ಇಂಧನ ಬೆಲೆ ತಗ್ಗಿದರೂ ಟಿಕೆಟ್ ದರ ಹೆಚ್ಚಳ?

ಬೆಂಗಳೂರು: ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದ ಇಂಧನ ದರ ಗಣನೀಯವಾಗಿ ತಗ್ಗಿದ್ದರೂ ಸಾರಿಗೆ ಇಲಾಖೆ ಮಾತ್ರ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.

ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಎರಡೂ ಸೇರಿಯೇ 687 ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಬಸ್ ಪ್ರಯಾಣದರ ಹೆಚ್ಚಳ ಅನಿವಾರ್ಯವಾಗಿದೆ. ಬುಧವಾರ ನಡೆದ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಶೇ.18 ಹೆಚ್ಚಳ ಮಾಡಲು ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಮನವಿ ಮಾಡಲಾಗಿದ್ದು, ಎಷ್ಟು ಹೆಚ್ಚಳ ಮಾಡಬೇಕೆಂಬುದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ಸಾರಿಗೆ ಇಲಾಖೆ ಪ್ರಸ್ತಾವನೆ ಸಮಯ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಶೇ.18 ದರ ಹೆಚ್ಚಳ ಪ್ರಸ್ತಾಪವನ್ನು 2018ರ ಸೆಪ್ಟೆಂಬರ್​ನಲ್ಲಿ ಸಾರಿಗೆ ಇಲಾಖೆ ಸಲ್ಲಿಸಿತ್ತು. ಆಗ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಡೀಸೆಲ್​ಗೆ 76 ರೂ. ಇತ್ತು. ಬೃಹತ್ ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಸಾರಿಗೆ ಇಲಾಖೆಗೆ ರಿಯಾಯಿತಿ ದರದಲ್ಲಿ ಅಂದರೆ ಪ್ರತಿ ಲೀಟರ್​ಗೆ 68-70 ರೂ. ತಗಲುತ್ತಿತ್ತು. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಡೀಸೆಲ್​ಗೆ 64.18 ರೂ. ಇದೆ. ಸಾರಿಗೆ ಇಲಾಖೆಗೆ ಸರಿಸುಮಾರು 59-60 ರೂ.ಗೆ ಸಿಗುತ್ತದೆ. ಹೀಗಿದ್ದೂ ದರ ಏರಿಕೆ ಪ್ರಸ್ತಾವನೆಗೆ ಸಾರಿಗೆ ಇಲಾಖೆ ಮುಂದಾಗಿದೆ.

ಸಾರಿಗೆ ಇಲಾಖೆಯ ಎಲ್ಲ ನಿಗಮಗಳೂ ಸೇರಿ ಮಾಸಿಕ 7.41 ಕೋಟಿ ರೂ. ನಷ್ಟವಾಗುತ್ತಿದೆ ಎಂಬುದು ಆರ್ಥಿಕ ಇಲಾಖೆ ಲೆಕ್ಕ. ಈ ಪೈಕಿ ಸಿಂಹ ಪಾಲು ಕೆಎಸ್​ಆರ್​ಟಿಸಿಯದ್ದೇ ಇದೆ (2.5 ಕೋಟಿ ರೂ.). ಎಲ್ಲ ನಿಗಮ ಸೇರಿ ಸಾರಿಗೆ ಇಲಾಖೆ ಪ್ರತಿದಿನ 1,539 ಕಿಲೋ ಲೀಟರ್ ಡೀಸೆಲ್ ಬಳಸುತ್ತದೆ.

