಸಾಹರಾಗಿದ್ದಾರೆ…!
ಹೌದು.. ಶನಿವಾರ ಸಂಭವಿಸಿದ ಬಸ್ ದುರಂತದಲ್ಲಿ ಕನಗನಮರಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಮಕ್ಕಳು ಮೃತಪಟ್ಟಿದ್ದರು. ಇದರಲ್ಲಿ 7 ನೇ ತರಗತಿಯ ಪ್ರಶಾಂತ್, ಪ್ರೀತಿ, ವಿ.ಎಸ್.ರವಿಕುಮರ್ ಹಾಗೂ 6ನೇ ತರಗತಿಯ ಪವಿತ್ರಾ ಪ್ರಾಣ ಕಳೆದುಕೊಂಡಿದ್ದರು. ಪ್ರತಿದಿನ ಆಟೋಟ, ತುಂಟಾಟ, ಚೆಲ್ಲಾಟ, ಓದು ಬರಹ ಇನ್ನಿತರ ಚಟವಟಿಕೆಗಳಲ್ಲಿ ಸಹವರ್ತಿಗಳಾಗಿದ್ದ ಸಹಪಾಠಿಗಳ ಮರಣ ಇತರ ಮಕ್ಕಳಿಗೆ ಉತ್ಸಾಹ ಕುಗಿಸಿದೆ.
ಲವಲವಿಕೆಯಿಂದ ಇರಬೇಕಾದ ಮಕ್ಕಳ ಮೊಗದಲ್ಲಿ ಘಟನೆಯ ಕಹಿ ನೆನಪು ಮಾಸಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಆಟದಲ್ಲಿ ತಲ್ಲಿನರಾಗಿದ್ದರೆ ಹೊರತು, ಬಹುತೇಕ ಮಕ್ಕಳು ಆಟದಿಂದ ದೂರ ಉಳಿದಿದ್ದರು. ಶಾಲಾ ಶಿಕ್ಷಕರು ಕೂಡ ಘಟನೆಯಿಂದ ವಿಚಲಿತರಾದಂತೆ ಕಂಡು ಬಂದರು. ಮೃತ ಮಕ್ಕಳು ಶಾಲಾ ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಮೆಲಕು ಹಾಕುತ್ತಿದ್ದರು.
ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಒಟ್ಟಿಗೆ ಸಂಚರಿಸುತ್ತಿದ್ದೆವು. ಶಾಲಾ ವೇಳೆಯಲ್ಲೂ ಜತೆಯಲ್ಲಿರುತ್ತಿದ್ದೆವು. ಘಟನೆ ನಡೆದ ದಿನ ರವಿಕುಮಾರ್, ‘ನನಗೆ ತುಂಬ ಕಾಲು ನೋಯುತ್ತಿದೆ. ನನ್ನ ಸೈಕಲ್ ತೆಗೆದುಕೊಂಡು ಎರಡು ರೂ.ಕೊಡು. ನಾನು ಬಸ್ಸಿನಲ್ಲಿ ಹೋಗುತ್ತೇನೆ ಎಂದು ಹಣ ಪಡೆದು ಟಾಟಾ ಮಾಡುತ್ತ ನಗು ನಗುತ್ತ ಬಸ್ ಹತ್ತಿ ಮನೆಗೆ ತೆರಳಿದ ಸ್ನೇಹಿತನನ್ನು ನಡು ರಸ್ತೆಯ ಕಾಲುವೆ ದಡದಲ್ಲಿ ಶವವಾಗಿ ನೋಡಿದಾಗ ನನಗೆ ಅಳು ತಡೆಯಲಾಗಲಿಲ್ಲ. ಈಗಲೂ ನನಗೆ ದುಃಖ ಬರುತ್ತಿದೆ’ ಎಂದು ಮೃತ ರವಿಕುಮಾರ್ ಬಳಿ ಸೈಕಲ್ ಪಡೆದು ಬದುಕುಳಿದ ಆತನ ಸ್ನೇಹಿತ ಶಿವಸಂಜು ಕಣ್ಣೀರು ಹಾಕುತ್ತ ಹೇಳಿದ.
ಶಾಲಾ ಮಕ್ಕಳ ಶವವನ್ನು ನೋಡಿದ ಕೂಡಲೇ ಮೂರ್ಛೆ ಹೋದೆ. ತಕ್ಷಣ ನನ್ನನ್ನು ಅಂಬುಲೆನ್ಸ್‌ನಲ್ಲಿ ಚಿಕ್ಕಬ್ಯಾಡರಹಳ್ಳಿ ಆಸ್ಪತ್ರೆಗೆ ದಾಖಲಿಸಿ ಡ್ರಿಪ್ಸ್ ಹಾಕುತ್ತಿದ್ದ ವೇಳೆ ಎಚ್ಚರವಾಯಿತು. ನನ್ನನ್ನೂ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ವಿನಂತಿಸಿದೆ. ಆದರೆ ನನ್ನ ತಮ್ಮ ಇದನ್ನು ನಿರಾಕರಿಸಿದ. ಕರೆದುಕೊಂಡು ಹೋಗದಿದ್ದರೆ ನಾನು ನೇಣು ಬಿಗಿದುಕೊಳ್ಳವುದಾಗಿ ಹೇಳಿದ ಮೇಲೆ ಕರೆದುಕೊಂಡು ಹೋದರು. ನನಗೆ ಮಕ್ಕಳಿಲ್ಲ. ಶಾಲಾ ಮಕ್ಕಳನ್ನೆ ನನ್ನ ಮಕ್ಕಳೆಂದು ತಿಳಿದು ಅವರ ಜತೆ ಬೆರೆತಿದ್ದೆ. ಘಟನೆಯಿಂದ ನನಗೆ ಇಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಶಾಲೆಯ ಸಹ ಶಿಕ್ಷಕಿ ದ್ರಾಕ್ಷಾಯಿಣಿ ಕಣ್ಣೀರಾದರು.