ಸಂಕಷ್ಟದಲ್ಲಿ ಕಟ್ಟಡ ಕಾರ್ವಿುಕರು

ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದಲ್ಲಿ ಯಥೇಚ್ಛವಾಗಿ ಮರಳಿನ ಸಂಗ್ರಹವಿದ್ದರೂ, ಸಮರ್ಪಕ ಮರಳಿನ ಪೂರೈಕೆ ಇಲ್ಲದೇ ಅಭಿವೃದ್ಧಿ ಕಾಮಗಾರಿಗಳು, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಕಾರ್ವಿುಕರ ಸ್ಥಿತಿಯಂತೂ ಹೇಳತೀರದಾಗಿದೆ.

ಜಿಲ್ಲೆಯಲ್ಲಿ ಮರಳು ನೀತಿ ಸಂಪೂರ್ಣ ಸ್ಥಗಿತಗೊಂಡಿದ್ದು, ತಾಲೂಕಿನ ಐರಣಿ ಮತ್ತು ಹಿರೇಬಿದರಿ ಯಾರ್ಡ್​ಗಳಿಂದ ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಮರಳು ವಿತರಣೆ ಮಾಡಲಾಗುತ್ತಿದೆ. ಉಳಿದಂತೆ ಯಾವುದೇ ಯಾರ್ಡ್​ಗಳಲ್ಲೂ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಳ್ಳದೇ, ತಾಲೂಕಿನಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗುತ್ತಿದೆ.

ಅಭಿವೃದ್ಧಿ ಕಾಮಗಾರಿಗಳು ಸ್ಥಗಿತ: ಮರಳು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ, ತಾಲೂಕಿನ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿದೆ. ಜತೆಗೆ ಮನೆ ನಿರ್ವಣದ ಕನಸು ಹೊತ್ತ ಮಾಲೀಕರಿಗಂತೂ ಸಮಸ್ಯೆ ಬಿಗಡಾಯಿಸಿದೆ. ಕಟ್ಟಡ ನಿರ್ಮಾಣ ಉದ್ಯಮವೂ ತೀವ್ರ ಸಂಕಷ್ಟಕ್ಕೀಡಾಗಿದ್ದು, ಕಟ್ಟಡ ಕಾರ್ವಿುಕರ ಬದುಕು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಜತೆಗೆ ಜನಸಾಮಾನ್ಯರೂ ಕೂಡ ಸಮಸ್ಯೆಗೊಳಗಾಗಿದ್ದಾರೆ. ಮತ್ತೊಂದೆಡೆ ಅಕ್ರಮ ಮರಳುಗಾರಿಕೆ ನಡೆಸುವವರು ವಿಪರೀತ ದರ ನಿಗದಿಪಡಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ದಂಧೆಕೋರರಿಗೆ ರಹದಾರಿ: ಜನತೆಗೆ ಎದುರಾಗಿರುವ ಮರಳಿನ ಅಭಾವವನ್ನು ಅಕ್ರಮ ಮರಳು ಸಾಗಾಣೆದಾರರು ಬಂಡವಾಳವನ್ನಾಗಿಸಿಕೊಂಡಿದ್ದಾರೆ. ಒಂದು ಲೋಡ್ ಟಿಪ್ಪರ್ ಮರಳಿಗೆ 40ರಿಂದ 45 ಸಾವಿರ ಹಾಗೂ ಮಜ್ಡಾ ವಾಹನಕ್ಕೆ 25ರಿಂದ 27 ಸಾವಿರ ರೂ. ವರೆಗೆ ವಸೂಲಿ ಮಾಡುತ್ತಿದ್ದಾರೆ. ನೆರೆಯ ಜಿಲ್ಲೆಗಳಿಂದ ಪರ್ವಿುಟ್ ಪಡೆದು ಸ್ಥಳೀಯವಾಗಿ ನಿಯಮ ಬಾಹಿರವಾಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಿಂದ ಎರಡ್ಮೂರು ಟ್ರಿಪ್ ಮರಳು ಸಾಗಾಣಿಕೆ ನಡೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇತ್ತೀಚಿಗೆ ಗ್ರಾಮೀಣ ಠಾಣೆಯ ಪೊಲೀಸರು ಮಜ್ಡಾ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ದಂಧೆಕೋರರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಸಹ ಸಾಧ್ಯವಾಗುತ್ತಿಲ್ಲ.

