ಬಸ್ ಬೇ ನಿರ್ವಣಕ್ಕೆ ಸ್ಥಳ ಗುರುತಿಸಿ

ಬಾಗಲಕೋಟೆ: ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ಹಾಗೂ ಹುಬ್ಬಳ್ಳಿ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 218ನ್ನು ಸಂಧಿಸುವ ಗದ್ದನಕೇರಿ ಕ್ರಾಸ್​ನಲ್ಲಿ ನಾಲ್ಕು ಕಡೆ ಬಸ್ ಬೇ ನಿರ್ವಣಕ್ಕೆ ಸೂಕ್ತ ಸ್ಥಳ ಗುರುತಿಸುವ ಕಾರ್ಯ ಶೀಘ್ರ ಮಾಡುವಂತೆ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೀಘ್ರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಜಾಗ ಗುರುತಿಸುವ ಕೆಲಸವಾಗಬೇಕು. ಈ ಬಗ್ಗೆ ಅ.27 ರೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ದಿನನಿತ್ಯ ಗದ್ದನಕೇರಿ ಕ್ರಾಸ್​ನಲ್ಲಿ ಸಾವಿರಾರು ಪ್ರಯಾಣಿಕರು ಪ್ರಮುಖ ನಗರಗಳಿಗೆ ತೆರಳುತ್ತಿದ್ದು, ಇಲ್ಲಿ ಸೂಕ್ತ ಬಸ್ ಬೇ ಇಲ್ಲದ ಕಾರಣ ಪ್ರಯಾಣಿಕರು ರಸ್ತೆ ಮೇಲೆ ನಿಂತು ಬಸ್​ಗಳಿಗಾಗಿ ಕಾಯುವ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದ ಪ್ರಯಾಣಿ ಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲಿ ಏನು ಆಗಬೇಕೆಂಬ ಕುರಿತು ಕ್ರಿಯಾಯೋಜನೆ ಸಹ ರೂಪಿಸಬೇಕು. ನಂತರ ಬಸ್ ಬೇ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.

ಸಿಕ್ಕೇರಿ ಕ್ರಾಸ್​ನಲ್ಲಿ ಎರಡು ಕಡೆ ಬಸ್ ನಿಲುಗಡೆಗೆ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಎಇಇಗೆ ಡಿಸಿ ಸೂಚಿಸಿದರು. ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳಲ್ಲಿ ಸೂಕ್ತ ಟ್ರಾಫಿಕ್ ಸ್ಥಳ ಗುರುತಿಸಿ ನೀಲಿನಕ್ಷೆ ತಯಾರಿಸಿ, ಪರಿಶೀಲಿಸಿ ನಂತರ ಸಲ್ಲಿಸುವಂತೆ ಹೇಳಿದರು. ಬ್ಲಾಕ್ ಸ್ಪಾಟ್​ಗಳನ್ನು ಪಟ್ಟಿ ಮಾಡಿಕೊಂಡು ಆ ಸ್ಥಳದಲ್ಲಿ ಅಪಘಾತ ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದರು.

ಪ್ರತಿ ತಾಲೂಕಿನಲ್ಲಿ ಟ್ರಾಫಿಕ್ ಕಂಟ್ರೋಲ್​ಗೆ ಆಯಾ ತಾಲೂಕು ಕೇಂದ್ರದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಅಲ್ಲಿನ ಪರಿಸ್ಥಿತಿ ತಿಳಿದು ಕ್ರಿಯಾಯೋಜನೆ ರೂಪಿಸಬೇಕು. ಈ ಹಿಂದೆ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಒಂದೇ ಕುಟುಂಬದ ಸದಸ್ಯರು ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದು, ಅಲ್ಲಿ ಮತ್ತೆ ಅಪಘಾತ ಸಂಭವಿಸದಂತೆ ಸದ್ಯಕ್ಕೆ ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ರಸ್ತೆ ಸುರಕ್ಷತಾ ಕುರಿತು ಸಭೆ ನಡೆಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಪ್ರಭು ಜಿಡಗಿ, ಬಿಟಿಡಿಎ ಸಹಾಯಕ ಅಭಿಯಂತ ಬಿ.ಎಚ್. ಪೂಜಾರ, ವೈ.ಎಚ್. ಇದ್ದಲಗಿ, ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ, ಜಮಖಂಡಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರನಾಥ ಫಿರಂಗಿ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.