ಗಿರಿಗೆ ಮಿನಿ ಬಸ್ ನೀಡುವಂತೆ ಮನವಿ

ಚಿಕ್ಕಮಗಳೂರು: ಗಿರಿಶ್ರೇಣಿಯ ಪ್ರವಾಸಿ ತಾಣಗಳು ಹಾಗೂ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಸಂಸ್ಥೆಯ ಆರು ಮಿನಿ ಬಸ್​ಗಳನ್ನು ಒದಗಿಸುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಾರಿಗೆ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದೆ.

ಗಿರಿ ಮಾರ್ಗದ ಕಡಿದಾದ ತಿರುವುಗಳಲ್ಲಿ ದೊಡ್ಡ ಬಸ್​ಗಳು ಸಂಚರಿಸುವುದು ಅಸಾಧ್ಯ. ಹಾಗಾಗಿ ಮಿನಿ ಬಸ್​ಗಳನ್ನೇ ಒದಗಿಸಬೇಕೆಂಬುದು ಹಲವು ದಿನಗಳ ಬೇಡಿಕೆ. ಈ ವಿಚಾರ ಸಾರಿಗೆ ಪ್ರಾಧಿಕಾರದ ಸಭೆಯಲ್ಲೂ ಪ್ರಸ್ತಾಪವಾಗಿತ್ತು.

ಗಿರಿ ಮಾರ್ಗದಿಂದ ಪ್ರತಿದಿನ ಸಾಕಷ್ಟು ಜನ ಪ್ರಯಾಣಿಸುತ್ತಿದ್ದರೂ ಜಿಲ್ಲಾಡಳಿತ, ಸಾರಿಗೆ ಸಂಸ್ಥೆಯಾಗಲಿ ಗಮನಹರಿಸಿರಲಿಲ್ಲ. ಗ್ರಾಮಸ್ಥರಿಂದ ಬಸ್​ಗಾಗಿ ಬೇಡಿಕೆ ಇರುವುದರಿಂದ ಸಾರಿಗೆ ಪ್ರಾಧಿಕಾರವೇ ಖುದ್ದು ಈ ವಿಚಾರ ಕೈಗೆತ್ತಿಕೊಂಡಿದೆ.

ನ.13ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧಿಕಾರಿ ಮುರುಗೇಂದ್ರಪ್ಪ ಶಿರೋಡ್ಕರ್ ವಿಚಾರ ಪ್ರಸ್ತಾಪಿಸಿ ಗಿರಿಭಾಗಕ್ಕೆ ಹೊಸದಾಗಿ 33 ಆಸನ ಸಾಮರ್ಥ್ಯದ ಆರು ಮಿನಿ ಬಸ್​ಗಳನ್ನು ಒದಗಿಸಬೇಕು ಎಂದು ಸಾರಿಗೆ ನಿಗಮದ ಅಧಿಕಾರಿಗೆ ಸಲಹೆ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ.

ಒಂದೇ ಒಂದು ಖಾಸಗಿ ಬಸ್: ಈ ಮಾರ್ಗದಲ್ಲಿ ಒಂದೇ ಒಂದು ಖಾಸಗಿ ಬಸ್ ಸಂಚರಿಸುತ್ತಿದೆ. ಇದರಿಂದ ಗ್ರಾಮಸ್ಥರಿಗೆ, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಿಲ್ಲ. ಈ ಭಾಗದ ಗ್ರಾಮಗಳಿಂದ ನಗರಕ್ಕೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಶಾಲಾ ಶಿಕ್ಷಕರಿಗೆ ಸಕಾಲದಲ್ಲಿ ಬಸ್ ಇಲ್ಲದೆ ತೀವ್ರ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ಬಿಡಲೇಬೇಕು ಎಂಬ ಒತ್ತಾಯ ಮೊದಲಿಂದಲೂ ಇದೆ. ಈಗ ಸಂಚರಿಸುತ್ತಿರುವ ಖಾಸಗಿ ಬಸ್ ಸಂಜೆ 7 ಗಂಟೆಗೆ ಕೈಮರಕ್ಕೆ ಬಂದು ಅಲ್ಲಿಂದ ಗಿರಿ ಭಾಗದ ಗ್ರಾಮಗಳಿಗೆ ತೆರಳುತ್ತದೆ. ಮಧ್ಯಾಹ್ನ 4.30ಕ್ಕೆ ಶಾಲೆಗಳು ಬಿಡುವುದರಿಂದ 7 ಗಂಟೆವರೆಗೆ ಕೈಮರ ಗೇಟ್​ನಲ್ಲೇ ವಿದ್ಯಾರ್ಥಿಗಳು ಕಾಯಬೇಕಾಗಿದೆ. ಈ ಬಸ್ ಅವಲಂಬಿಸಿ ಅತ್ತಿಗುಂಡಿ ಮತ್ತು ಮಹಲ್​ನಂತಹ ಗ್ರಾಮಗಳಿಗೆ ತೆರಳುವ ವೇಳೆಗೆ ರಾತ್ರಿ 9 ಗಂಟೆ ಆಗಿರುತ್ತದೆ. ಬೆಳಗ್ಗೆ 7 ಗಂಟೆಗೆ ಮಹಲ್​ನಿಂದ ಹೊರಡುವ ಅದೇ ಬಸ್​ನಲ್ಲಿ ಶಾಲೆಗೆ ಬರಬೇಕಾದ್ದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಗಿರಿ ಭಾಗದ ಗ್ರಾಮಗಳ ಶಾಲಾ ಶಿಕ್ಷಕರು, ಅರಣ್ಯ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆ ಸರ್ಕಾರಿ ಸಿಬ್ಬಂದಿ ನಗರದಿಂದಲೇ ಓಡಾಡಬೇಕಿದೆ. ಅವರಿಗೂ ಸಕಾಲದಲ್ಲಿ ಬಸ್ ಇಲ್ಲದೆ ತೊಂದರೆಯಾಗುತ್ತಿದೆ. ಶಿಕ್ಷಕರಂತೂ ಲಾರಿಗಳು, ಆ ಮಾರ್ಗದಲ್ಲಿ ಸಂಚರಿಸುವ ಬೈಕ್​ಗಳನ್ನು ಹತ್ತಿ ಶಾಲೆಗೆ ತೆರಳುವುದು ಇಲ್ಲಿ ಸಾಮಾನ್ಯ.