ಚುನಾವಣೆ ಕಾರಣಕ್ಕೆ ರದ್ದು: ಈ ಹಿಂದೆ ನೀಡಿದ್ದ ಪ್ರಸ್ತಾವನೆ ಯನ್ನು ಸಾರಿಗೆ ಇಲಾಖೆ ಒಪ್ಪಿ ಆದೇಶವನ್ನೂ ಮಾಡಿತ್ತು. ಸೆ.17ಕ್ಕೆ ಬಸ್ ಟಿಕೆಟ್ ದರಗಳನ್ನು ಶೇ.18 ಹೆಚ್ಚಿಸಲಾಗಿತ್ತು. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ದರ ವಿಪರೀತ ಹೆಚ್ಚಳವಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದ ತೆರಿಗೆ ಇಳಿಸುವ ಒತ್ತಡ ಕೇಳಿಬಂದಿತ್ತು. ಪೆಟ್ರೋಲ್ ಪ್ರತಿ ಲೀಟರ್​ಗೆ 84.8 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್​ಗೆ 76.21 ರೂ. ಇದ್ದದ್ದರಲ್ಲಿ ತಲಾ 2 ರೂ. ತೆರಿಗೆ ಕಡಿತ ಮಾಡಿ ಸಿಎಂ ಕುಮಾರಸ್ವಾಮಿ ಆದೇಶಿಸಿದ್ದರು. ಒಂದೇ ದಿನ ತೆರಿಗೆ ಕಡಿತ ಹಾಗೂ ಬಸ್ ಟಿಕೆಟ್ ದರ ಹೆಚ್ಚಳ ಆದೇಶ ಹೊರಟು ಸರ್ಕಾರಕ್ಕೆ ಮುಜುಗರವಾಗಿತ್ತು. ಅಲ್ಲದೆ ಐದು ಕ್ಷೇತ್ರಗಳ ಉಪಚುನಾವಣೆಯೂ ಇದ್ದದ್ದರಿಂದ ಕೆಲವೇ ಗಂಟೆಯ ಅವಧಿಯಲ್ಲಿ ದರ ಹೆಚ್ಚಳದ ಪ್ರಸ್ತಾಪಕ್ಕೆ ಸಿಎಂ ತಡೆಯೊಡ್ಡಿದ್ದರು.

ಚೆಕ್​ಪೋಸ್ಟ್​ಗಳಲ್ಲಿ ಸಿಸಿ ಕ್ಯಾಮರಾ

ಚೆಕ್​ಪೋಸ್ಟ್​ಗಳಲ್ಲಿ ವಸೂಲಿ ಮಾಡುತ್ತಿರುವುದನ್ನು ತಡೆಗಟ್ಟಲು ಸಿಸಿ ಕ್ಯಾಮರಾ ಸೇರಿ ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಮ್ಮಣ್ಣ ತಿಳಿಸಿದ್ದಾರೆ. ಚೆಕ್​ಪೋಸ್ಟ್​ಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ವೆಹಿಕಲ್ ಟ್ರಾ್ಯಕಿಂಗ್ ಸಿಸ್ಟಂ ಅಳವಡಿಸಲಾಗುತ್ತದೆ. ಪ್ರತಿ ವಹಿವಾಟೂ ದಾಖಲಾಗುತ್ತದೆ. ಹಂತಹಂತವಾಗಿ ಎಲ್ಲವನ್ನೂ ಸರಿಪಡಿಸಲಾಗುತ್ತದೆ ಎಂದರು. ರ್ಪಾಂಗ್ ವ್ಯವಸ್ಥೆ ಕುರಿತು ಪ್ರತಿಕ್ರಿಯೆ ನೀಡಿ, ರ್ಪಾಂಗ್ ಕುರಿತು ಮೊದಲಿಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ಒಂದು ವರ್ಷದ ಬಳಿಕ ಹಂತಹಂತವಾಗಿ ಕಾನೂನು ಜಾರಿ ಮಾಡಲಾಗುತ್ತದೆ. ಆನಂತರದಲ್ಲಿ, ರ್ಪಾಂಗ್ ವ್ಯವಸ್ಥೆ ಇದ್ದವರಿಗೆ ಮಾತ್ರ ಕಾರು ಖರೀದಿಗೆ ಪರವಾನಗಿ ನೀಡಲಾಗುತ್ತದೆ ಎಂದರು.

ಕೆಎಸ್​ಆರ್​ಟಿಸಿಗೆ 3 ಸಾವಿರ, ಈಶಾನ್ಯ ಸಾರಿಗೆ ಸಂಸ್ಥೆಗೆ 350 ಬಸ್ ಖರೀದಿ ಮಾಡಲಾಗುತ್ತದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಎರಡೂವರೆ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಒಬ್ಬ ಆರ್​ಟಿಒ ಎರಡರಿಂದ ಮೂರು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 271 ಆರ್​ಟಿಒ ಹುದ್ದೆಗಳನ್ನು ಶೀಘ್ರದಲ್ಲೆ ಭರ್ತಿ ಮಾಡಲಾಗುತ್ತದೆ.

| ಡಿ.ಸಿ. ತಮ್ಮಣ್ಣ ಸಾರಿಗೆ ಸಚಿವ