ಬಸ್ ನಿಲ್ದಾಣ ಪಡೀಲ್‌ಗೆ ಸ್ಥಳಾಂತರ

ಮಂಗಳೂರು:  ಪಂಪ್‌ವೆಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ ಬಸ್ ನಿಲ್ದಾಣ ಸಂಕೀರ್ಣವನ್ನು ಪಡೀಲ್‌ಗೆ ಸ್ಥಳಾಂತರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಆಡಳಿತ ನಿರ್ದೇಶಕ ಬಿ.ಎಚ್.ನಾರಾಯಣಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂಪ್‌ವೆಲ್ ಏಳು ಎಕರೆ ಜಾಗ ಹೊಂದಿದ್ದರೆ, ಪಡೀಲ್‌ನಲ್ಲಿ 20 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಜಾಗ ಗುರುತಿಸಲಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಧಿಕಾರಿ ಸಂಕೀರ್ಣದ ಸಮೀಪದಲ್ಲೇ ಜಾಗ ಇದೆ. ಕೂಳೂರು, ಪಂಪ್‌ವೆಲ್‌ನಲ್ಲಿ ಸ್ಯಾಟಲೈಟ್ ಬಸ್‌ನಿಲ್ದಾಣ ನಿರ್ಮಾಣ, ಸ್ಟೇಟ್‌ಬ್ಯಾಂಕ್‌ನಲ್ಲಿ ಇರುವ ಬಸ್ ನಿಲ್ದಾಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

1870 ಕೋಟಿ ರೂ. ಯೋಜನೆಗೆ ಅಂಗೀಕಾರ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ 44 ಕಾಮಗಾರಿ (958.57 ಕೋಟಿ ರೂ. ವೆಚ್ಚದ) ಹಾಗೂ ಖಾಸಗಿ ಸಾರ್ವಜನಿಕ ಸಹಭಾಗಿತ್ವದ 912.17 ಕೋಟಿ ರೂ.ಗಳ 17 ಕಾಮಗಾರಿಗಳು ವಿವಿಧ ಹಂತದಲ್ಲಿವೆ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 100 ಕೋಟಿ ರೂ. ಮೊತ್ತವನ್ನು ಐದು ವರ್ಷಗಳಲ್ಲಿ ಬಿಡುಗಡೆಗೊಳಿಸಲಿದೆ. ಒಟ್ಟು 1 ಸಾವಿರ ಕೋಟಿ ರೂ. ಮೊತ್ತಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಸಿದ್ಧಪಡಿಸಲಾಗಿದೆ, ಕೆಲವು ಯೋಜನೆಗಳು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ನಾರಾಯಣಪ್ಪ ತಿಳಿಸಿದರು.
ನಗರದ ಎಂಟು ವಾರ್ಡ್‌ಗಳ 1628 ಎಕರೆ ಪ್ರದೇಶದ ಅಭಿವೃದ್ಧಿ ಈ ಸ್ಮಾರ್ಟ್ ಸಿಟಿ ಯೋಜನೆಯದ್ದಾಗಿದೆ. ಈ ಯೋಜನೆಯಡಿ ಕಾರ್ಯಾದೇಶಗೊಂಡಿರುವ ಕಾಮಗಾರಿಗಳಲ್ಲಿ ಗಡಿಯಾರ ಗೋಪುರ ನಿರ್ಮಾಣ ಕಾಮಗಾರಿ(90 ಲಕ್ಷ ರೂ. ವೆಚ್ಚದಲ್ಲಿ) ಬಹುತೇಕ ಅಂತಿಮಗೊಂಡಿದೆ ಎಂದರು.
106.38 ಕೋಟಿ ರೂ.ಗಳ 10 ಕಾಮಗಾರಿ ಕಾರ್ಯಾದೇಶಗೊಂಡಿದ್ದರೆ, 326.72 ಕೋಟಿ ರೂ.ಗಳ 12 ಕಾಮಗಾರಿಗಳು ಟೆಂಡರ್ ಆಗಿವೆ. 161.86 ಕೋಟಿ ರೂ. ವೆಚ್ಚದ 9 ಕಾಮಗಾರಿಗಳು ವಿಸ್ತೃತ ಯೋಜನೆ ವರದಿ ಹಂತದಲ್ಲಿವೆ. 363.61 ಕೋಟಿ ರೂ.ಗಳ 13 ಕಾಮಗಾರಿಗಳು ಪರಿಕಲ್ಪನೆ ವರದಿ ಹಂತದಲ್ಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳಾದ ಚಂದ್ರಕಾಂತ್, ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

