More

    ನಡುರಾತ್ರಿ ಕೆಟ್ಟು ನಿಂತ ಬಸ್, 4 ತಾಸು ಪ್ರಯಾಣಿಕರ ಪರದಾಟ

    ಕನಕಗಿರಿ: ಚಿತ್ತಾಪುರದಿಂದ ದಾವಣಗೆರೆಗೆ ತೆರಳುವ ಕೆಕೆಆರ್‌ಟಿಸಿ ಬಸ್ಸೊಂದು ಪಟ್ಟಣದಲ್ಲಿ ಮಧ್ಯರಾತ್ರಿ ದುರಸ್ತಿಗೊಂಡು 4 ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದ ಘಟನೆ ಶನಿವಾರ ನಡೆದಿದೆ.

    ಬೆಳಗ್ಗೆ 6.30ರವರೆಗೂ ಬಸ್ ವ್ಯವಸ್ಥೆಯಾಗಿರಲಿಲ್ಲ

    ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಪ್ರತಿನಿತ್ಯ ಪಟ್ಟಣದ ಮಾರ್ಗವಾಗಿ ಸಂಚರಿಸುವ ಚಿತ್ತಾಪುರ-ದಾವಣಗೆರೆ ಬಸ್ ಎಂದಿನಂತೆ ಶುಕ್ರವಾರ ಸಂಜೆ 7.30ಕ್ಕೆ 70ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಚಿತ್ತಾಪುರದಿಂದ ಹೊರಟಿದೆ. ಪಟ್ಟಣದ ಬಸ್ ನಿಲ್ದಾಣ ಇನ್ನೂ 100 ಮೀ. ದೂರವಿರುವಾಗಲೇ ಶನಿವಾರ ಬೆಳಗ್ಗೆ 2.30ಕ್ಕೆ ಕತ್ತಲಿರುವ ಕಡೆಗೆ ಬಸ್ ಕೆಟ್ಟು ನಿಂತಿದೆ. ಇದರಿಂದ ಪ್ರಯಾಣಿಕರೇ ಬೆಳಕಿದ್ದ ಪಟ್ಟಣದ ವಾಲ್ಮೀಕಿ ವೃತ್ತದವರೆಗೂ ಬಸ್ ತಳ್ಳಿಕೊಂಡು ಬಂದು ನಿಲ್ಲಿಸಿದ್ದಾರೆ. ಹಿಂದೆಯೂ ಯಾವ ಬಸ್ ಬಾರದಿದ್ದರಿಂದ ಎಚ್ಚೆತ್ತ ಬಸ್ ಚಾಲಕ ಗಂಗಾವತಿ ಡಿಪೋಕ್ಕೆ ಬೇರೊಂದು ಬಸ್ ತರಲು ಲಾರಿಯೊಂದರಲ್ಲಿ ತೆರಳಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಸಂಪರ್ಕ ಕೊರತೆಯಿಂದಾಗಿ ಬೆಳಗ್ಗೆ 6.30ರವರೆಗೂ ಬಸ್ ವ್ಯವಸ್ಥೆಯಾಗಿರಲಿಲ್ಲ.

    ಇದನ್ನು ಓದಿ; ಬಸ್​​ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಒಪ್ಪದ ಪತಿ; ಉಚಿತ ಪ್ರಯಾಣ ಗ್ಯಾರಂಟಿ ಸೃಷ್ಟಿಸಿದ ಅಧ್ವಾನ

    ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಬಸ್ಸಿಗೆ ಕಲ್ಲೆಸೆಯುತ್ತೇವೆ ಎಚ್ಚರಿಕೆ

    ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ ಬಸ್‌ನಲ್ಲಿ, ರಿಸರ್ವೇಷನ್ ಸಹಿತ ಸಾಮಾನ್ಯ ಪ್ರಯಾಣಿಕರಿದ್ದು, ಮದುವೆ, ವೈಯಕ್ತಿಕ ಕೆಲಸ, ವೀಕೆಂಡ್‌ಗಾಗಿ ಊರಿಗೆ ತೆರಳುವವರಿದ್ದರು. ಮಹಿಳೆಯರು, ಮಕ್ಕಳು ಬಸ್ಸಿನಲ್ಲಿದ್ದು 4 ತಾಸು ಪರದಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಚಿತ್ತಾಪುರ ಡಿಪೋದ ವ್ಯವಸ್ಥಾಪಕಗೆ ಹಲವು ಬಾರಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದ ಪ್ರಯಾಣಿಕರು, ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಬಸ್ಸಿಗೆ ಕಲ್ಲೆಸೆಯುತ್ತೇವೆ ಎಂದು ಹರಿಹಾಯ್ದರು.

    ಕಂಟ್ರೋಲ್ ರೂಂಗೂ ಕರೆ ಮಾಡಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮೌಖಿಕ ದೂರು ಸಲ್ಲಿಸಿದರು.
    ಬೆಳಗ್ಗೆ 9 ಗಂಟೆಗೆ ದಾವಣಗೆರೆ ತಲುಪಬೇಕಾದ ಬಸ್ಸು 6.30 ಆದರೂ ಇಲ್ಲಿಯೇ ಇದೆ. ಬಸ್ಸಿನಲ್ಲಿ ಕೂರಲು ಜಾಗವಿಲ್ಲದೆ ಕೆಳಗೆ ಕೂತು ಬಂದಿದ್ದೇವೆ. ಮಕ್ಕಳೊಂದಿಗೆ ಬಂದವರ ಸ್ಥಿತಿ ಹೇಳತೀರದು. ಸುಸ್ಥಿತಿಯಲ್ಲಿರಬೇಕಾದ ಬಸ್ ಕಳುಹಿಸಬೇಕಿರುವುದನ್ನು ಬಿಟ್ಟು, ರಿಪೇರಿ ಇರುವ ಬಸ್ ಕಳುಹಿಸಿದ್ದಾರೆ. ಕೆಟ್ಟ ಮೇಲೆ ಕರೆ ಮಾಡಿದರೂ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಪ್ರಯಾಣಿಕರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts