ಬಸ್​ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ: ಡಿಸಿ ತಮ್ಮಣ್ಣ

ಮದ್ದೂರು: ದಿನೇ ದಿನೇ ಪೆಟ್ರೋಲ್​ ಹಾಗೂ ಡೀಸೆಲ್ ದರ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಸ್​ ಟಿಕೆಟ್​ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಶೇ. 18ರಷ್ಟು ದರ ಏರಿಕೆ ಮಾಡಬೇಕು ಎಂದು ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು . ಪ್ರತಿ ದಿನ ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗುತ್ತಿದೆ. ಇದರಿಂದಾಗಿ ಕಳೆದ 3 ತಿಂಗಳಲ್ಲಿ ಸಾರಿಗೆ ಸಂಸ್ಥೆಗಳಿಗೆ ಸಾಕಷ್ಟು ನಷ್ಟವುಂಟಾಗಿದೆ. ಹಾಗಾಗಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ದರ ಏರಿಕೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು, ಇದೇ ತಿಂಗಳ 16ರ ನಂತರ ಹೊಸ ದರ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.

ನಾಲ್ಕು ವಿಭಾಗಗಳಿಂದ ಸುಮಾರು 25 ಸಾವಿರ ಬಸ್​ಗಳಿವೆ. ಭಾರತ್​ ಬಂದ್​ ಹಿನ್ನೆಲೆಯಲ್ಲಿ ಎಲ್ಲಾ ಬಸ್​ಗಳು ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಟಿಕೆಟ್​ ರೂಪದಲ್ಲಿ ಬರುತ್ತಿದ್ದ 15 ರಿಂದ 16 ಕೋಟಿ ರೂ. ನಷ್ಟುವುಂಟಾಗಿದೆ. ಒಟ್ಟಾರೆಯಾಗಿ ಸಾರಿಗೆ ಸಂಸ್ಥೆಯ ಬಸ್​ಗಳು ಸಂಚಾರ ಮಾಡದ ಕಾರಣ ಸಾರ್ವಜನಿಕರಿಗೆ ಮತ್ತು ಸಾರಿಗೆ ಸಂಸ್ಥೆಗಳಿಗೆ ಸುಮಾರು 100 ಕೋಟಿ ರೂ. ನಷ್ಟವುಂಟಾಗಿದೆ ಎಂದು ತಮ್ಮಣ್ಣ ತಿಳಿಸಿದರು.