ಪ್ರವಾಸಿ ತಾಣವಾಗಿ ದಕ್ಕೆ ದ್ವೀಪ
ಜಲಾಭಿಮುಖ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿ ಅಭಿವೃದ್ಧಿ ಪಡಿಸುವ ಪರಿಕಲ್ಪನೆಯ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಮುಖ ಉದ್ದೇಶ ಹೊಂದಲಾಗಿದೆ. ದಕ್ಕೆ ಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನೇರ ಸಂಪರ್ಕ ಕಲ್ಪಿಸಿ, ವಿಹಾರ ತಾಣವನ್ನಾಗಿಸುವ ಯೋಜನೆ ಇದೆ. ದಕ್ಕೆ ಪ್ರದೇಶದಲ್ಲಿ ಕೃತಕ ದ್ವೀಪವಾಗಿ ಮಾರ್ಪಟ್ಟಿರುವ ಜಾಗದಲ್ಲಿ ಪ್ರವಾಸಿ ತಾಣವಾಗಿಸಿ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಸುಮಾರು 235 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಯೋಜನೆ ಕುರಿತಾದ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ನಾರಾಯಣಪ್ಪ ತಿಳಿಸಿದರು.

ಕದ್ರಿ ಪಾರ್ಕ್‌ಗೆ 12 ಕೋಟಿ ರೂ.
ಪ್ರತ್ಯೇಕ ಇರುವ ಕದ್ರಿ ಪಾರ್ಕ್‌ಗಳನ್ನು ಒಂದಾಗಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ 12 ಕೋಟಿ ರೂ. ನಿಗದಿಪಡಿಸಿದೆ. ಎಮ್ಮೆಕೆರೆಯಲ್ಲಿ 24.94 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣವಾಗಲಿದೆ. ಕಾವೂರು ಮತ್ತು ಗುಜ್ಜರಕೆರೆಗಳು ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳಲಿವೆ. ಮಂಗಳಾ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಉನ್ನತೀಕರಣಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

600 ಕಾರುಗಳ ಪಾರ್ಕಿಂಗ್ ಸಂಕೀರ್ಣ
ಹಂಪನಕಟ್ಟೆ ಹಳೇ ಬಸ್ ನಿಲ್ದಾಣ ಜಾಗದಲ್ಲಿ ಬಹು ಅಂತಸ್ತಿನ ಕಾರು ಪಾರ್ಕಿಂಗ್ ಸಂಕೀರ್ಣಕ್ಕೆ ಆರ್.ಕೆ.ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಇದರಲ್ಲಿ 600ಕ್ಕೂ ಹೆಚ್ಚು ಕಾರು ನಿಲ್ಲಿಸಲು ಅವಕಾಶವಿದೆ. ಸ್ಥಳೀಯ ವ್ಯಾಪಾರಸ್ಥರನ್ನೂ ಇದರಲ್ಲಿ ಸೇರಿಸಿಕೊಂಡು ಯೋಜನೆ ಮುಂದುವರಿಸಲು ಹೆಚ್ಚಿನವರು ಒಪ್ಪಿಗೆ ನೀಡಿದ್ದಾರೆ. ಬಹು ಮಹಡಿ ಕಾರು ಪಾರ್ಕಿಂಗ್‌ನಿಂದಾಗಿ ಮನಪಾಕ್ಕೆ ಸುಮಾರು 2 ಕೋಟಿ ರೂ. ಆದಾಯವೂ ಬರಲಿದೆ ಎಂದು ನಾರಾಯಣಪ್ಪ ಹೇಳಿದರು.

ಕಸಾಯಿಖಾನೆ ಕೈಬಿಟ್ಟಿಲ್ಲ
ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಯೋಜನೆ ಸ್ಮಾರ್ಟ್‌ಸಿಟಿಯಲ್ಲಿ ಇದ್ದು, ಪರಿಕಲ್ಪನಾ ಹಂತದಲ್ಲೇ ಇದೆ ಎಂದು ನಾರಾಯಣಪ್ಪ ಸ್ಪಷ್ಟಪಡಿಸಿದರು. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ಪ್ರಸ್ತಾಪಕ್ಕೆ ಈ ಹಿಂದೆ ಅನುಮೋದನೆ ಲಭಿಸಿತ್ತು. ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವಂತೆ ತಜ್ಞರ ಸಮಿತಿಗೆ ಸೂಚನೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *