ಮೊದಲ ಟೆಸ್ಟ್​ನಲ್ಲಿ ಬುಮ್ರಾ ಆಟ ಖಚಿತ: ಭಾರತ ವಿರುದ್ಧದ ಪಂದ್ಯಕ್ಕೆ ಆಂಗ್ಲರ 11ರ ಬಳಗ ಪ್ರಕಟ

blank

ಲೀಡ್ಸ್​: ಭಾರತ ತಂಡದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಫಿಟ್ನೆಸ್​ ಕಾರಣದಿಂದಾಗಿ ಇಂಗ್ಲೆಂಡ್​ ಪ್ರವಾಸದ ಎಲ್ಲ 5 ಟೆಸ್ಟ್​ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಈಗಾಗಲೆ ಘೋಷಿಸಲಾಗಿದೆ. ಅವರು ಸರಣಿಯಲ್ಲಿ 3 ಪಂದ್ಯಗಳನ್ನಷ್ಟೇ ಆಡುವ ನಿರೀಕ್ಷೆ ಇದ್ದು, ಆ 3 ಪಂದ್ಯಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ. ಆದರೆ ಶುಕ್ರವಾರದಿಂದ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್​ನಲ್ಲಿ ಆಡಲಿರುವುದನ್ನು ಸ್ವತ@ ಬುಮ್ರಾ ಖಚಿತಪಡಿಸಿದ್ದಾರೆ.

“ನಾನು 3 ಪಂದ್ಯಗಳಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ಆದರೆ ಯಾವೆಲ್ಲ ಪಂದ್ಯಗಳಲ್ಲಿ ಆಡಲಿದ್ದೇನೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮೊದಲ ಟೆಸ್ಟ್​ನಲ್ಲಂತೂ ಖಂಡಿತವಾಗಿಯೂ ಆಡುವೆ. ನಂತರ ಏನಾಗುವುದು ಎಂಬುದನ್ನು ಕಾದು ನೋಡಬೇಕಿದೆ. ಕಾರ್ಯದೊತ್ತಡ ಮತ್ತು ಪರಿಸ್ಥಿತಿಯನ್ನು ಆಧರಿಸಿ ಉಳಿದಂತೆ ಮತ್ತೆರಡು ಟೆಸ್ಟ್​ಗಳಲ್ಲಿ ಆಡಲಿದ್ದೇನೆ’ ಎಂದು ಬುಮ್ರಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಸರಣಿಯಲ್ಲಿ ಬುಮ್ರಾ ಆಡುವ ಯಾವುದಾದರು ಟೆಸ್ಟ್​ಗೆ ಮಳೆ ಅಡಚಣೆ ತಂದರೆ ಅಥವಾ ಪಂದ್ಯ ಬೇಗನೆ ಮುಗಿದರೆ ಅವರು 3ಕ್ಕಿಂತ ಹೆಚ್ಚು ಟೆಸ್ಟ್​ ಆಡಬಹುದು ಎನ್ನಲಾಗಿತ್ತು. ಆದರೆ ಬುಮ್ರಾ ಆ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಸರಣಿಯಲ್ಲಿ 3ಕ್ಕಿಂತ ಹೆಚ್ಚು ಟೆಸ್ಟ್​ಗಳಲ್ಲಿ ಆಡಬಾರದು ಎಂದು ಬಿಸಿಸಿಐ ವೈದ್ಯಕಿಯ ತಂಡ ತನಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

4,5ರಲ್ಲಿ ಗಿಲ್​, ಪಂತ್​ ಬ್ಯಾಟಿಂಗ್​
ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ನಿವೃತ್ತಿಯಿಂದಾಗಿ ಇಂಗ್ಲೆಂಡ್​ನಲ್ಲಿ ಭಾರತ ಟೆಸ್ಟ್​ ತಂಡದ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಎದ್ದಿರುವ ಗೊಂದಲಗಳಿಗೆ ಉಪನಾಯಕ ರಿಷಭ್​ ಪಂತ್​ ಬುಧವಾರ ಅಲ್ಪಮಟ್ಟಿನ ತೆರೆ ಎಳೆದಿದ್ದಾರೆ. ನಾಯಕ ಶುಭಮಾನ್​ ಗಿಲ್​ 4ನೇ ಮತ್ತು ತಾನು 5ನೇ ಕ್ರಮಾಂಕದಲ್ಲಿ ಆಡಲಿರುವುದನ್ನು ವಿಕೆಟ್​ ಕೀಪರ್​,ಎಡಗೈ ಬ್ಯಾಟರ್​ ಪಂತ್​ ಖಚಿತಪಡಿಸಿದ್ದಾರೆ. ಆದರೆ 3ನೇ ಕ್ರಮಾಂಕದಲ್ಲಿ ಯಾರು ಆಡಬೇಕೆಂದು ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಪಂತ್​ ಹೇಳಿದ್ದಾರೆ. ಯಶಸ್ವಿ ಜೈಸ್ವಾಲ್​ ಜತೆಗೆ ಕನ್ನಡಿಗ ಕೆಎಲ್​ ರಾಹುಲ್​ ಆರಂಭಿಕರಾಗಿ ಆಡುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ.

