ಸವದತ್ತಿ: ದಿನಗೂಲಿಯಿಂದ ಉಪಜೀವನ ನಡೆಸುವ ಕಟ್ಟಡ ಕಾರ್ಮಿಕರು ನಿಜವಾದ ಶ್ರಮಜೀವಿಗಳಾಗಿದ್ದು, ಸರ್ಕಾರದಿಂದ ಸೌಲಭ್ಯ ನೀಡಲು ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಗುರ್ಲಹೊಸೂರನ ರಾಜಾರಾಮ ಮಠದಲ್ಲಿ ಬುಧವಾರ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಮತ್ತು ತಾಲೂಕ ಘಟಕ ಉದ್ಘಾಟಿಸಿ ಮಾತನಾಡಿದರು. ಕಟ್ಟಡಗಳ ನಿರ್ಮಾಣ ಸಹ ಅಭಿವೃದ್ಧಿ ಕೆಲಸವಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೆ ದಿನಗೂಲಿಯಿಂದ ಉಪಜೀವನ ನಡೆಸುತ್ತಾರೆ. ದಿನವಿಡಿ ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಅತ್ಯಂತ ಕಷ್ಟ ಅನುಭವಿಸಿದ್ದಾರೆ. ಕಾರ್ಮಿಕರ ಸಂಘಟನೆಯ ಬಲ ಪಡಿಸಬೇಕು. ಕ್ಷೇತ್ರದ ಶಾಸಕನಾಗಿ ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ ತ್ವರಿತವಾಗಿ ಸ್ಪಂದಿಸಿ ಸರ್ಕಾರದ ಸೌಲಭ್ಯ ನೀಡಲಾಗುವುದು ಎಂದರು.
ರಾಜಾರಾಮ್ ಮಠದ ಗಂಗಾಧರ ದೀಕ್ಷಿತರು ಸಾನ್ನಿಧ್ಯ ವಹಿಸಿದ್ದರು. ವಿಜಯಕುಮಾರ ಹಡಪದ, ಎಲ್.ಎಸ್. ನಾಯಕ, ರಾಜಶೇಖರ ಕಾರದಗಿ, ಚಂದ್ರು ಶಾಮರಾಯನವರ, ಶಂಕರಯ್ಯಜ್ಜ ಪಾಟೀಲ, ಬಿ.ಎನ್.ಪ್ರಭುನವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ಮಲ್ಲಿಕಾರ್ಜುನ ಬೇವೂರು, ರಮೇಶ ಅನಿಗೋಳ, ಷಣ್ಮುಖಗೌಡ ಪಾಟೀಲ, ಮಹೇಶ ಬಾಗೋಜಿ, ಭೂಪಾಲ ಭಾಂಡೆಕರ, ಮಹಾಂತೇಶ ಶಿಂತ್ರಿ, ಯಲ್ಲಪ್ಪ ಉಪ್ಪಾರ, ಬಸವರಾಜ ಹಡಪದ ಇತರರು ಇದ್ದರು.