ಕಾರ್ವಿುಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಚಿಕ್ಕಮಗಳೂರು: ಬೆಲೆ ಏರಿಕೆ ನಿಯಂತ್ರಿಸಬೇಕು. ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು. ಫ್ಯಾಕ್ಟರಿ, ಕಾರ್ವಿುಕ ಸಂಘಟನೆಗಳ ಕಾಯ್ದೆ, ಕೈಗಾರಿಕಾ ಮತ್ತು ವಾಣಿಜ್ಯ, ಗುತ್ತಿಗೆ ಪದ್ಧತಿ ರದ್ದತಿ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ವಲಯಗಳ ಕಾರ್ವಿುಕರು ಮಂಗಳವಾರ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ ಕೆರೆ ನೀಡಿದ್ದ ಕಾರ್ವಿುಕ ಚಳವಳಿಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಾರ್ವಿುಕರು ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ವ್ಯಾಪಾರಿಗಳು ಅಂಗಡಿ ಮುಂಗಟ್ಟು ನಡೆಸಿದರೂ ಗ್ರಾಹಕರ ಕೊರತೆ ಇತ್ತು. ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಿದರೂ ವಾಹನಗಳಿರಲಿಲ್ಲ. ಕೆಲವೆಡೆ ಶಾಲಾಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದರು.

ಕೆಎಸ್​ಆರ್​ಟಿಸಿ ವರ್ಕರ್ಸ್ ಯೂನಿಯನ್, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ಕಾರ್ಯಕರ್ತರು ಮುಷ್ಕರದಲ್ಲಿ ಭಾಗವಹಿಸಿದ್ದರು. ಬಿಸಿಯೂಟ ಕಾರ್ಯಕರ್ತರಿಲ್ಲದೆ ಶಿಕ್ಷಕರೇ ಊಟ ತಯಾರಿಸಬೇಕಾಯಿತು.

ಸಂಘಟನೆಗಳಿಂದ ಮೆರವಣಿಗೆ: ವಿವಿಧ ಕಾರ್ವಿುಕ ಸಂಘಟನೆಗಳ ಕಾರ್ವಿುಕರು ಸಿಪಿಐ ಕಚೇರಿಯಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡರು. ಭಾರತೀಯ ಕಾಂಗ್ರೆಸ್ ಕಾರ್ವಿುಕ ಸಂಘಟನೆ ತಾಲೂಕು ಕಚೇರಿಯಿಂದ ಪ್ರತ್ಯೇಕವಾಗಿ ಮೆರವಣಿಗೆ ಹೊರಟು ಎಂಜಿ ರಸ್ತೆಯಲ್ಲಿ ಸೇರಿಕೊಂಡಿತು.

ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನ, ಕಾರ್ವಿುಕ, ರೈತ ವಿರೋಧಿ ಆಡಳಿತ ನಡೆಸುತ್ತಿದೆ. ಭಾರತದ ಆರ್ಥಿಕ, ಕೈಗಾರಿಕಾ, ಕೃಷಿ ಹಾಗೂ ಸಾಮಾಜಿಕ ವ್ಯವಸ್ಥೆ ಅಧೋಗತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದುಡಿಯುವ ವರ್ಗದ ಮೇಲೆ ನಿರಂತರ ದಾಳಿ ಮಾಡುವ ಜತೆ, ಬದುಕಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಕೇಂದ್ರದ ಆಡಳಿತ ನೀತಿಯಿಂದ ಸಂಘಟಿತ, ಅಸಂಘಟಿತ ಕಾರ್ವಿುಕರು, ರೈತರು, ವಿದ್ಯಾರ್ಥಿ ಯುವಜನರು ತೀವ್ರ ತೊಂದರೆಗೀಡಾಗಿದ್ದಾರೆ. ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಕೆಲವೇ ತಿಂಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕಾರ್ಖಾನೆಗಳು ಮುಚ್ಚಿವೆ. ಸಂಘಟಿತ ವಲಯದಲ್ಲಿ 17 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿದರೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ರಕ್ಷಣೆ, ಬ್ಯಾಂಕ್, ವಿಮೆ, ರೈಲ್ವೆ, ಪೆಟ್ರೋಲಿಯಂ ಇತ್ಯಾದಿ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಲು ಅವಕಾಶ ಮಾಡಿರುವುದು ದೇಶದ ಹಿತಕ್ಕೆ ಧಕ್ಕೆ ತಂದಿದೆ. ಬ್ಯಾಂಕುಗಳಿಗೆ ಕೋಟ್ಯಂತರ ರೂ. ವಂಚಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಎಐಟಿಯುಸಿ ಅಧ್ಯಕ್ಷ ಕೆ. ಗುಣಶೇಖರ್, ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಮಾಣಿಕ್ಯ, ಕೆ.ಎಂ.ರಾಮಚಂದ್ರ ಒಡೆಯರ್, ಎ.ಪಿ.ಸೆಲ್ವಂ, ಟಿ, ಮುನಿಯಾಂಡಿ, ಕೆ.ಎಂ. ಸುಬ್ರಮಣಿ, ರಾಧಾ ಸುಂದರೇಶ್, ರೇಣುಕಾರಾಧ್ಯ ಇತರರು ಭಾಗವಹಿಸಿದ್ದರು.