ಹಿರಿ ಜೀವಕ್ಕೆ ಬಸ್‌ನಿಲ್ದಾಣ ಆಶ್ರಯ

ಶ್ರೀಪತಿ ಹೆಗಡೆ ಹಕ್ಲಾಡಿ ಹೇರೆಂಜಾಲು
ಬೈಂದೂರು ತಾಲೂಕು ಹೇರೆಂಜಾಲು ಬಸ್ ಸ್ಟ್ಯಾಂಡ್‌ನಲ್ಲಿ ವೃದ್ಧ ನಾರಾಯಣ ಕಳೆದೆರಡು ವರ್ಷಗಳಿಂದ ವಾಸಿಸುತ್ತಿದ್ದಾರೆ. ಪರಿಸರದ ಯುವಕರು ಅತ್ತ-ಇತ್ತ ಹೋಗುವವರು ಮರುಕ ಪಟ್ಟು ಏನಾದರೂ ನೀಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಎರಡು ವರ್ಷದಿಂದ ಬಸ್ ಸ್ಟ್ಯಾಂಡ್ ವಾಸವಾದರೆ, ಅಲೆಮಾರಿ ಬದುಕಿಗೆ ಈಗ ಹತ್ತು ವರ್ಷ! ಆಧಾರ್ ಕಾರ್ಡ್, ಓಟರ್ ಐಡಿ, ಪಡಿತರ ಚೀಟಿ ಯಾವುದೂ ಇಲ್ಲ.
ಬೈಂದೂರು ತಾಲೂಕು ಕಾಲ್ತೋಡು ಗ್ರಾಮ ಯಡೇರಿ ನಾರಾಯಣ ಶೆಟ್ಟಿ ಹುಟ್ಟೂರು. ಬುದ್ಧಿ ಬರುವಷ್ಟರಲ್ಲಿ ತಂದೆ ತಾಯಿ ಕಳೆದುಕೊಂಡ ಅವರು, ಅಕ್ಕ ಹಾಗೂ ಅಣ್ಣನ ಜತೆ ಜೀವನ ನಡೆಸುತ್ತಿದ್ದರು. ಅವರಿಬ್ಬರೂ ತೀರಿಕೊಂಡ ನಂತರ ಹೊಟ್ಟೆಪಾಡಿಗಾಗಿ ಶಿರಸಿಗೆ ಹೋದರು. ಅಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಜಲಜಾ ಎಂಬುವರ ಜತೆ ಮದುವೆಯಾಗಿ ಮಾಡಿಕೊಂಡು ಮಕ್ಕಳು ಕೂಡ ಇದ್ದಾರೆ. ಈಗ ಹೆಂಡತಿ, ಮಕ್ಕಳು ಎಲ್ಲಿದ್ದಾರೆ ಗೊತ್ತಿಲ್ಲ ಎನ್ನುತ್ತಾರೆ ನಾರಾಯಣ.

ವೃದ್ಧಾಶ್ರಮದಲ್ಲಿ ಆಶ್ರಯ: ಹಿರಿಯ ನಾಗರಿಕ ಇಲಾಖೆ ಅಧಿಕಾರಿ ನಿರಂಜನ್ ಭಟ್ ಹೇರಂಜಾಲು ನಾರಾಯಣ ಇರುವ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭ ಅವರು ಅಲ್ಲಿರದಿದ್ದರಿಂದ ಹಿಂದಕ್ಕೆ ಹೋಗಿದ್ದಾರೆ. ಕುಂದಾಪುರದಲ್ಲಿ ವೃದ್ಧಾಶ್ರಮ ಸದ್ಯದಲ್ಲೇ ಆರಂಭವಾಗಲಿದ್ದು, ನಾರಾಯಣ ಅವರಿಗೆ ಅಲ್ಲಿ ಆಶ್ರಯ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಚಿಕಿತ್ಸೆ ಅವಶ್ಯವಿದ್ದರೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

ನನ್ನವರ‌್ಯಾರು ಈಗ ಉಳಿದಿಲ್ಲ. ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ಮಣ್ಣು ಕುಸಿದು ಮೃತಪಟ್ಟಿದ್ದಾರೆ. ಹೆಂಡತಿ ಮಕ್ಕಳು ಎಲ್ಲಿದ್ದಾರೋ ಗೊತ್ತಿಲ್ಲ. ಕೆಲಸ ಮಾಡಲು ಆಗುತ್ತಿಲ್ಲ. ಯಾರಾದರೂ ಕೊಟ್ಟ ಹಣದಲ್ಲಿ ಜೀವನ ನಡೆಯುತ್ತಿದ್ದು, ಕಳೆದ ಎರಡು ವರ್ಷದಿಂದ ಬಸ್ ಸ್ಟ್ಯಾಂಡ್‌ನಲ್ಲಿದ್ದೇನೆ.
ನಾರಾಯಣ, ಬಸ್ ಸ್ಟ್ಯಾಂಡ್‌ನಲ್ಲಿ ವಾಸಮಾಡುತ್ತಿರುವ ವೃದ್ಧ

ನಮ್ಮೂರಿನ ಬಸ್ ಸ್ಟ್ಯಾಂಡ್‌ನಲ್ಲಿ ಅಜ್ಜ ವಾಸಮಾಡುತ್ತ ಎರಡು ವರ್ಷ ಆಯಿತು. ಬಸ್‌ಸ್ಟ್ಯಾಂಡ್ ಪಕ್ಕದ ಕೊಳವೆ ಬಾವಿಯಲ್ಲಿ ನಿತ್ಯ ಸ್ನಾನ ಮಾಡುತ್ತಾರೆ. ಹಾಗೆ ಬಟ್ಟೆ ಬರೆ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಅವರ ಕಷ್ಟ ನೋಡಲಾಗದೆ ನಾವು ಅಷ್ಟು ಇಷ್ಟು ಕೊಡುತ್ತೇವೆ. ಅವರ ಹುಟ್ಟೂರು ಇದೇ ಆದರೂ ಸಂಬಂಧಿಕರು ಯಾರೂ ಇಲ್ಲ. ಹಿರಿಯ ಜೀವಿಗೆ ವೃದ್ಧಾಶ್ರಮವೋ ಅಥವಾ ಸಂಘ ಸಂಸ್ಥೆಗಳು ಬದುಕಿನ ಸಂಧ್ಯಾಕಾಲದಲ್ಲಿ ಆಶ್ರಯ ನೀಡಬೇಕು.
ಅಜ್ಜನಿಗೆ ಸಹಾಯ ಮಾಡುತ್ತಿರುವ ಯುವಕರು, ಹೇರಂಜಾಲು.