ಹಿಂದೆ ಜನವಸತಿ ಪ್ರದೇಶ ಹಾಗೂ ಜನಸಂಖ್ಯೆ ಕಡಿಮೆ ಇದ್ದಾಗ ಖಾಸಗಿ ಬಸ್​ಗಳ ಸಂಖ್ಯೆ ಹೆಚ್ಚೇ ಇತ್ತು. ಈಗಿರುವ ಒಂದು ಖಾಸಗಿ ಬಸ್ ಕೂಡ ಸಮಯಕ್ಕೆ ಬರುವುದಿಲ್ಲ. ಬಸ್ ಮಾಲೀಕರನ್ನು ಪ್ರಶ್ನಿಸಿದರೆ ಚಾಲಕರಿಲ್ಲ. ಕ್ಲೀನರ್ ಇಲ್ಲ. ಈ ಮಾರ್ಗದಲ್ಲಿ ಸಿಗುವ ಆದಾಯ ಡೀಸೆಲ್​ಗೆ ಸಾಕಾಗುವುದಿಲ್ಲ ಎನ್ನುತ್ತಾರೆ.

ಉದ್ದ ಚಾಸಿ ಬಸ್ ನಿಷೇಧ: ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಗಿರಿ ಭಾಗದಲ್ಲಿ ಆಗಾಗ್ಗೆ ವಾಹನ ದಟ್ಟಣೆ ಎದುರಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಉದ್ದ ಚಾಸಿಯ ವಾಹನಗಳ ಸಂಚಾರ ನಿಷೇಧಿಸಿದೆ. ಇದರಿಂದ ಕೇರಳ, ಮಹಾರಾಷ್ಟ್ರ ಇನ್ನಿತರೆ ಭಾಗಗಳಿಂದ ಬರುವ ಪ್ರವಾಸಿಗರು ಕೈಮರದಲ್ಲಿ ಬಸ್ ನಿಲ್ಲಿಸಿ ದುಬಾರಿ ಹಣ ನೀಡಿ ಗಿರಿಗೆ ತೆರಳುವ ಅನಿವಾರ್ಯತೆ ತಲೆದೋರಿದೆ. ಕೆಎಸ್​ಆರ್​ಟಿಸಿಯಿಂದ ಮಿನಿಬಸ್​ಗಳನ್ನು ಓಡಿಸಿದರೆ ಮಾತ್ರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಗಿರಿಶ್ರೇಣಿಯ ರಸ್ತೆಗಳು ಕಿರಿದಾಗಿದ್ದು, ಕೆಲವೆಡೆ ದುರ್ಗಮ ತಿರುವುಗಳನ್ನು ಹೊಂದಿರುವುದರಿಂದ ಉದ್ದ ಚಾಸಿಯ ಬಸ್​ಗಳು ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ. ಹೀಗಾಗಿ ಮಿನಿ ಬಸ್​ಗಳನ್ನು ಒದಗಿಸಿದಲ್ಲಿ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಲು ಸಾಧ್ಯ.

| ಮುರುಗೇಂದ್ರಪ್ಪ ಶಿರೋಡ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