ಬುಲಂದ್​ಶಹರ್​ ಗಲಭೆ: ಪ್ರಮುಖ ಆರೋಪಿ ಯೋಗೇಶ್​ ರಾಜ್ ಬಂಧನ

ಬುಲಂದ್​ಶಹರ್​: ಉತ್ತರಪ್ರದೇಶದ ಬುಲಂದ್​ಶಹರ್​ ಗಲಭೆಯಲ್ಲಿ ಇನ್ಸ್​ಪೆಕ್ಟರ್​ ಸುಬೋಧ್​ ಕುಮಾರ್​ ಸಿಂಗ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಪ್ರಮುಖ ಆರೋಪಿಯಾಗಿದ್ದ ಯೋಗೇಶ್​ ರಾಜ್​ನನ್ನು ಬಂಧಿಸಿದ್ದಾರೆ.

ಉತ್ತರಪ್ರದೇಶದ ಖುರ್ಜಾ ಎಂಬಲ್ಲಿ ಪೊಲೀಸರು ಬಜರಂಗದಳ ಕಾರ್ಯಕರ್ತ ಯೋಗೇಶ್​ನನ್ನು ಬಂಧಿಸಲಾಗಿದೆ. ಕಳೆದ ವರ್ಷ ಡಿ.3ರಂದು ಗಲಭೆ ನಡೆದಿತ್ತು. ಇನ್ಸ್​ಪೆಕ್ಟರ್​ ಜತೆ ಗಲಭೆಯಲ್ಲಿ ಸುಮಿತ್​ ಕುಮಾರ್​ ಎಂಬ ಯುವಕ ಮೃತಪಟ್ಟಿದ್ದ. ಹಲವರು ಗಾಯಗೊಂಡಿದ್ದರು.

ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಬುಲಂದ್​ಶಹರ್​ನಲ್ಲಿ ಗಲಭೆ ಎಬ್ಬಿಸಲು ಕಾರಣನಾಗಿದ್ದ ಯೋಗೇಶ್​ನನ್ನು ಬಂಧಿಸಲು ಪೊಲೀಸರು ಗಲಭೆ ನಡೆದ ದಿನದಿಂದಲೂ ಹುಡುಕಾಟ ನಡೆಸಿದ್ದರು.

ಘಟನೆ ಕುರಿತಂತೆ ದಾಖಲಾಗಿದ್ದ ಎಫ್​ಐಆರ್​ನಲ್ಲಿ 50 ರಿಂದ 60 ಅನಾಮಧೇಯ ವ್ಯಕ್ತಿಗಳ ಜತೆ 27 ಜನರ ಹೆಸರನ್ನು ನಮೂದಿಸಲಾಗಿತ್ತು. ಬಂಧಿತ ಯೋಗೇಶ್​ ರಾಜ್​ ಜತೆ ಬಿಜೆಪಿ ನಾಯಕರಾದ ಶಿಖರ್​ ಅಗರ್ವಾಲ್​, ವಿಎಚ್​ಪಿ ಕಾರ್ಯಕರ್ತ ಉಪೇಂದ್ರ ರಾಘವ್​ ಹೆಸರೂ ಪ್ರಮುಖ ಆರೋಪಿ ಪಟ್ಟಿಯಲ್ಲಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ರಾತ್ರಿ ಕುಲುವಾ ಎಂಬ ಆರೋಪಿಯನ್ನು ಔರಂಗಾಬಾದ್​ನಲ್ಲಿ ಬಂಧಿಸಿದ್ದರು. ಬುಲಂದ್​ಶಹರ್​ ಗಲಭೆಯಲ್ಲಿ ಹತ್ಯೆಗೊಂಡ ಇನ್ಸ್​ಪೆಕ್ಟರ್​ ಸಿಂಗ್​ ಅವರ ಹೆಬ್ಬೆಟ್ಟನ್ನು ಕೊಡಲಿಯಿಂದ ಕತ್ತರಿಸಿದ್ದ ಎಂಬುದು ಮೊಬೈಲ್​ ವಿಡಿಯೋಗಳಿಂದ ತಿಳಿದುಬಂದಿತ್ತು. (ಏಜೆನ್ಸೀಸ್)