ಅರ್ಧಕ್ಕೆ ನಿಂತು ಹೋಗಿದೆ ಬಸ್ ನಿಲ್ದಾಣ ಕಾಮಗಾರಿ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಮರಳು ಸಮಸ್ಯೆ ಜನಸಾಮಾನ್ಯರಿಗೆ ಮಾತ್ರವಲ್ಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳಿಗೂ ತಟ್ಟಿದೆ. ಇದಕ್ಕೆ ಹಕ್ಲಾಡಿ ಗ್ರಾಪಂ ವತಿಯಿಂದ ನಿರ್ಮಿಸುತ್ತಿರುವ ಬಸ್ ನಿಲ್ದಾಣದ ಅಪೂರ್ಣ ಕಾಮಗಾರಿ ಒಂದು ನಿದರ್ಶನ.
ಹಕ್ಲಾಡಿ-ಆಚಾರಮಕ್ಕಿ ಹೋಗುವ ಕ್ರಾಸ್ ಬಳಿ ಬಸ್ ನಿಲ್ದಾಣ ನಿರ್ಮಿಸಿ ಕೊಡುವಂತೆ ಪರಿಸರದ ಪ್ರಯಾಣಿಕರು ಬೇಡಿಕೆ ಇಟ್ಟಿದ್ದು, ಜನರ ಬೇಡಿಕೆಗೆ ಸ್ಪಂದಿಸಿದ ಹಕ್ಲಾಡಿ ಗ್ರಾಪಂ, ಆಚಾರಮಕ್ಕಿ ಬದಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಹಕ್ಲಾಡಿ ಗ್ರಾಪಂ ಸುಮಾರು 75 ಸಾವಿರ ರೂ. ವೆಚ್ಚದಲ್ಲಿ ಅನುದಾನ ಕಾದಿರಿಸಿ, ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಯಿತು. ಗುತ್ತಿಗೆದಾರರು ಮರಳು ಹೊಂದಿಸಿ ಗೋಡೆ, ಸ್ಲ್ಯಾಬ್ ಹಾಗೂ ಒರಗು ಬೆಂಚು ಕೆಲಸ ಪೂರ್ಣಗೊಳಿಸಿದ್ದಾರೆ. ಬಾಕಿ ಉಳಿದಿರುವುದು ಗೋಡೆಗೆ, ಒರಗು ಬೆಂಚಿಗೆಹಾಗೂ ನೆಲಕ್ಕೆ ಮಾರ್ಬಲ್ ಹಾಕುವ ಕೆಲಸ. ಈ ಕೆಲಸ ಮುಗಿಯದೆ ಬಸ್ ನಿಲ್ದಾಣ ಇದ್ದೂ ಇಲ್ಲದಂಥ ಪರಿಸ್ಥಿತಿಯಲ್ಲಿದೆ.
ಬಸ್ ನಿಲ್ದಾಣ ಗುತ್ತಿಗೆ ಪಡೆದವರು ಕೆಲಸ ಮುಗಿಸುವ ನಿಟ್ಟಿನಲ್ಲಿ ಎರಡೆರೆಡು ಬಾರಿ ಬಸ್ ನಿಲ್ದಾಣ ಬಳಿ ಮರಳು ತಂದು ಡಂಪ್ ಮಾಡಿದರೂ, ಡಂಪ್ ಮಾಡಿದ ಮರಳನ್ನು ಯಾರೋ ರಾತ್ರಿ ಅಪಹರಿಸಿದ್ದರಿಂದ ಕೆಲಸ ಪೂರ್ಣವಾಗದೆ ಬಾಕಿ ಉಳಿದಿದೆ.

ಮರಳು ನಿರೀಕ್ಷೆಯಲ್ಲಿ ಬಸ್ ನಿಲ್ದಾಣ: ಬಸ್ ನಿಲ್ದಾಣ ಪೂರ್ಣಗೊಳಿಸಲು ಗ್ರಾಪಂ ಅನುದಾನ ಸಾಲದೆ ಗುತ್ತಿಗೆ ವಹಿಸಿಕೊಂಡವರು ತಮ್ಮ ಕೈಯಿಂದ 20 ಸಾವಿರ ರೂ. ವ್ಯಯಿಸಿದ್ದರು. ಮಾರ್ಬಲ್ ಹಾಗೂ ಸುಣ್ಣ ಬಣ್ಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮರಳು ಸಿಗದಿರುವುದರಿಂದ ಕೆಲಸ ನಿಂತಿದೆ. ಮರಳು ಸಿಕ್ಕಿದರೆ ಬಸ್ ನಿಲ್ದಾಣ ಕೆಲಸ ಮುಗಿಯುತ್ತದೆ. ಮರಳು ತೆಗೆಯಲು ಪರವಾನಗಿ ಸಿಗುತ್ತದೆ ಎಂದು ದಿನ ದೂಡಿದ್ದು ಬಿಟ್ಟರೆ ಮರಳು ಪರವಾನಗಿ ಸಿಗದೆ ಬಸ್ ನಿಲ್ದಾಣ ಕಾಮಗಾರಿ ಅಪೂರ್ಣವಾಗಿದೆ.

ಮರಳು ಸಿಗದೆ ಮಾರ್ಬಲ್ ಹಾಕುವ ಕೆಲಸ ಬಾಕಿಯಾಗಿದೆ. ಮರಳು ಸಮಸ್ಯೆಯಿಂದ ಹಕ್ಲಾಡಿ ಗ್ರಾಪಂ ಅಭಿವೃದ್ಧಿಯೇ ಕುಂಠಿತವಾಗುತ್ತಿದೆ. ಬಸ್ ನಿಲ್ದಾಣದ ಕೆಲಸ ಮಾತ್ರವಲ್ಲ, ಹಕ್ಲಾಡಿ ಗ್ರಾಮಕ್ಕೆ ಸರ್ವಋತು ರಸ್ತೆ ಮಂಜೂರಾಗಿದ್ದು, ಜೆಲ್ಲಿ ಬಂದು ಬಿದ್ದಿದ್ದರೂ ಮರಳು ಸಿಗದೆ ರಸ್ತೆ ಕೆಲಸ ನಿಂತಿದೆ. ಹಕ್ಲಾಡಿ ಗ್ರಾಮದಲ್ಲಿ ಆಶ್ರಯ ಮನೆ ಮಂಜೂರಾದವರಿಗೂ ಮರಳು ಸಿಗದೆ ಮನೆ ನಿರ್ಮಿಸಲಾಗುತ್ತಿಲ್ಲ. ಮನೆ ಜಿಪಿಎಸ್ ಮಾಡಿದ್ದು, ಕೆಲಸ ಮಾಡಲಾಗದೆ ಫಲಾನುಭವಿಗಳು ನಿರಾಶರಾಗಿದ್ದಾರೆ.
ಸುಭಾಷ್ ಶೆಟ್ಟಿ ಹೊಳ್ಮಗೆ ಉಪಾಧ್ಯಕ್ಷ, ಗ್ರಾಪಂ ಹಕ್ಲಾಡಿ