ಯಳಂದೂರು: ಬಹಿರ್ದೆಸೆಗೆ ತೆರಳಿದ್ದ ಬಸ್ ಚಾಲಕ ಕೆರೆಯಲ್ಲಿ ಮುಳುಗಿ ಶುಕ್ರವಾರ ಮೃತಪಟ್ಟಿದ್ದಾರೆ.

ತಾಲೂಕಿನ ಯರಗಂಬಳ್ಳಿ ಗ್ರಾಮದ ನಿವಾಸಿ ವೈ.ಎನ್.ನವೀನ್‌ಕುಮಾರ್ (33) ಮೃತರು. ಈತ ಕೆಎಸ್‌ಆರ್‌ಟಿಸಿ ಮಳವಳ್ಳಿ ಡಿಪೋ ಗಾಡಿಯಲ್ಲಿ ಡ್ರೈವರ್ ಕಮ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ, ಪಾಲಕರು ಹಾಗೂ ಸಹೋದರ ಇದ್ದಾರೆ.
ನವೀನ್‌ಕುಮಾರ್ ಮನೆಯಿಂದ ನಾಪತ್ತೆಯಾಗಿದ್ದಾರೆಂದು ಇಲ್ಲಿನ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಲಾಗಿತ್ತು. ಶುಕ್ರವಾರ ತಾಲೂಕಿನ ಹೊಸಹಳ್ಳಿ ಕೆರೆಯಲ್ಲಿ ಶವ ತೇಲುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಎತ್ತಿ ಪರಿಶೀಲನೆ ನಡೆಸಿದಾಗ ನವೀನ್‌ಕುಮಾರ್ ಎನ್ನುವುದು ಗೊತ್ತಾಯಿತು. ಶವವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.