ಕಾರ್ವಿುಕರ ಬದುಕು ಅತಂತ್ರ: ಕಟ್ಟಡ ನಿರ್ಮಾಣ ಕಾಮಗಾರಿಯಿಂದಲೇ ಬದುಕು ಕಟ್ಟಿಕೊಂಡಿರುವ ತಾಲೂಕಿನ ಸುಮಾರು 6 ಸಾವಿರ ಕಾರ್ವಿುಕರ ಬದುಕು ಹೇಳ ತೀರದಾಗಿದೆ. ತುತ್ತು ಅನ್ನಕ್ಕಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ವಣವಾಗಿದ್ದು, ಕೆಲವರು ಗುಳೇ ಹೋಗುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಕಳೆದ ಸುಮಾರು ಆರು ತಿಂಗಳಿನಿಂದ ಕಟ್ಟಡ ಕಾರ್ವಿುಕರಿಗೆ ಕೆಲಸವೇ ಇಲ್ಲದಂತಾಗಿದೆ. ಇನ್ನುಳಿದಂತೆ ನಿರ್ಮಾಣ ಹಂತದಲ್ಲಿರುವ ಮಾಲೀಕರು ಎಂ ಸ್ಯಾಡ್​ಗೆ ಒಪ್ಪುತ್ತಿಲ್ಲ.

ಮರುಳು ಮಾಡಿದ ಸಚಿವ ಶಂಕರ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಜೆಪಿ ಅಭ್ಯರ್ಥಿಯಾಗಿದ್ದ ಆರ್. ಶಂಕರ ಚುನಾವಣಾ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮರಳು ಲಭಿಸುವಂತೆ ಮಾಡುತ್ತೇನೆ ಎಂದಿದ್ದರು. ಇದನ್ನೇ ಚುನಾವಣೆಯ ಪ್ರಮುಖ ಅಸ್ತ್ರವಾನ್ನಾಗಿಸಿ ನದಿ ಪಾತ್ರ ಗ್ರಾಮಗಳ ಹಾಗೂ ನಗರದ ಮತದಾರರು ಹಾಗೂ ಕಟ್ಟಡ ಕಾರ್ವಿುರನ್ನು ಸೆಳೆದಿದ್ದರು. ಇದು ಕೆ.ಬಿ. ಕೋಳಿವಾಡ ಅವರಿಗೂ ಕೊಂಚ ಹಿನ್ನಡೆಯಾಯಿತು. ಆದರೆ, ಚುನಾವಣೆಯಲ್ಲಿ ಆರಿಸಿ ಬಂದು, ರಾಜ್ಯ ಸರ್ಕಾರದ ಸಚಿವ ಸ್ಥಾನಗಳಿಸಿದರೂ ಶಂಕರ ಮಾತ್ರ ತಾವು ನೀಡಿದ ಆಶ್ವಾಸನೆಯನ್ನೇ ಮರೆತಂತಿದೆ. ಮರಳು ನೀಡುತ್ತೇನೆಂದ ಸಚಿವ ಶಂಕರ ಜನರನ್ನು ‘ಮರುಳು ಮಾಡಿದರು’ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತಾಲೂಕಿನಲ್ಲಿ ತಲೆದೋರಿರುವ ಕೃತಕ ಮರಳಿನ ಅಭಾವ ನಿವಾರಣೆಯಾಗಬೇಕು. ಸಮರ್ಪಕವಾಗಿ ಮರಳು ಪೂರೈಕೆಯಾಗಿ ಕಾರ್ವಿುಕರಿಗೆ ಕೂಲಿ ಸಿಗುವಂತಾಗಬೇಕು. ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಠಿತವಾಗಿದೆ. ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಮುಂದಿನ ಹದಿನೈದು ದಿನದೊಳಗಾಗಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

| ಹುಚ್ಚಪ್ಪ ಕುಸಗೂರ, ಅಧ್ಯಕ್ಷರು, ತಾಲೂಕು ಕಟ್ಟಡ ಕಾರ್ವಿುಕರ ಸಂಘ

ಮರಳು ದೊರೆಯದೇ ಇರುವುದರಿಂದ ಟೈಲ್ಸ್ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಕಾರ್ವಿುಕರು ಹತ್ತಿ ಬಿಡಿಸುವುದು, ಇತರೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಅವರ ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿಯನ ಸಣ್ಣ ಪುಟ್ಟ ಆಭರಣಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

| ಅಫ್ಜಲ್ ಗುಲ್ಬರ್ಗಾ, ಕಾರ್ಯದರ್ಶಿ, ತಾಲೂಕು ಕಟ್ಟಡ ಕಾರ್ವಿುಕರ ಸಂಘ