ಲೀಡ್ಸ್​ನಲ್ಲಿ ಭಾರತ ತಂಡ
ಕೂಡಿಕೊಂಡ ಗಂಭೀರ್​
ಆತಿಥೇಯ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಪೂರ್ವಭಾವಿಯಾಗಿ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಬುಧವಾರ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ತಾಯಿಯ ಅನಾರೋಗ್ಯದಿಂದಾಗಿ ಅವರು ಕಳೆದ ವಾರ ದಿಢೀರ್​ ತವರಿಗೆ ಮರಳಿದ್ದರು. ಲೀಡ್ಸ್​ನಲ್ಲಿ ಮತ್ತೆ ಭಾರತ ತಂಡದ ಅಭ್ಯಾಸದ ಮೇಲ್ವಿಚಾರಣೆ ವಹಿಸಿಕೊಂಡ ಅವರು, ಮೊದಲ ಟೆಸ್ಟ್​ ಪೂರ್ವಸಿದ್ಧತೆಯ ಬಗ್ಗೆ ಚರ್ಚಿಸಿದರು. ಗಂಭೀರ್​ಗೆ ಇದು ಕೋಚ್​ ಆಗಿ 4ನೇ ಟೆಸ್ಟ್​ ಸರಣಿ ಆಗಿದ್ದು, ಕಳೆದೆರಡು ಟೆಸ್ಟ್​ ಸರಣಿಗಳಲ್ಲಿ ನ್ಯೂಜಿಲೆಂಡ್​ ಮತ್ತು ಆಸ್ಟ್ರೆಲಿಯಾ ಎದುರು ಕ್ರಮವಾಗಿ 0&3 ಮತ್ತು 1&3ರಿಂದ ಸೋತ ಹಿನ್ನಡೆ ಹೊಂದಿದ್ದಾರೆ.

ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್​ ಬುಧವಾರವೇ ಆಡುವ 11ರ ಬಳಗವನ್ನು ಘೋಷಿಸಿದೆ. ಆಲ್ರೌಂಡರ್​ ಕ್ರಿಸ್​ ವೋಕ್ಸ್​ ಕಳೆದ ಡಿಸೆಂಬರ್​ ಬಳಿಕ ಮೊದಲ ಬಾರಿ ತಂಡಕ್ಕೆ ಮರಳಿದ್ದರೆ, ವೇಗಿ ಬೆಡನ್​ ಕರ್ಸ್​ ತವರಿನಲ್ಲಿ ಮೊದಲ ಟೆಸ್ಟ್​ ಆಡುವ ಅವಕಾಶ ಪಡೆದಿದ್ದಾರೆ. ಶೋಯಿಬ್​ ಬಶೀರ್​ ತಂಡದಲ್ಲಿರುವ ಏಕೈಕ ಸ್ಪಿನ್ನರ್​ ಆಗಿದ್ದಾರೆ.
ಇಂಗ್ಲೆಂಡ್​ 11ರ ಬಳಗ: ಜಾಕ್​ ಕ್ರೌಲಿ, ಬೆನ್​ ಡಕೆಟ್​, ಒಲಿ ಪೋಪ್​, ಜೋ ರೂಟ್​, ಹ್ಯಾರಿ ಬ್ರೂಕ್​, ಬೆನ್​ ಸ್ಟೋಕ್ಸ್​ (ನಾಯಕ), ಜೇಮಿ ಸ್ಮಿತ್​ (ವಿ.ಕೀ), ಕ್ರಿಸ್​ ವೋಕ್ಸ್​, ಬೆಡನ್​ ಕರ್ಸ್​, ಜೋಶ್​ ಟಂಗ್​, ಶೋಯಿಬ್​ ಬಶೀರ್​.

Share This Article

ಶ್ರಾವಣ ಮಾಸದಲ್ಲಿ ಮನೆಯ ಈ ದಿಕ್ಕಿನಲ್ಲಿ ದೀಪ ಬೆಳಗಿಸಿದರೆ ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ..! Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ಮಾಸ. ಈ ತಿಂಗಳಲ್ಲಿ ಪೂಜೆ, ಉಪವಾಸ ಮತ್ತು ಧ್ಯಾನಕ್ಕೆ…

ಕುಂಬಳಕಾಯಿ ಬೀಜದ ಪ್ರಯೋಜನಗಳೇನು? ಇದು ‘ಹೃದಯ’ಕ್ಕೆ ಉತ್ತಮ, ಇಲ್ಲಿದೆ ಉಪಯುಕ್ತ ಮಾಹಿತಿ | Pumpkin Seeds

Pumpkin Seeds: ಸಾಮಾನ್ಯವಾಗಿ ಕುಂಬಳಕಾಯಿಯಲ್ಲಿ ಹಲವಾರು ರೀತಿಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಕೆಲವರು ಕುಂಬಳಕಾರಿ ಚಟ್ನಿ, ಸಾರು,…