ಲಂಡನ್: ರೋಹಿತ್ ಶರ್ಮ ನಿವೃತ್ತಿಯ ನಂತರದಲ್ಲಿ ಜಸ್ಪ್ರೀತ್ ಬುಮ್ರಾಗೆ ಫಿಟ್ನೆಸ್ ಕಾರಣದಿಂದಾಗಿ ಭಾರತ ಟೆಸ್ಟ್ ತಂಡದ ಸಾರಥ್ಯ ನೀಡುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಶುಭಮಾನ್ ಗಿಲ್ಗೆ ಟೆಸ್ಟ್ ತಂಡದ ನಾಯಕತ್ವ ನೀಡಿದ ಬಳಿಕ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಸುದ್ದಿಗೋಷ್ಠಿಯಲ್ಲಿ ಇದನ್ನೇ ಹೇಳಿದ್ದರು. ಆದರೆ ಇದೀಗ ಬುಮ್ರಾ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದು, ಟೆಸ್ಟ್ ತಂಡದ ನಾಯಕತ್ವವನ್ನು ನಾನೇ ನಿರಾಕರಿಸಿದ್ದೆ ಎಂದಿದ್ದಾರೆ.
“ಐಪಿಎಲ್ ನಡುವೆ ರೋಹಿತ್, ಕೊಹ್ಲಿ ನಿವೃತ್ತಿ ಪ್ರಕಟಿಸುವುದಕ್ಕೆ ಮುನ್ನ ನಾನು ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದೆ ಮತ್ತು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾರ್ಯದೊತ್ತಡ ನಿಭಾಯಿಸುವ ಬಗ್ಗೆ ಚರ್ಚಿಸಿದ್ದೆ. ನನಗೆ ಎಲ್ಲ ಟೆಸ್ಟ್ಗಳಲ್ಲಿ ಆಡಲು ಸಾಧ್ಯವಿಲ್ಲದ ಕಾರಣ ನಾಯಕತ್ವದ ಪಾತ್ರ ಬೇಡ ಎಂದಿದ್ದೆ. ಬಿಸಿಸಿಐ ನನಗೆ ನಾಯಕತ್ವ ನೀಡಲು ಸಿದ್ಧವಾಗಿತ್ತು. ಆದರೆ 3 ಪಂದ್ಯಗಳಲ್ಲಿ ನಾನು ನಾಯಕತ್ವ ನಿರ್ವಹಿಸಿ, ಇತರ ಪಂದ್ಯಗಳಲ್ಲಿ ಬೇರೆಯವರು ನಾಯಕರಾಗುವುದು ಸರಿಯಲ್ಲ ಎಂಬುದು ನನ್ನ ನಿಲುವಾಗಿತ್ತು. ತಂಡಕ್ಕೆ ಮೊದಲ ಆದ್ಯತೆ ನೀಡಲು ನಾನು ಬಯಸಿದ್ದೆ’ ಎಂದು ಬುಮ್ರಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.