ಬುಲಂದ್​ಶಹರ್​ ಗಲಭೆ: ಇನ್​ಸ್ಪೆಕ್ಟರ್​ರನ್ನು ಕೊಂದ ಇಬ್ಬರು ಆರೋಪಿಗಳ ಬಂಧನ

ಬುಲಂದ್​ಶಹರ್​( ಉತ್ತರ ಪ್ರದೇಶ): ಕಸಾಯಿಖಾನೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸೋಮವಾರ ದೊಂಬಿ ಗಲಭೆಗೆ ಸಿಲುಕಿ ಮೃತಪಟ್ಟ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೀರತ್​ನ ಅಡಿಷನಲ್​ ಡೈರೆಕ್ಟರ್​ ಜೆನರಲ್​ ಪ್ರಶಾಂತ್​ ಕುಮಾರ್​ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮೃತ ಅಧಿಕಾರಿಯ ಅಂತ್ಯಸಂಸ್ಕಾರದ ನಂತರ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ನಿನ್ನೆ ಬುಲಂದ್​ಶಹರ್​ ಗಲಭೆಯಲ್ಲಿ ಮೃತಪಟ್ಟ ಸುಬೋಧ್​ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.

ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರನ್ನು ಬಂಧಿಸಲಾಗುತ್ತದೆ. ಕರ್ತವ್ಯದ ವೇಳೆ ಮೃತಪಟ್ಟ ಪೊಲೀಸ್​ ಅಧಿಕಾರಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ. ಇದನ್ನು ಹೊರತುಪಡಿಸಿ ಅವರ ಪತ್ನಿಗೆ ಪೆನ್ಷನ್​ ವ್ಯವಸ್ಥೆ ಮತ್ತು ನಿಯಮದ ಅನುಸಾರ ಮನೆಯ​ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದರು.

ಎಸ್​ಐಟಿ ರಚನೆ
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್​ಐಟಿ) ರಚಿಸಲಾಗಿದ್ದು, ಘಟನೆ ನಡೆದದ್ದು ಹೇಗೆ? ಪ್ರತಿಭಟನಾನಿರತ ಗುಂಪು ಇದ್ದಕ್ಕಿದ್ದ ಹಾಗೆ ಸಂಘರ್ಷಕ್ಕಿಳಿದಿದ್ದು ಏಕೆ? ಇನ್​ಸ್ಪೆಕ್ಟರ್​ ಜತೆ ಘಟನೆ ನಡೆದ ಸಂದರ್ಭದಲ್ಲಿ ಎಷ್ಟು ಜನರಿದ್ದರು? ಯಾರಾದರೂ ಸ್ಥಳದಿಂದ ಪಲಾಯನ ಮಾಡಿದ್ದಾರಾ? ಎಂಬೆಲ್ಲಾ ವಿಷಯಗಳ ಕುರಿತು ಎಸ್​ಐಟಿ ಮಾಹಿತಿ ಕಲೆಹಾಕುತ್ತಿದೆ ಎಂದರು. (ದಿಗ್ವಿಜಯ ನ್ಯೂಸ್​)

ಕಸಾಯಿಖಾನೆ ವಿರುದ್ಧ ಹೋರಾಡುತ್ತಿದ್ದವರ ದಾಳಿಗೆ ಪೊಲೀಸ್​ ಅಧಿಕಾರಿ ಸೇರಿ ಇಬ್ಬರ ಬಲಿ