ವಿಜಯಪುರ: ಜಾತ್ರೆಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಆದರೆ, ರೈತರು ಬಸವಣ್ಣ ಎಂದು ಪೂಜಿಸುವ ಎತ್ತುಗಳಿಗೆ ನೋವುಂಟು ಮಾಡುವಂತಹ ಓಟಗಳ ಆಯೋಜನೆಯನ್ನು ತಡೆಯಬೇಕು ಎಂದು ವಿಪ ಸದಸ್ಯ ಶಾಸಕ ಸುನೀಲಗೌಡ ಪಾಟೀಲ ಸಲಹೆ ಮಾಡಿದರು.
ಬುಧವಾರ ತಿಕೋಟಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಲಕ್ಷ್ಮಿದೇವಿ ಮತ್ತು ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಲ್ಲಿನ ಜನತೆ ಜಾತ್ರೆಗಳನ್ನು ಶ್ರದ್ಧಾ ಭಕ್ತಿ, ವಿಜೃಂಭಣೆ ಮತ್ತು ಸಾಮರಸ್ಯದಿಂದ ಆಚರಿಸುತ್ತಾರೆ ಎಂದರು.
ರೈತರು ಸಾಕುಪ್ರಾಣಿಗಳನ್ನು ಕುಟುಂಬ ಸದಸ್ಯರಂತೆ ಕಾಣುತ್ತೇವೆ. ಅಲ್ಲದೆ, ಎತ್ತುಗಳನ್ನು ಬಸವಣ್ಣನವರ ಪ್ರತಿರೂಪ ಎಂದು ಪೂಜಿಸುತ್ತೆವೆ. ಮತ್ತೊಂದೆಡೆ ರೇಸ್ ಆಯೋಜಿಸುವ ಮೂಲಕ ಮೂಕ ಪ್ರಾಣಿಗಳಿಗೆ ನೋವು ಉಂಟು ಮಾಡಲಾಗುತ್ತದೆ. ಅವುಗಳ ಮೂಕರೋಧನೆ ಅರ್ಥ ಮಾಡಿಕೊಂಡು ಅಂತಹ ಆಚರಣೆಗಳನ್ನು ಕೈಬಿಡಬೇಕು ಎಂದ ಅವರು, ಬೇಕಿದ್ದರೆ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾಕೂಟಗಳನ್ನು ಆಯೋಜಿಸಿ ಎಂದು ಅವರು ಸಲಹೆ ನೀಡಿದರು.
ಶಾಸಕರ ಮಾತಿಗೆ ಸ್ಪಂದಿಸಿದ ಜಾತ್ರೆ ಸಮಿತಿಯ ಸದ್ಯಸರು ಮುಂದಿನ ಜಾತ್ರೆಯಿಂದ ಎತ್ತುಗಳ ಓಟವನ್ನು ಆಯೋಜಿಸುವುದಿಲ್ಲ ಎಂದು ವೇದಿಕೆಯಲ್ಲಿಯೇ ಪ್ರಕಟಿಸಿದರು. ನಂತರ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳಿಗೆ ಸುನೀಲಗೌಡ ಪಾಟೀಲ ಶುಭ ಕೋರಿದರು.
ಗುರುಪ್ರಸಾದ ಮಹಾಸ್ವಾಮಿಗಳು, ಶಿವಬಸವ ಶಿವಾಚಾರ್ಯ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮುಖಂಡರಾದ ವಿ.ಎಂ. ಪಾಟೀಲ, ಸಿ.ಬಿ. ಪಾಟೀಲ, ನಿಂಗಪ್ಪ ಗುರ್ಕಿ, ಸಿದ್ಧರಾಮಯ್ಯ ಲಕ್ಕುಂಡಿಮಠ, ಸಂಗಮೇಶ ತಾಳಿಕೋಟಿ, ಪ್ರಭು ತಾಳಿಕೋಟಿ, ಮಹೇಶ ಗಣಿ, ಚನ್ನಪ್ಪ ಕೋರಿ, ಪ್ರಭಾವತಿ ನಾಟಿಕಾರ, ಸಿದ್ದರಾಮ ಪೂಜಾರಿ, ರಾಮು ಹೊನವಾಡ, ರಾವತ ಕಂಬಾರ, ಸದಾಶಿವ ಮಂಗಸೂಳಿ, ನಾಗೇಂದ್ರ ಕೋಷ್ಠಿ ಮತ್ತಿತರರಿದ್ದರು.