ಮುದ್ದೇಬಿಹಾಳ : ಏಕಾಏಕಿ ಅಡ್ಡಬಂದ ವಯೊವೃದ್ಧೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆಯ ಬಸ್ಸೊಂದು ರಸ್ತೆ ಪಕ್ಕದ ತಗ್ಗಿಗೆ ಉರುಳಿದ್ದು ಚಾಲಕ, ನಿರ್ವಾಹಕ ಸೇರಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಗೆದ್ದಲಮರಿ ಗ್ರಾಮದ ಹತ್ತಿರ ಆಲಮಟ್ಟಿ ರಸ್ತೆಯಲ್ಲಿ ನಡೆದಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ಸಾರಿಗೆ ಘಟಕಕ್ಕೆ ಸೇರಿದ ಬಾಗಲಕೋಟೆ- ಮುದ್ದೇಬಿಹಾಳ ಮಾರ್ಗದ ಬಸ್ ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಹೋಗುವಾಗ ಈ ಘಟನೆ ನಡೆದಿದೆ.
ಬಸ್ಸಿನಲ್ಲಿ ಐವರು ಪ್ರಯಾಣಿಕರಿದ್ದರು. ಗಾಯಗೊಂಡ ಎಲ್ಲರಿಗೂ ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡಿರುವ ಈರಮ್ಮ ಕಂಬಾರ, ಮಗಳು ಸಂಗಿತಾ ಕಂಬಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಚಾಲಕ ಬಸವರಾಜ ಗೋಪಾಲ ರಾಠೋಡ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ್ ತಿಪ್ಪರಡ್ಡಿ, ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಚ್. ಮದಭಾವಿ ಧಾವಿಸಿ ಕ್ರೇನ್ ಸಹಾಯದಿಂದ ಬಸ್ ಮೇಲೆತ್ತಿ ಸಂಚಾರ ಸುಗಮಗೊಳಿಸಲು ನೆರವಾದರು. ಚಾಲಕನ ಸಮಯಪ್ರಜ್ಞೆಯಿಂದ ವಯೋವೃದ್ಧ್ದೆಯ ಪ್ರಾಣ ಉಳಿಯಿತಾದರೂ ಬಸ್‌ನಲ್ಲಿರುವ ಪ್ರಯಾಣಿಕರು ಗಾಯಗೊಂಡದ್ದು ಚರ್ಚೆಗೆಡೆ ಮಾಡಿಕೊಟ್ಟಿತು.