More

    30ರಿಂದ ಕುಮಟಾದಲ್ಲಿ ಅಡಕೆ ವಹಿವಾಟು ಸ್ಥಗಿತ

    ಕುಮಟಾ: ಉತ್ತರ ಭಾರತದ ಎಲ್ಲ ಪ್ರಮುಖ ಅಡಕೆ ಮಾರಾಟ ಮಾಡುವ ರಾಜ್ಯಗಳಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಅಲ್ಲಿ ಲಾಕ್​ಡೌನ್ ಘೊಷಿಸಲಾಗಿದೆ. ಹೀಗಾಗಿ ಕುಮಟಾದ ರೈತರು ಅಲ್ಲಿನ ವ್ಯಾಪಾರಸ್ಥರೊಂದಿಗೆ ಅಡಕೆ ವಹಿವಾಟು ನಡೆಸಲು ಸಾಧ್ಯವಾಗದ ಕಾರಣ ಹಾಗೂ ಅಡಕೆ ದರದ ಸ್ಥಿರತೆಯ ದೃಷ್ಟಿಯಿಂದ ಏಪ್ರಿಲ್ 30 ರಿಂದ ಮೇ 7ರವರೆಗೆ ಎಪಿಎಂಸಿ ಪ್ರಾಂಗಣದಲ್ಲಿ
    ಅಡಕೆ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ ತಿಳಿಸಿದರು.
    ಎಪಿಎಂಸಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಸ್ಥಿತಿ ಅನುಕೂಲಕರವಾದರೆ ಎಪಿಎಂಸಿಯಲ್ಲಿ ಮೇ 10 ರಿಂದ ಅಡಕೆ ವ್ಯಾಪಾರ ಮರು ಪ್ರಾರಂಭಿಸಿ ಅಡಕೆ ದರದಲ್ಲಿ ಸ್ಥಿರತೆ ಕಂಡುಕೊಳ್ಳಲಾಗುತ್ತದೆ’ ಎಂದರು.
    ಎಪಿಎಂಸಿ ವರ್ತಕ ಪ್ರತಿನಿಧಿ ಅರವಿಂದ ಕೆ. ಪೈ ಮಾತನಾಡಿ, ‘ಕಾನ್ಪುರ, ಲಕ್ನೋ, ಅಲಹಾಬಾದ್ ಸೇರಿ ಉತ್ತರ ಭಾರತದ ಇತರ ನಗರಗಳಲ್ಲಿ ಕರೊನಾ ಲಾಕ್​ಡೌನ್ ಹೇರಲಾಗಿದ್ದರಿಂದ ಇಲ್ಲಿಂದ ಅಲ್ಲಿಗೆ ಅಡಕೆ ಸಾಗಾಟ ನಿಂತಿದೆ. ಇದರ ಪರಿಣಾಮವಾಗಿ ಈಗಾಗಲೇ ಅಡಕೆಗೆ ಕೆಜಿಗೆ 50 ರೂಪಾಯಿ ದರ ಕಡಿಮೆಯಾಗಿದೆ. ಆದರೆ, ರೈತರ ಬೆಳೆಸಾಲ ತುಂಬಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಎಪಿಎಂಸಿಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವುದಕ್ಕೆ ಏ. 30 ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಭಾರತದಲ್ಲಿ ಲಾಕ್​ಡೌನ್ ತೆರವಾದ ತಕ್ಷಣ ಅಡಕೆಗೆ ದರ ಏರುವುದು ಖಚಿತ. ಪೇಟೆ ಕಾರ್ಯಕರ್ತರು, ವರ್ತಕರ ಸಂಘ, ದಲಾಲರ ಸಂಘ, ಹಮಾಲರ ಸಂಘ ಹಾಗೂ ಕ್ಯಾಂಪ್ಕೋ ಸಂಯುಕ್ತವಾಗಿ ಈ ನಿರ್ಣಯ ಕೈಗೊಂಡಿದ್ದು ಎಲ್ಲ ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
    ಉಪಾಧ್ಯಕ್ಷ ಶಾಂತರಾಜ ಜೈನ್, ದಲಾಲರ ಪ್ರತಿನಿಧಿ ಉದಯ ಹೆಗಡೆ, ಕ್ಯಾಂಪ್ಕೋ ವ್ಯವಸ್ಥಾಪಕ ಅಮರೇಶ ಬಿ., ಹಮಾಲರ ಪ್ರತಿನಿಧಿ ಉದಯ ನಾಯ್ಕ, ಎಪಿಎಂಸಿ ಕಾರ್ಯದರ್ಶಿ ಎಂ.ಸಿ. ಪಡಗಾನೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts