ಕನಗನಮರಡಿಯಲ್ಲಿ ಸ್ಮಶಾನ ಮೌನ

| ಕೆ.ಎನ್. ರಾಘವೇಂದ್ರ

ಮಂಡ್ಯ: ಒಂದೆಡೆ ನಿತ್ಯ ಬೆಳಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ ಮೌನವಾಗಿ ಚಿರನಿದ್ರೆಗೆ ಜಾರಿದ್ದರು.

ಎಲ್ಲಿ ನೋಡಿದರೂ ನೀರವ ಮೌನ, ತಮ್ಮವರನ್ನು ನೆನೆಸಿಕೊಂಡ ಕುಟುಂಬದವರ ಮುಖದಲ್ಲಿ ಮಡುಗಟ್ಟಿದ್ದ ದುಃಖ.

ಇದು ಪಾಂಡವಪುರ ತಾಲೂಕು ಕನಗನಮರಡಿ ಸಮೀಪ ಶನಿವಾರ ನಡೆದ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟವರ ಗ್ರಾಮದಲ್ಲಿ ಭಾನುವಾರ ಕಂಡುಬಂದ ದೃಶ್ಯ.

ಯಮಸ್ವರೂಪಿ ಖಾಸಗಿ ಬಸ್ 9 ಮಕ್ಕಳು ಸೇರಿ 30 ಜನರನ್ನು ಬಲಿ ಪಡೆದಿದೆ. ಜಿಲ್ಲೆಯ ದೊಡ್ಡ ದುರಂತ ಕಂಡು ರಾಜ್ಯಾದ್ಯಂತ ಜನರು ಮರುಕಪಟ್ಟಿದ್ದಾರೆ. ಅದೇ ರೀತಿ ಮೃತಪಟ್ಟವರ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ. ಅಪಘಾತದಲ್ಲಿ ಮೃತಪಟ್ಟವರ ಶವ ಪರೀಕ್ಷೆ ನಡೆಸಿ ಶನಿವಾರ ರಾತ್ರಿ ವಾರಸುದಾರರಿಗೆ ಒಪ್ಪಿಸಲಾಯಿತು. ಬಳಿಕ ಎಲ್ಲ ಶವಗಳನ್ನು ಸಂಬಂಧಿಕರು ತಂತಮ್ಮ ಗ್ರಾಮಗಳಿಗೆ ತೆಗೆದುಕೊಂಡು ಬಂದಿದ್ದರು. ದೂರದ ಊರುಗಳಿಂದ ಸಂಬಂಧಿಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದುಕೊಂಡರು.

ಸಾಮೂಹಿಕ ಅಂತ್ಯಸಂಸ್ಕಾರ: ಬಹುತೇಕರು ತಮ್ಮವರನ್ನು ವೈಯಕ್ತಿಕ ವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ವದೇಸಮುದ್ರ ಗ್ರಾಮವೊಂದರಲ್ಲೇ 8 ಜನ ಮೃತಪಟ್ಟಿದ್ದರಿಂದ ಭಾನುವಾರ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು. ಮೃತಪಟ್ಟವರಲ್ಲಿ ಎಲ್ಲ ಸಮುದಾಯದವರಿದ್ದು, ಗ್ರಾಮದ ಹೊರವಲಯದಲ್ಲಿ ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಘಟನಾ ಸ್ಥಳದಲ್ಲಿ ಜನರು: 30 ಜನರನ್ನು ಬಲಿ ತೆಗೆದುಕೊಂಡ ಸ್ಥಳಕ್ಕೆ ಭಾನುವಾರವೂ ಜನರು ಆಗಮಿಸಿದ್ದರು. ದೊಡ್ಡ ರಸ್ತೆಯ ನಡುವೆಯೂ ನಾಲೆಯೊಳಗೆ ಬಸ್ ನುಗ್ಗಿಸಿದ ಚಾಲಕನಿಗೆ ಶಪಿಸಿದರೆ, ಮತ್ತೊಂದೆಡೆ ಅಪಘಾತದ ಬಗ್ಗೆ ತಮ್ಮದೇ ಆದ ವಿಶ್ಲೇಷಣೆಯಲ್ಲಿ ತೊಡಗಿದ್ದರು. ಮಹಿಳೆಯರು ಸ್ಥಳದಲ್ಲಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಘಟನೆಯ ತೀವ್ರತೆಗೆ ಸಾಕ್ಷಿಯಾಗಿತ್ತು.

ಪರಿಹಾರದ ನಿರೀಕ್ಷೆ

ಮೃತರ ಪೈಕಿ ಬಹುತೇಕರು ಬಡಕುಟುಂಬದವರು, ಚಿಕ್ಕಮನೆಗಳಲ್ಲಿ ವಾಸಿಸುತ್ತಿದ್ದರು. ಮೃತರ ಪೈಕಿ ಕೆಲ ಮಕ್ಕಳು ಓದಿನ ಜತೆಗೆ ಪಾಲಕರು ದುಡಿಮೆಗೂ ಸಹಕರಿಸುತ್ತಿದ್ದರು. ಹೀಗಾಗಿ ಘೋಷಿಸಿದ ಪರಿಹಾರವನ್ನು ಆದಷ್ಟು ಬೇಗ ನೀಡಿದರೆ ಬದುಕು ರೂಪಿಸಿಕೊಳ್ಳಲು ಅನುಕೂಲವಾಗಲಿದೆ.

ಕಂಡಕ್ಟರ್ ವಶ ಚಾಲಕ ನಾಪತ್ತೆ

ಬಸ್ ಅಪಘಾತ ಪ್ರಕರಣ ಸಂಬಂಧ ನಿರ್ವಾಹಕ ತಾಂಡವ ಎಂಬಾತನನ್ನು ಪಾಂಡವಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ನಂತರ ತಲೆ ತಪ್ಪಿಸಿಕೊಂಡಿದ್ದ ಹೊಳಲು ಗ್ರಾಮದ ತಾಂಡವನನ್ನು ಪತ್ನಿಯ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಚಾಲಕ ಮಹದೇವು ನಾಪತ್ತೆಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ರಕ್ಷಣೆ ಬಳಿಕ ಪರಾರಿ

ಅಪಘಾತ ಸಂಭವಿಸಿದಾಗ ಚಾಲಕ ಬಸ್​ನಿಂದ ಪರಾರಿಯಾಗಿದ್ದನು ಎನ್ನಲಾಗಿತ್ತು. ಆದರೆ, ಆತನೂ ಬಸ್​ನ ಜತೆ ನೀರಿನೊಳಗೆ ಬಿದ್ದಿದ್ದನು. ಈ ವೇಳೆ ಅಲ್ಲಿಯೇ ಇದ್ದ ಅಂಕೇಗೌಡ ಮತ್ತು ರಾಮೇಗೌಡ ಎಂಬುವರು ಆತನನ್ನು ರಕ್ಷಿಸಿದ್ದಾರೆ. ಆದರೆ, ದಡಕ್ಕೆ ಬರುತ್ತಿದ್ದಂತೆ ಆತ ಓಡಿ ಹೋಗಿದ್ದಾನೆ. ಇನ್ನು ನಿರ್ವಾಹಕ ಕೂಡ ನೀರಿನಲ್ಲಿ ಈಜುತ್ತ ದಡ ಸೇರಿ, ಬಳಿಕ ಓಡಿ ಹೋದನೆಂದು ಪ್ರತ್ಯಕ್ಷದರ್ಶಿ ಅಂಕೇಗೌಡ ತಿಳಿಸಿದರು.

ಸರ್ಕಾರಿ ಬಸ್ ಸೇವೆ ಆರಂಭ

ದುರಂತದ ಬಳಿಕ ಈ ಭಾಗದ ಗ್ರಾಮಗಳಿಗೆ ಸರ್ಕಾರಿ ಬಸ್ ಸಂಚಾರ ಸೇವೆ ಆರಂಭಿಸಲಾಗಿದೆ. ಇದರ ಅಂಗವಾಗಿ ಭಾನುವಾರ 2 ಸರ್ಕಾರಿ ಬಸ್​ಗಳು ಸಂಚರಿಸಿದವು. ಸರ್ಕಾರಿ ಬಸ್​ಗಳಿಲ್ಲದೆ ಖಾಸಗಿ ಬಸ್​ಗಳನ್ನೇ ಅವಲಂಬಿಸಲಾಗಿದೆ. ಇದರಿಂದ ಜನರು ತೊಂದರೆ ಪಡುವಂತಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ವಹಿಸಿದ್ದು, ಪಾಂಡವಪುರದಿಂದ ವದೇಸಮುದ್ರ, ಚಿಕ್ಕಕೊಪ್ಪಲು ಮಾರ್ಗವಾಗಿ ಮಂಡ್ಯಕ್ಕೆ ಬಸ್ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಬಸ್ ಬರುವ ಸಮಯ ನಿಗದಿಪಡಿಸಲು ತೀರ್ವನಿಸಲಾಗಿದೆ.

