ಆಲೂ ಬೆಳೆಗಾರರಿಗೆ ಬಂಪರ್ ಕೊಡುಗೆ

ಹಾಸನ: ಆಲೂಗಡ್ಡೆ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದ ಬೆಳೆಗಾರರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಪ್ರತಿ ಹೆಕ್ಟೇರ್‌ಗೆ 14,500 ರೂ. ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರ ಪ್ರಯತ್ನದ ಫಲವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟವಾಗಿದ್ದು ಹತ್ತಾರು ವರ್ಷದಿಂದ ನಷ್ಟವನ್ನೇ ಅನುಭವಿಸುತ್ತಿದ್ದ ಆಲೂಗಡ್ಡೆ ಬೆಳೆಗಾರರಿಗೆ ಪ್ರೋತ್ಸಾಹಧನ ಜೀವದಾನ ನೀಡಲಿದೆ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಆಲೂಗಡ್ಡೆ ಬೆಳೆಗಾರರಿದ್ದು 12.50 ಕೋಟಿ ರೂ. ಅನುದಾನ ಲಭ್ಯವಾಗಲಿದೆ.

8623 ಹೆಕ್ಟೇರ್‌ನಲ್ಲಿ ಬಿತ್ತನೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಪ್ರಮಾಣ ಈ ವರ್ಷ ಕಡಿಮೆಯಾಗಿದೆ. ಕಳೆದ ಬಾರಿ 13 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಆಲೂ ಮಳೆ ಕೊರತೆಯಿಂದಾಗಿ 8623 ಹೆಕ್ಟೇರ್‌ಗೆ ಸೀಮಿತಗೊಂಡಿದೆ. ಮೇ ಮೊದಲ ವಾರದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಬೇಕಿತ್ತಾದರೂ ಒಂದೇ ಒಂದು ಹದ ಮಳೆಯಾಗದ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕಿದರು. ಮೇ 16 ರಿಂದ ಹಾಸನದ ಎಪಿಎಂಸಿ ಆವರಣದಲ್ಲಿ ಬಿತ್ತನೆ ಆಲೂಗಡ್ಡೆ, ರಸಗೊಬ್ಬರ ಹಾಗೂ ಕ್ರಿಮಿನಾಶಕ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು.

ಹಾಸನದಲ್ಲಿ ಅಧಿಕ ಬಿತ್ತನೆ:
ಆಲೂರು ತಾಲೂಕಿನಾದ್ಯಂತ 83 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯಾಗಿದ್ದು, ಅರಕಲಗೂಡಿನಲ್ಲಿ 1230, ಅರಸೀಕೆರೆ 900, ಬೇಲೂರು 440, ಚನ್ನರಾಯಪಟ್ಟಣ 475, ಹೊಳೆನರಸೀಪುರ ತಾಲೂಕಿನಲ್ಲಿ 395 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹಾಸನ ತಾಲೂಕಿನಲ್ಲಿ 5100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಫಲಾನುಭವಿಗಳ ಆಯ್ಕೆ ಹೇಗೆ ?: ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ಖರೀದಿಸಿರುವ ರೈತರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿವರ ಪಡೆದಿದ್ದು, ಅದರ ಅನುಸಾರ ಜಮೀನುಗಳಿಗೆ ಭೇಟಿ ನಡೆಸುತ್ತಿದ್ದಾರೆ.

ಇಲಾಖೆಯಿಂದಲೇ ’ಫ್ರೂೃಟ್’ ಎಂಬ ಆ್ಯಪ್ ರೂಪಿಸಿದ್ದು ಅದರಲ್ಲಿ ರೈತರ ಎಲ್ಲ ಮಾಹಿತಿ ದಾಖಲಾಗಿರುತ್ತದೆ. ಜಮೀನಿಗೆ ಭೇಟಿ ನೀಡುವ ಅಧಿಕಾರಿಗಳ ತಂಡ ಆಲೂಗಡ್ಡೆ ಬಿತ್ತನೆ ಪ್ರಮಾಣ, ಗುಣಮಟ್ಟವನ್ನು ಪರಿಶೀಲಿಸಿ ಪ್ರೋತ್ಸಾಹ ಧನ ಮಂಜೂರು ಮಾಡುತ್ತಾರೆ. ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗುತ್ತದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಜಮೀನು ಪರಿಶೀಲನೆ ಪ್ರಾರಂಭಿಸಿದ್ದಾರೆ.

ಸತತ ನಷ್ಟದಲ್ಲಿ ಬೆಳೆಗಾರರು:
ಆಲೂಗಡ್ಡೆ ಬೆಳೆ ಐದಾರು ವರ್ಷದಿಂದ ನಷ್ಟಕ್ಕೊಳಗಾಗಿದೆ. ಇಷ್ಟು ವರ್ಷ ದೃಢೀಕೃತ ಆಲೂಗಡ್ಡೆ ಖರೀದಿಸಿದವರಿಗೆ ಮಾತ್ರ ಶೇ. 50 ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.

ಆದರೆ ಸರ್ಟಿಫೈಡ್ ಆಲೂಗಡ್ಡೆ ದುಬಾರಿಯಾದ್ದರಿಂದ ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗೆ ಬಳಸಿಕೊಳ್ಳುತ್ತಿದ್ದರು. ಅದು ಮಳೆ ಕೊರತೆ ಅಥವಾ ಅಧಿಕ ಮಳೆಯಿಂದ ಭೂಮಿಯಲ್ಲೇ ಕರಗಿ ನಷ್ಟವುಂಟು ಮಾಡುತ್ತಿತ್ತು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಬಿತ್ತನೆ ಆಲೂಗಡ್ಡೆ ಜತೆಗೆ ಕ್ರಿಮಿನಾಶಕ ಹಾಗೂ ರಸಗೊಬ್ಬರವನ್ನು ಸ್ಥಳದಲ್ಲೇ ವಿತರಿಸಿದ್ದರಿಂದ ರೈತರಿಗೆ ಅನುಕೂಲವಾಗಿದೆ.

ರೇವಣ್ಣ ಕಾರ್ಯದಕ್ಷತೆ:
ಸರ್ಕಾರ ಪತನದಂಚಿಗೆ ತಲುಪಿರುವ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿರುವ ಸಚಿವ ರೇವಣ್ಣ ಅವರ ಕಾರ್ಯದಕ್ಷತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಆಲೂಗಡ್ಡೆ ಬೆಳೆಗೆ 12.50 ಕೋಟಿ ರೂ. ಪ್ರೋತ್ಸಾಹ ಧನ ಮಾತ್ರವಲ್ಲದೆ ತಾಲೂಕಿನ ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭ ಹಾಗೂ ಕಾಚೇನಹಳ್ಳಿ ಮೂರನೇ ಹಂತದ ಯೋಜನೆಗೆ 141 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ಆಲೂಗಡ್ಡೆ ಬಿತ್ತನೆ ಪ್ರದೇಶ ಪರಿಶೀಲನೆ ಪ್ರಾರಂಭಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಪ್ರೋತ್ಸಾಹ ಧನ ವಿತರಿಸಲಾಗುವುದು. ಬಿತ್ತನೆ ಆಲೂಗಡ್ಡೆ ವಿತರಣೆ ವೇಳೆ ಎಲ್ಲ ರೈತರ ಮಾಹಿತಿ ಪಡೆಯಲಾಗಿದೆ.
ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

Leave a Reply

Your email address will not be published. Required fields are marked *