ಮಂಡ್ಯ: ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಬಸ್‌ಗಳಿಲ್ಲದ ಪರಿಣಾಮ ತಾಲೂಕಿನ ಬಸರಾಳು ಮಾರ್ಗದ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ವಿದ್ಯಾರ್ಥಿಗಳು ಮಾಡಿದ ಮನವಿಗೆ ಸ್ಪಂದಿಸಿರುವ ಶಾಸಕ ರವಿಕುಮಾರ್ ಗಣಿಗ, ತುರ್ತು ಕ್ರಮ ವಹಿಸುವಂತೆ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮದಲ್ಲಿ ಖುದ್ದು ಹಾಜರಿದ್ದು, ಬಸ್‌ಗಳ ಅಗತ್ಯ ಬಗ್ಗೆ ಮಾಹಿತಿ ಕಲೆಹಾಕಿದರು.
ಶಕ್ತಿ ಯೋಜನೆ ಜಾರಿಗೆ ಮುನ್ನ ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಸಂಚಾರ ನಡೆಯುತ್ತಿತ್ತು. ಜತೆಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿಯೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾಲ ಮುಂದೂಡುತ್ತಿದ್ದರು. ಆದರೀಗ ಶಕ್ತಿ ಯೋಜನೆ ಜಾರಿಯಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಸಮಸ್ಯೆ ಜಾಸ್ತಿಯಾಗಿದೆ. ನಾಗಮಂಗಲದಿಂದ ಬಸರಾಳು ಮಾರ್ಗವಾಗಿ ಬೇಬಿ, ಹನುಗನಹಳ್ಳಿ ಗೇಟ್, ದೊಡ್ಡಗರುಡನಹಳ್ಳಿ, ಗಂಟಗೌಡನಹಳ್ಳಿ, ಹಂಪಾಪುರ, ಬಿಳಿದೇಗಲು, ಹೊಸೂರು ಕಾಲನಿ, ಗೋಪಾಲಪುರ, ಚಿಕ್ಕಮಂಡ್ಯ ಮಂಡ್ಯಕ್ಕೆ ಸೆಟಲ್ ಬಸ್‌ನಲ್ಲಿ ಪ್ರಯಾಣ ಮಾಡುವುದೇ ದೊಡ್ಡ ಸವಾಲಾಗಿದೆ. ಈ ಮಾರ್ಗದಲ್ಲಿ ಮಂಡ್ಯಕ್ಕೆ ಬೆಳಗ್ಗೆ 7ಗಂಟೆ 10ರವರೆಗೆ ಹಾಗೂ ಸಂಜೆ 5 ಗಂಟೆ ಬಳಿಕ ಬಸರಾಳು ಕಡೆಗೆ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೀಗ ಈ ಅವಧಿಯಲ್ಲಿಯೇ ಬಸ್‌ನಲ್ಲಿ ಕಾಲಿಡಲು ಸ್ಥಳವಿಲ್ಲದಂತಾಗುತ್ತಿದೆ.
ಈ ಹಿಂದೆ ಸಂಚಾರ ಮಾಡುತ್ತಿರುವ ಖಾಸಗಿ ಬಸ್‌ಗಳು ಕೂಡ ಸ್ಥಗಿತಗೊಂಡಿವೆ. ಶಕ್ತಿ ಯೋಜನೆ ಜಾರಿಯಿಂದ ನಷ್ಟ ಅನುಭವಿಸಿದ ಮಾಲೀಕರು ಬಸ್ ಸಂಚಾರ ನಿಲ್ಲಿಸಿದ್ದಾರೆ. ಪರಿಣಾಮ ಸಾರ್ವಜನಿಕರು ವಿಧಿಯಿಲ್ಲದೇ ಸರ್ಕಾರಿ ಬಸ್‌ನತ್ತ ಮುಖ ಮಾಡಿದ್ದಾರೆ. ಇನ್ನು ಸಕಾಲಕ್ಕೆ ಬಸ್ ಸೌಲಭ್ಯವಿಲ್ಲದ ಪರಿಣಾಮ ಉದ್ಯೋಗಿಗಳು, ಕೂಲಿ ಕಾರ್ಮಿಕರು, ಆಸ್ಪತ್ರೆಗೆ ಹೋಗುವ ರೋಗಿಗಳು, ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಕೂಡ ಹೊರತಾಗಿಲ್ಲ.
ಬಸ್ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡಿದ್ದರು. ಅದರಂತೆ ತುರ್ತು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ರವಿಕುಮಾರ್ ಗಣಿಗ
ಶಾಸಕ