ಪರಿಹಾರ ವಿತರಣೆ

ಅಪಘಾತದಲ್ಲಿ ಮೃತಪಟ್ಟ 30 ಜನರ ಕುಟುಂಬಕ್ಕೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಲಾ 10 ಸಾವಿರ ರೂ. ಪರಿಹಾರ ನೀಡಲಾಯಿತು. ಭಾನುವಾರ ಮೃತರ ಮನೆಗೆ ಭೇಟಿ ನೀಡಿದ ಸಂಸ್ಥೆಯ ಪದಾಧಿಕಾರಿಗಳು, ಸಂಬಂಧಪಟ್ಟವರಿಗೆ ಪರಿಹಾರದ ಹಣ ವಿತರಿಸಿದರು. ಘಟನೆ ಬಗ್ಗೆ ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರಲ್ಲಿ ಸಂಸ್ಥೆಯ ಸದಸ್ಯರಿದ್ದರೆ ಅವರ ಬಗ್ಗೆ ಮಾಹಿತಿ ಕಲೆಹಾಕಿ, ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಪ್ರಾಣ ಉಳಿಸಿತೇ ಬಿಸಿಯೂಟ?

ಪಾಂಡವಪುರ: ಬಸ್ ದುರಂತದಲ್ಲಿ ಇನ್ನಷ್ಟು ಶಾಲಾ ಮಕ್ಕಳ ಸಾವಾಗುವುದನ್ನು ಬಿಸಿಯೂಟ ತಪ್ಪಿಸಿದೆ ಎನ್ನುವ ಮಾತು ಕೇಳಿಬಂದಿದೆ. ವದೇಸಮುದ್ರ, ಚಿಕ್ಕಕೊಪ್ಪಲು ಸೇರಿ ಈ ಭಾಗದಿಂದ ಹಲವು ವಿದ್ಯಾರ್ಥಿಗಳು ಚಿಕ್ಕಬ್ಯಾಡರಹಳ್ಳಿ ಪ್ರೌಢಶಾಲೆಗೆ ಈ ಬಸ್​ನಲ್ಲಿಯೇ ತೆರಳುತ್ತಿದ್ದರು. ಶನಿವಾರ ಬೇಗ ತರಗತಿ ಮುಗಿಸಿದ ವಿದ್ಯಾರ್ಥಿಗಳು ಮನೆಗೆ ತೆರಳುವ ಧಾವಂತದಲ್ಲಿದ್ದರು. ಆದರೆ, ಶಿಕ್ಷಕರು ಸ್ಪೆಷಲ್ ಕ್ಲಾಸ್ ಇದೆ ಯಾರೂ ಮನೆಗೆ ತೆರಳಬಾರದು ಎಂದು ಕಟ್ಟಪ್ಪಣೆ ನೀಡಿದ್ದಾರೆ. ಬಿಸಿಯೂಟ ಮಾಡಿಕೊಂಡು ಹೋಗಲೆಂದು ಶಿಕ್ಷಕರು ಈ ಮಾತು ಹೇಳಿದ್ದಾರೆನ್ನಲಾಗಿದೆ. ಶಿಕ್ಷಕರ ಒತ್ತಡಕ್ಕೆ ಮಣಿದು ಮಕ್ಕಳು ಶಾಲೆಯಲ್ಲಿ ಉಳಿದುಕೊಳ್ಳುವುದರ ಜತೆಗೆ ಬಿಸಿಯೂಟ ಸೇವಿಸಿದ್ದಾರೆ. ಇದರಿಂದ ಅಪಘಾತಕ್ಕೀಡಾದ ಬಸ್ ಚಿಕ್ಕಬ್ಯಾಡರಹಳ್ಳಿ ಗ್ರಾಮದಿಂದ ಹೊರಟು ಹೋಗಿದೆ. ಶಿಕ್ಷಕರ ನಿಲುವೊಂದು ಅನೇಕ ಮಕ್ಕಳ ಪ್ರಾಣ ಕಾಪಾಡಿದೆ ಎನ್ನಲಾಗುತ್ತಿದೆ.

30 ಮಂದಿ ಜಲಸಮಾಧಿ